ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಿರಿ, ವಿ.ಬಿ. ಜಿರಾಮ್ ಜಿ, ವಿಮಾ ತಿದ್ದುಪಡಿ ಕಾಯ್ದೆ, ಶಾಂತಿ ಕಾಯ್ದೆ ರದ್ದುಗೊಳಿಸಿ. ವಿದ್ಯುಚ್ಛಕ್ತಿ ತಿದ್ದುಪಡಿ, ಬೀಜ ಮಸೂದೆ, ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಲು ಒತ್ತಾಯಿಸಿ. ಕರ್ನಾಟಕ ಸರ್ಕಾರ ಕಾರ್ಮಿಕ ಸಂಹಿತೆಗಳಿಗೆ ಸೇವಾ ನಿಯಮಾವಳಿಗಳನ್ನು ರಚಿಸಬಾರದು ಮತ್ತು ಉಳಿದ ಎಲ್ಲಾ ಜನ ವಿರೋಧಿ ಮಸೂದೆಗಳನ್ನು ವಿರೋಧಿಸಬೇಕೆಂದು ಒತ್ತಾಯಿಸಿ, ಉತ್ಪಾದನೆ, ಸೇವೆ, ಸಂಚಾರ, ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು ಮತ್ತು ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಮುಷ್ಕರ ನಡೆಸಿ ಫೆಬ್ರವರಿ 12ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಬೇಕೆಂದು ಹಾಸನ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು), ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಮಂಗಳವಾರ ಮನವಿ ಮಾಡಿಕೊಳ್ಳಲಾಯಿತು.
ಫೆ. 12ರಂದು ಭಾರತದ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಒಕ್ಕೂಟಗಳು, ನೌಕರರ ಸಂಘಗಳು ಜಂಟಿಯಾಗಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಡಲಾಗಿದೆ. ಈ ಮುಷ್ಕರವನ್ನು ಯಶಸ್ವಿ ಮಾಡಲು ಕೇಂದ್ರ ಕಾರ್ಮಿಕ ಸಂಘಟನೆಗಳು ಸ್ವತಂತ್ರ ಒಕ್ಕೂಟಗಳು, ನೌಕರರ ಸಂಘಟನೆಗಳೊಂದಿಗೆ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ಸಹಭಾಗಿ ಸಂಘಟನೆಗಳಾದ ವಿವಿಧ ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಕೃಷಿಕೂಲಿಕಾರರ ಸಂಘಟನೆಗಳು, ಮಹಿಳಾ, ವಿದ್ಯಾರ್ಥಿ, ಯುವ ಜನ ಸಂಘಟನೆಗಳು ಈ ಮುಷ್ಕರವನ್ನು ಬೆಂಬಲಿಸಿ ಹೋರಾಟಕ್ಕೆ ಕರೆ ಕೊಡುತ್ತಿವೆ. ಅಂದು ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕಾರ್ಮಿಕರು, ರೈತರು, ಕೂಲಿಕಾರರು, ದಲಿತರು, ಮಹಿಳೆಯರು, ವಿದ್ಯಾರ್ಥಿ ಯುವಜನರು ಮತ್ತು ವ್ಯಾಪಾರಿಗಳು ಒಟ್ಟಾಗಿ ಬೃಹತ್ ಮೆರವಣಿಗೆ, ಸಾರ್ವಜನಿಕ ಸಭೆ, ರಸ್ತೆ ತಡೆ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳನ್ನು ಪಿಕೆಟಿಂಗ್ ಮಾಡುವ ಮುಖಾಂತರ ಹಾಸನ ಜಿಲ್ಲೆಯಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹಾಸನ ಸಂಘಟನೆ ಜನಪರ ಚಳುವಳಿ ಒಕ್ಕೂಟ ಹಾಗೂ ಸಂಘಟನೆ ಮುಖಂಡರು ತಿಳಿಸಿದರು.
