ದೇಶಕ್ಕೆ ಸ್ವಾತಂತ್ರ್ಯವನ್ನು ಬ್ರಿಟಿಷರು ಕೊಟ್ಟಿದ್ದಲ್ಲ, ಬದಲಾಗಿ ಭಾರತೀಯರು ಸತತ ಹೋರಾಟ, ಸಂಘರ್ಷ, ತ್ಯಾಗ ಬಲಿದಾನದ ಮೂಲಕ ಪಡೆದ ಫಲವಾಗಿದೆ ಎಂದು ಕಂದಾಯ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ನಾವು ಭಾರತೀಯರಾಗಿ ಬದುಕುತ್ತಿದ್ದೇವೆ, ಸ್ವತಂತ್ರವಾಗಿ ಉಸಿರಾಡುತ್ತಿದ್ದೇವೆ, ಯಾರದೋ ದಾಸ್ಯದಲ್ಲಿ ಬದುಕುತ್ತಿಲ್ಲ ಎಂದರೆ ಅದಕ್ಕೆ ಕಾರಣ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಮಡಿದಂತ ಮಾನ್ಯರುಗಳು. ಮನೆ ಮಠ ಸರ್ವಸ್ವವನ್ನು ಬಿಟ್ಟು ಅವರು ಹೋರಾಟ ಮಾಡಿದ್ದಾರೆ. ಅವರ ತ್ಯಾಗ ಬಲಿದಾನ ಹೋರಾಟ ಎಂದಿಗೂ ಸ್ಮರಿಸುವಂತಹದ್ದು. ಅವರಿಗೆ ನಮನಗಳನ್ನು ಸಲ್ಲಿಸುವುದು ನಮ್ಮ ಕರ್ತವ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ ರಾಜ್ಯ ಮತ್ತು ಹಾಸನ ಜಿಲ್ಲೆಯ ಅನೇಕ ಮಹನೀಯರು ಅವರದ್ದೆ ಆದ ಕೊಡುಗೆಗಳನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಕೂಡ ಸ್ಮರಿಸಿಕೊಳ್ಳುವುದು ನಮ್ಮ ಧರ್ಮ. ಸ್ವಾತಂತ್ರ್ಯ ಬಂದು 79 ವರ್ಷವಾಗಿರುವ ಇಂದು ಅನೇಕ ರೀತಿಯಲ್ಲಿ ನಮ್ಮ ದೇಶವು ಪ್ರಗತಿಯನ್ನು ಸಾಧಿಸಿದೆ ಆದರೂ ಮತ್ತೊಂದು ಕಡೆ ಅನೇಕ ಆತಂಕಗಳು ಕೂಡ ನಮ್ಮನ್ನು ಕಾಡುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ನಮ್ಮ ಆಧಾರ ಸ್ತಂಭ, ಚುನಾವಣೆಗಳು ಪಾರದರ್ಶಕವಾಗಿ ನಡೆದಲ್ಲಿ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ನಂಬಿಕೆಯಿಂದ ದೃಢವಾಗಿ ಕೆಲಸ ಮಾಡುತ್ತದೆ. ಇಂದು ಚುನಾವಣಾ ವ್ಯವಸ್ಥೆಯ ಮೇಲೆ ನಾನಾ ರೀತಿಯ ಪ್ರಶ್ನೆಗಳು ಹೇಳುತ್ತಿವೆ ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎನ್ನುವುದು ಪ್ರತಿಯೊಬ್ಬ ಪ್ರಜೆಯ ಆಶಯವಾಗಿದೆ” ಎಂದು ಹೇಳಿದರು.

