ಹಾಸನ ಜಿಲ್ಲೆಯ ಆಲೂರು ತಾಲ್ಲೂಕು ರಾಜನಹಳ್ಳಿಯಲ್ಲಿ ಪ. ಜಾತಿಗೆ ಸೇರಿದ ವ್ಯಕ್ತಿಯನ್ನು ಬರ್ಬರ ಹತ್ಯೆ ಖಂಡಿಸಿ, ಹಾಗೂ ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸಿ, ಹತ್ಯೆಗೈದವರನ್ನು ಶಿಕ್ಷೆಗೆ ಗುರಿಪಡಿಸಿ, ವ್ಯಕ್ತಿಯ ಕುಟುಂಬಕ್ಕೆ ನ್ಯಾಯಕ್ಕಾಗಿ ಸಿಐಟಿಯು,ಡಿಎಚ್ ಎಸ್, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಬರ್ಬರವಾಗಿ ಹತ್ಯೆಯಾದ ವ್ಯಕ್ತಿ ವೀರಪ್ಪ (58), ಫೆ. 17ರಂದು ಕೆ.ಎಸ್.ಆರ್.ಟಿ.ಸಿ. ಚಾಲಕರಾಗಿದ್ದರು. ಆರ್.ಡಿ. ವೀರಪ್ಪ ರವರನ್ನು ಅವರ ಜಮೀನಿನಲ್ಲೇ ಹತ್ಯೆಗೈದು ಅತ್ಯಂತ ಬರ್ಬರವಾಗಿ ಪೆಟ್ರೋಲ್ ಹಾಕಿ ಸುಟ್ಟುಹಾಕಿರುವ ಪ್ರಕರಣ ಇಡೀ ಜಿಲ್ಲೆಯನ್ನೆ ಬೆಚ್ಚಿಬೀಳಿಸಿರುವ ಹಾಗೂ ಕಂಡು ಕೇಳಿರದ ಅತ್ಯಂತ ಅಮಾನುಷ ಘಟನೆಯಾಗಿದೆ. ಇಂತಹ ಬರ್ಬರ ಘಟನೆ ನಡೆದು 15 ದಿನಗಳು ಕಳೆಯುತ್ತಾ ಬಂದರೂ ಈ ಪ್ರಕರಣದ ತನಿಖೆ ಅತ್ಯಂತ ನಿಧಾನಗತಿಯಲ್ಲಿದ್ದು, ಹತ್ಯೆಗೈದಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳದಿರುವುದು ಪೊಲೀಸ್ ತನಿಖೆಯ ಮೇಲೆಯೇ ಅನುಮಾನಗಳನ್ನು ಮೂಡಿಸುತ್ತಿದೆ. ಜೊತೆಗೆ ಇದು ಕೃತ್ಯ ನಡೆಸಿದವರು ಕಾನೂನನ್ನೂ ಕಣ್ಮರೆಸಿ ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ.
ಈ ಹತ್ಯೆ ಪ್ರಕರಣ ಮೇಲ್ನೊಟಕ್ಕೆ ಆಸ್ತಿ ವಿವಾದಕ್ಕೆ ದಾಯಾದಿಗಳು ಹತ್ಯೆ ಮಾಡಿರಬಹುದೆಂದು ಕಂಡರೂ ವೀರಪ್ಪರವರನ್ನು ಈ ರೀತಿಯಾಗಿ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿರುವುದನ್ನು ನೋಡಿದರೆ ಇದೊಂದು ವ್ಯವಸ್ಥಿತ ಪಿತೂರಿಯನ್ನು ರೂಪಿಸಿ ಸಂಚುಮಾಡಿ ಹತ್ಯೆ ಮಾಡಿರುವಂತಿದೆ. ವೀರಪ್ಪ ಅವರ ಹತ್ಯೆಯ ಹಿಂದೆ ಮೇಲ್ಜಾತಿಗೆ ಸೇರಿದ ಹಾಗೂ ಆರ್ಥಿಕ ಮತ್ತು ರಾಜಕೀಯ ಪ್ರಭಾವ ಹೊಂದಿರುವ ಕಾಣದ ಕೈಗಳು ಸೇರಿ ಅತ್ಯಂತ ವ್ಯವಸ್ಥಿಯವಾಗಿ ಸಂಚು ನಡೆಸಿ ಕೃತ್ಯ ನಡೆಸಿರಬಹುದೆಂಬಂತೆ ಅನುಮಾನ ನಮಗಿದೆ.
ಆದ್ದರಿಂದ ಪೊಲೀಸ್ ಇಲಾಖೆಯು ಸಮಗ್ರವಾಗಿ ಎಲ್ಲಾ ಆಯಾಮಗಳಲ್ಲೂ ಅತ್ಯಂತ ತ್ವರಿತಗತಿಯಲ್ಲಿ ತನಿಖೆ ನಡೆಸಬೇಕು. ಮತ್ತು ಸರ್ಕಾರವು ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೂ ಶಿಫಾರಸ್ಸು ಮಾಡುವ ಮೂಲಕ ಹತ್ಯೆಗೈದವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಈ ಮೂಲಕ ಆಗ್ರಹ ಪಡಿಸುತ್ತಾ ವೀರಪ್ಪ ಅವರ ಸಾವು ಮತ್ತು ಅವರ ಕುಟುಂಬಕ್ಕೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿ ಮನವಿ ಮಾಡುತ್ತೇವೆ. ತನಿಖೆಯನ್ನು ತೀವ್ರಗೊಳಿಸಿ ತಪ್ಪಿತಸ್ಥರನ್ನು ಕೂಡಲೇ ಬಂದಿಸದಿದ್ದಲ್ಲಿ ವೀರಪ್ಪನವರ ಸಾವಿಗೆ ನ್ಯಾಯ ಸಿಗುವವರೆಗೂ ತೀವ್ರವಾದ ಬೃಹತ್ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಈ ಮೂಲಕ ಸಿಐಟಿಯು, ಡಿಎಚ್ ಎಸ್, ಮಾದಿಗ ದಂಡೂರ ಮೀಸಲಾತಿ ಹೋರಾಟ ಸಮಿತಿಯಿಂದ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ಪೆಟ್ರೋಲ್ ಸುರಿದು ಸಾರಿಗೆ ನೌಕರನ ಬರ್ಬರ ಹತ್ಯೆ
ಈ ವೇಳೆ ಧರ್ಮೇಶ್ ಸಿಐಟಿಯು, ಟಿ.ಆರ್ ವಿಜಯ್ ಕುಮಾರ್, ಪೃಥ್ವಿ ಎಂ.ಜಿ, ರಾಜಶೇಖರ್ ಹುಲಿಕಲ್, ನಾರಾಯಣದಾಸ್, ಎಚ್ ಆರ್ ನವೀನ್ ಕುಮಾರ್, ರಾಜು ಗೊರೂರು, ಕೃಷ್ಣದಾಸ್, ಅಂಬುಗ ಮಲ್ಲೇಶ್ ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.