ವ್ಯಾಪಾರದ ಸುಲಭೀಕರಿಸಲು, ಯೂನಿಯನ್ ಮುಕ್ತ ವಾತಾವರಣ ನಿರ್ಮಿಸಲಿಕ್ಕಾಗಿ, 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ 4 ಕಾರ್ಮಿಕ ಸಂಹಿತೆಗಳನ್ನು ಜಾರಿ ಮಡಿರುವುದು ಕೇವಲ ಆರ್ಥಿಕದಾಳಿ ಮಾತ್ರವಲ್ಲದೆ ರಾಜಕೀಯ ದಾಳಿಯೂ ಆಗಿದೆ. ಕಾರ್ಖಾನೆಗಳ ವ್ಯಾಖ್ಯಾನದಲ್ಲಿ ಕಾರ್ಮಿಕರಮಿತಿ ಹೆಚ್ಚಳದಿಂದ, ಗುತ್ತಿಗೆ ಕಾರ್ಮಿಕರ ಲೈಸೆನ್ಸಗಳಿಗೆ ಕಾರ್ಮಿಕರ ಮಿತಿ ಹೆಚ್ಚಳದಿಂದಾಗಿ 90% ಕಾರ್ಮಿಕರಿಗೆ ವೇತನ, ESI, PF, ಗ್ರಾಚ್ಯುಟಿ & ಭೋನಸ್ ಹಕ್ಕುಗಳಿಂದ ಹೊರಗುಳಿಯುತ್ತಾರೆ. ಜೀವನೋಪಾಯ ವೇತನದ ಜಾರಿಯ ಪ್ರಸ್ತಾಪವಿಲ್ಲ ಕನಿಷ್ಠ ವೇತನ ಅಥವಾ ರಾಷ್ಟ್ರೀಯ ಸರಾಸರಿ ವೇತನದ ಖಾತ್ರಿಯ ಬದಲಿಗೆ ತಳಹಂತದ 178 ರೂ. ಕೂಲಿಯನ್ನು ಹೊಸದಾಗಿ ಪರಿಷ್ಕರಿಸಲಾಗಿದೆ. ಇನ್ನು ಯಾವುದೇ ವಲಯದ ವೇತನಗಳ ಹೆಚ್ಚಳಕ್ಕೆ ಆಧಾರವಿಲ್ಲದಂತೆ ಮಾಡಲಾಗಿದೆ.
ಈಗಾಗಲೇ ಮಾಲೀಕರ ಹೆಚ್ಚುವರಿ ಮೌಲ್ಯ 23.39% ರಿಂದ 51.01% ಗೆ ಹೆಚ್ಚಳವಾಗಿದೆ. ಕಾರ್ಮಿಕರ ವೇತನದ ಪಾಲು 30.27% ರಿಂದ 15.97% ಗೆ ಇಳಿದಿದೆ. ಕಾರ್ಮಿಕರಿಂದ ಪ್ರಾಥಃಮಿಕವಾಗಿ ಸಂಘ ರಚಿಸಿಕೊಳ್ಳುವ ಹಕ್ಕುಗಳನ್ನು ನಿರ್ಬಂಧಿಸಲಾಗಿದೆ. ಸಹಜವಾಗಿ ಚುನಾಯಿಸಲ್ಪಟ್ಟ ಸಂಘದೊಂದಿಗೆ ಕುಂದುಕೊರತೆಗಳ ಸಮಿತಿಯನ್ನು ಮಾಡುವ ಮುಖಾಂತರ ಸಾಮೂಹಿಕ ಚೌಕಾಸಿಯನ್ನು ಶಕ್ತಿಯನ್ನು ಕಡಿಮೆ ಮಾಡುಲಾಗಿದೆ. ಮಾತ್ರವಲ್ಲದೆ ಹಕ್ಕೊತ್ತಾಯಗಳು ಈಡೇರದೇ ಇದ್ದಾಗ ಮಾಡುತ್ತಿದ್ದ ಮುಷ್ಕರವನ್ನು ಮಾಡಿದರೆ ಅದಕ್ಕೆ ದಂಡ, ಜೈಲು, ಮತ್ತು ಅನಿರ್ಧಿಷ್ಟ ವೇತನ ಕಡಿತ ಮಾಡಲಾಗುತ್ತದೆ. 300ಕ್ಕಿಂತ ಹೆಚ್ಚು ಕಾರ್ಮಿಕರಿರುವ ಕಾರ್ಖಾನೆಗಳು ಮಾತ್ರವೇ ಸ್ಥಾಯಿ ಆದೇಶಗಳಿರುತ್ತವೆ. 300 ರೂ ಗಳಿಗೆ ಕಾರ್ಮಿಕರಿರುವ ಕಾರ್ಖಾನೆಗಳು ಯಾವಾಗ ಬೇಕಾದರೂ ಮುಚ್ಚಿಕೊಂಡು ಹೋಗಲು ಅನುಮತಿ ಕೊಡಲಾಗಿದೆ. ಈ ರೀತಿಯಾಗಿ ಬಂಡವಾಳಗಾರರ ಹಿತಕಾಯಲು ಮತ್ತು ಬಂಡವಾಳಗಾರರ ಸಂಪತ್ತನ್ನು ರಕ್ಷಿಸಲು ಪ್ರಭುತ್ವಗಳು ಟೊಂಕ ಕಟ್ಟಿ ಅನುವು ಮಾಡಿ ಕೊಟ್ಟಿದ್ದಾರೆಂದು ತಿಳಿಸಿದರು.