“ಚುನಾವಣೆ ಆಯೋಗ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಚುನಾವಣೆಗಳು ಪಾರದರ್ಶಕವಾಗಿ ನ್ಯಾಯ ಸಮ್ಮತವಾಗಿ ಆದಲ್ಲಿ ಮಾತ್ರ ನಾವು ಕಷ್ಟಪಟ್ಟು ಗಳಿಸಿದ ಸ್ವಾತಂತ್ರ‍್ಯವನ್ನು ಉಳಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದಲ್ಲಿ ನಾವೇ ಕಳೆದುಕೊಳ್ಳುವಂತೆ ಆಗಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಜೀವ ಕಳೆದುಕೊಳ್ಳದ ರೀತಿಯಲ್ಲಿ ಚುನಾವಣಾ ಆಯೋಗ ಕೆಲಸ ಮಾಡಬೇಕು. ದೇಶದಲ್ಲಿ ಅತೀ ಹೆಚ್ಚು ಸರಾಸರಿ ತಲಾ ಆದಾಯ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಮೊದಲ ಸ್ಥಾನದಲ್ಲಿದೆ. ಅದೇ ರೀತಿಯಾಗಿ ದೇಶದಲ್ಲಿ ಎರಡನೇ ಅತೀ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕವಾಗಿದೆ. ಇದಕ್ಕೆ ಗ್ಯಾರೆಂಟಿ ಯೋಜನೆಗಳು ಮತ್ತು ಕಷ್ಟಪಟ್ಟು ದುಡಿಯುವ ನಮ್ಮ ಕನ್ನಡಿಗರು ಕಾರಣರಾಗಿದ್ದಾರೆ. ಇಂದು ದೇಶ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತಿದೆ ಎಂದರೆ ಅದರಲ್ಲಿ ಬಹಳ ದೊಡ್ಡ ಪಾಲು ಕನ್ನಡಿಗರು ಸಹ ಕೊಡುತ್ತಿದ್ದೇವೆ. ನಮ್ಮ ದುಡಿಮೆ ಇಂದು ದೇಶದ ಪ್ರಗತಿಗೆ ಸಹಾಯವಾಗುತ್ತಿದೆ. ನಮ್ಮ ಕನ್ನಡಿಗರ ಕೊಡುಗೆ ಇಂದು ದೇಶವನ್ನು ಮೇಲಕ್ಕೆ ಎತ್ತುತ್ತಿದೆ. ತೆರಿಗೆ ಮತ್ತು ನೀರಿನ ವಿಷಯದಲ್ಲಿ ರಾಜ್ಯದ ಪಾಲು ಹೆಚ್ಚಿದ್ದು, ನಮ್ಮ ಪಾಲು ನಮಗೆ ಸಿಗಬೇಕು. ಅದನ್ನು ಪಡೆದುಕೊಳ್ಳುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ತಿಳಿಸಿದರು.
“ಸ್ವಾತಂತ್ರ್ಯ ಬಂದ ನಂತರ ಬಡವರು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡುತ್ತಾ ಬಂದಿದ್ದೇವೆ. ಆದರೆ ಇಂದು ಪುನಃ ಶ್ರೀಮಂತರು ಬಡವರ ನಡುವಿನ ಅಂತರ ದಿನೇ ದಿನೇ ಹೆಚ್ಚಾಗುತ್ತಿದೆ. ಸಾಮಾನ್ಯ ಜನರು ಕಷ್ಟಪಟ್ಟು ದುಡಿದ ದುಡಿಮೆ, ದೇಶದ ಸಂಪತ್ತಿನಲ್ಲಿ ಬಹುಪಾಲು ಇಂದು ಕೆಲವೇ ಕೆಲವು ಶ್ರೀಮಂತರ ಪಾಲಾಗುತ್ತಿದೆ. ಇದು ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ. ಇಂದು ದೇಶ ಸುಭದ್ರವಾಗಿ ಇರಬೇಕೆಂದರೆ ಶ್ರೀಮಂತರು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡಬೇಕು. ದೇಶದ ಆರ್ಥಿಕತೆಯಲ್ಲಿ ಪ್ರತಿಯೊಬ್ಬರಿಗೂ ಸಮಪಾಲು ಸಿಗಬೇಕು ಎಂದು ನಮ್ಮ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿ ಜನರಲ್ಲಿ ಆರ್ಥಿಕ ಶಕ್ತಿಯನ್ನು ತುಂಬುವ ಕೆಲಸವನ್ನು ಮಾಡುತ್ತಿದೆ. ನಮ್ಮ ಸರ್ಕಾರ ಬಂದು ಎರಡು ವರ್ಷ ಪೂರೈಸಿದೆ ಈ ಎರಡು ವರ್ಷದಲ್ಲಿ ನಾಲ್ಕುವರೆ ಕೋಟಿ ಕನ್ನಡಿಗರಿಗೆ ಇಲ್ಲಿಯವರೆಗೆ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡುವ ಮೂಲಕ ಕನ್ನಡಿಗರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ” ಎಂದರು.

“ನಮ್ಮ ಗ್ಯಾರೆಂಟಿ ಯೋಜನೆಗಳ ಪ್ರಯೋಜನಕ್ಕಾಗಿ ಯಾವ ಕಚೇರಿಯ ಬಳಿಯಲ್ಲಿಯೂ ಸಾಲಾಗಿ ನಿಲ್ಲುವ, ಬಾಗಿಲನ್ನು ಕಾಯುವಂತಹ ಅವಶ್ಯಕತೆಯೂ ಇಲ್ಲ ಜೊತೆಗೆ ಯಾವುದೇ ರೀತಿಯ ಲಂಚವಿಲ್ಲದೆಯೇ ಯಾವ ಮಧ್ಯವರ್ತಿಗೂ ಕೈಜೋಡಿಸುವ ಅವಶ್ಯಕತೆ ಇಲ್ಲದಂತೆ ಯೋಜನೆಗಳ ಪಡೆದುಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದ್ದೇವೆ. ಬಹುಶಃ ಪ್ರಪಂಚದಲ್ಲಿ ಈ ರೀತಿಯಲ್ಲಿ ಜನರಿಗೆ ಪಾರದರ್ಶಕವಾಗಿ ಆರ್ಥಿಕ ಶಕ್ತಿಯನ್ನು ತುಂಬುವ ಯೋಜನೆ ಮತ್ತೊಂದು ಇಲ್ಲ. ರಾಜ್ಯದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಉತ್ತಮ ಮಳೆಯಾಗಿರುವುದು ರೈತರ ಬದುಕನ್ನು ಹಸನಾಗಿಸಿ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ” ಎಂದರು.
ಕಾರ್ಯಕ್ರಮದಲ್ಲಿ ಸಂಸದದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಮಹಾನಗರ ಪಾಲಿಕೆಯ ಮಹಾಪೌರರಾದ ಚಂದ್ರೇಗೌಡ, ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ: ಹಾಸನ | ಆರೋಗ್ಯ, ಶಿಕ್ಷಣಕ್ಕಾಗಿ ಹೋರಾಟ ಮಾಡಬೇಕಾದಂತಹ ದುಃಸ್ಥಿತಿ ಬಂದೊದಗಿದೆ: ಸಿಐಟಿಯು ಧರ್ಮೇಶ್
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನ
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ವಿವರ:- ಸಮಾಜ ಸೇವಾ ಕ್ಷೇತ್ರದಲ್ಲಿ ಸೈಯದ್ ಉಮರ್ ಪಾರೂಕ್, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಡಿ.ಡಿ ನ್ಯೂಸ್ ವರದಿಗಾರರಾದ ಹೆಚ್.ಎನ್. ಜ್ಞಾನೇಶ್ವರ್, ಜೇನುಗಿರಿ ಪತ್ರಿಕೆಯ ಸಂಪಾದಕರಾದ ಪ್ರಸನ್ನ ಕುಮಾರ್ , ಹೋಂ ಗಾರ್ಡ್ಸ್ ಕ್ಷೇತ್ರದಲ್ಲಿ ಬಿ.ಆರ್ ಹರೀಶ್ ಕುಮಾರ್, ಅಗ್ನಿಶಾಮಕ ಕ್ಷೇತ್ರದಲ್ಲಿ ಎ.ಆರ್ ನಿಂಗರಾಜು, ಕ್ರೀಡಾ ಕ್ಷೇತ್ರದಲ್ಲಿ ಕರಾಟೆ ಕ್ರೀಡಾಪಟು ಅನುಷ್ಕಾ ಆರ್.ವಿ, ಜಿಮ್ನಾಸ್ಟಿಕ್ ಕ್ರೀಡಾಪಟು ಶ್ರೀಶಗೌಡ ಕೆ.ಎನ್, ಪೌರಕಾರ್ಮಿಕರ ಕ್ಷೇತ್ರದಲ್ಲಿ ಸಣ್ಣಪ್ಪಯ್ಯ ಬಿನ್ ಚಿಕ್ಕನಲ್ಲಗಾಡು, ಸೇನಾ ಕ್ಷೇತ್ರದಲ್ಲಿ ರಂಗೇಗೌಡ ಆರ್.ಎಲ್, ಕಲಾವಿದರ ಕ್ಷೇತ್ರದಲ್ಲಿ ಯೋಗೀಶ್ ಈ ಆರೋಗ್ಯ ಇಲಾಖೆಯಲ್ಲಿ ನೇತ್ರ ಶಸ್ತ್ರ ಚಿಕಿತ್ಸಕರಾದ ಸಂದೀಪ್ ಕೆ, ಸರ್ಕಾರಿ ಸೇವೆಯಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾದ ಅರ್ಜುನ್ ಜಿ.ಎಂ ಅವರನ್ನು ಸನ್ಮಾನಿಸಲಾಯಿತು.