ನರೇಗಾ ಕಾಯ್ದೆಯಡಿಯಲ್ಲಿ ಖಾತರಿ ಪಡಿಸಲಾದ ಕೆಲಸ ಕೆಲಸದ ಹಕ್ಕನ್ನು ಕಸಿದುಕೊಳ್ಳುವುದರ ಜೊತೆಗೆ ಗ್ರಾಮೀಣ ಶ್ರಮ ಜೀವಿಗಳ ಕೊಂಡುಕೊಳ್ಳುವ ಸಾಮಾರ್ಥ್ಯ ಕಡಿಮೆ ಮಾಡುವುದು ಮತ್ತು ಕೃಷಿ ಕಾರ್ಮಿಕರ ಮತ್ತು ಇತರೆ ಗ್ರಾಮೀಣ ಕಾರ್ಮಿಕರ ವೇತನವನ್ನು ನಿಗ್ರಹಿಸುತ್ತಿದೆ. ವಿದ್ಯುತ್ವಕ್ತಿಯನ್ನು ಖಾಸಗೀಕರಿಸಿ ವಿದ್ಯುತ್ ಪ್ರಸರಣ, ವಿತರಣಾ ವ್ಯವಸ್ಥೆಯ ಅನುಷ್ಠಾನ ಮತ್ತು ನಿರ್ವಹಣೆಯನ್ನು ಖಾಸಗಿ ಬಂಡವಾಳಗಾರರಿಗೆ ಕೊಡುವ ಮುಖಾಂತರ ಇದುವರೆಗೂ ವಿದ್ಯುತ್ ರೈತರಿಗೆ ಮತ್ತು ಜನಸಾಮಾನ್ಯರಿಗೆ ಸಬ್ಸಿಡಿ ದರದಲ್ಲಿ ಸಿಗುತ್ತಿದ್ದ ಪ್ರಮುಖ ಸೇವೆಯಿಂದ ಸರ್ಕಾರ ತನ್ನ ಸಾಮಾಜಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ. ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ, ಕಂಪನಿ ಕೃಷಿಯನ್ನು ಉತ್ತೇಜಿಸಿ ಬಲವಂತದ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ರೈತರ ಭೂಮಿಯನ್ನು ವಶಪಡಿಕೊಳ್ಳುತ್ತಿದೆ. ಇದರಿಂದ ರೈತರು ಕೂಲಿಕಾರರಾಗಿ ಮತ್ತು ನಿರುದ್ಯೋಗಸ್ಥರಾಗಿ ಮಾರ್ಪಾಡಾಗುತ್ತಿದ್ದಾರೆ.
ಫೆಬ್ರವರಿ 1ರಂದು ಕೇಂದ್ರ ಸರ್ಕಾರ 53.5 ಲಕ್ಷಕೋಟಿ ಬಜೆಟನ್ನು ಮಂಡಿಸಲಾಗಿದೆ. ಆದರೆ ಇದರಲ್ಲಿ ಜನಸಾಮಾನ್ಯರು ಅನುಭವಿಸುವ ಸಂಕಷ್ಟಗಳಿಗೆ ಪರಿಹಾರವಿಲ್ಲ ಬದಲಿಗೆ ಬಂಡವಾಳಗಾರರಿಗೆ ಹಸೆಮಣೆ ಹಾಕಲಾಗಿದೆ. ರಾಜ್ಯ ಸರ್ಕಾರ ಈ ಕೋಡ್‌ಗಳಿಗೆ ನಿಯಮಾವಳಿ ರಚಿಸಬಾರದೆಂದೂ ಒತ್ತಾಯಿಸಿದರೂ ಕೂಡಾ ಕಾರ್ಮಿಕರ ಸಂಘಟನೆಗಳ ಬಳಿ ಕನಿಷ್ಠ ಚರ್ಚೆ ಮಾಡುವ ಸೌಜನ್ಯವನ್ನು ನೋಡಿಸದೇ 4 ಕೋಡ್‌ಗಳಿಗೆ ಗೆಜೆಟ್ ನೋಟಿಫಿಕೇಷನ್ ತಂದು ಕಾರ್ಮಿಕರು ಉಸಿರೆತ್ತದಂತಹ ಪರಿಸ್ಥಿತಿಯನ್ನು ನಿರ್ಮಿಸುತ್ತಿದೆ. 2025 ಆಗಸ್ಟ್ ತಿಂಗಳಲ್ಲಿ ಕನಿಷ್ಠ ವೇತನದ ಮಂಡಳಿಯಿಂದ ಶಿಫಾದಸ್ಸಾದ ಕನಿಷ್ಠ ವೇತನವನ್ನು ಈಗ 1948ರ ಕನಿಷ್ಠ ವೇತನ ಕಾಯ್ದೆ ರದ್ದಾದ ಹಿನ್ನಲೆಯನ್ನು ಕಾನೂನು ಇಲಾಖೆಯ ಅಭಿಪ್ರಾಯ ಪಡೆಯುವುದಾಗಿ ಹಿಂಬರಹ ಕೊಡುವ ಮುಖಾಂತರ ರಾಜ್ಯದ ಅಧಿಕಾರವನ್ನು ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಬಳಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ನುಡಿದಂತೆ ನಡೆಯುತ್ತೀವೆ ಎಂದು ಹೇಳುವ ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆಗಳನ್ನು ಮುಂದುವರೆಸುತ್ತಿದೆ.
ಈ ನೀತಿಯನ್ನು ವಿರೋಧಿಸಿ, ಫೆಬ್ರವರಿ 12 ರಂದು ರಾಜ್ಯದಲ್ಲಿ ಕೇಂದ್ರ ಮತ್ತು ಸ್ವತಂತ್ರ ಕಾರ್ಮಿಕ ಸಂಘಗಳು ಎಲ್ಲಾ ರೈತ ಸಂಘಗಳು, ದಲಿತ ಸಂಘಟನೆಗಳು ಮಹಿಳಾ ಸಂಘಟನೆಗಳು ಮತ್ತು ವಿದ್ಯಾರ್ಥಿ ಯುವಜನ ಸಂಘಟನೆಗಳು ಸೇರಿ ಮುಷ್ಕರ ನಡೆಸಲಾಗುತ್ತಿದೆ. ಅಂದು ಎಲ್ಲಾ ವಿಭಾಗದ ಜನತೆ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಬೇಕಾಗಿ ಈ ಮೂಲಕ ವಿನಂತಿ. ಉತ್ಪಾದನೆ, ಸೇವೆ ಸ್ಥಗಿತಗೊಳಿಸಿ ಕಾರ್ಮಿಕರ, ರೈತರ ಮತ್ತು ಕೃಷಿ ಕೂಲಿಕಾರರ ಸ್ವಯಂ ಪ್ರೇರಿತ ತಮ್ಮ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಿ ಈ ಮುಷ್ಕರದಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇವೆಂದು ಸಂಘಟನೆಯ ಮುಖಂಡರು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಡಿವೈಡರ್‌ಗೆ ಕಾರು ಡಿಕ್ಕಿ: ಓರ್ವ ಸಾವು ಇಬ್ಬರು ಗಂಭೀರ
ಈ ವೇಳೆ ಧರ್ಮೇಶ್ ಸಿಐಟಿಯು,ಧರ್ಮರಾಜ್ ಎಐಟಿಯುಸಿ, ಎಚ್.ಆರ್. ನವೀನ್‌ಕುಮಾರ್, ಕೆಪಿಆರ್. ಎಸ್, ರಘು ಕರಾರೈತ ಸಂಘ, ಈರೇಶ್ ಹಿರೆಹಳ್ಳಿ ದಸಂಸ, ರಾಜಶೇಖರ್ ಹುಲಿಕಲ್, ಟಿ.ಆರ್. ವಿಜಯಕುಮಾರ ಎಂ.ಆರ್.ಎಚ್.ಎಸ್, ರಾಜು ಗೊರೂರ್, ಎಚ್.ಎಸ್. ಮಂಜುನಾಥ್, ಎಂ.ಜಿ. ಪೃಥ್ವಿ ಡಿವೈಎಫ಼್‌ಐ, ರಮೇಶ್ ಎಸ್‌ಎಫ಼್‌ಐ, ಮಂಜುನಾಥ್, ರಾಜು ಸಿಗರನಹಳ್ಳಿ ಡಿ.ಎಚ್.ಎಸ್, ಶಾಂತರಾಜ ಅರಸು ಹಾಗೂ ಇನ್ನಿತರರಿದ್ದರು.





