ಹಾಸನ ಜಿಲ್ಲೆಯಲ್ಲಿ ಎರಡು ದಿನ ಬಿಡುವು ನೀಡಿದ್ದ ಮಳೆ ಮತ್ತೆ ಆರ್ಭಟಿಸುತ್ತಿದ್ದು, ಮಂಗಳವಾರ ಬೆಳಿಗ್ಗೆ ಸಕಲೇಶಪುರ ತಾಲೂಕಿನ ಕುಂಬರಡಿ-ಹಾರ್ಲೆ ಎಸ್ಟೇಟ್ ನಡುವೆ ಭೂಕುಸಿತ ಸಂಭವಿಸಿದೆ.
ಸಕಲೇಶಪುರದ ಹಾರ್ಲೆ ಎಸ್ಟೇಟ್ ಮೂಲಕ ನಡಹಳ್ಳಿಗಾಗಿ ದೊಡ್ಡತಪ್ಪಲೆ ಬಳಿ ರಾಷ್ಟ್ರೀಯ ಹೆದ್ದಾರಿ(ಹಾಸನ -ಮಂಗಳೂರು)ಗೆ ಸಂಪರ್ಕ ಕಲ್ಪಿಸುವ ನಡಹಳ್ಳಿ ರಸ್ತೆಯು ಹಾರ್ಲೆ ಎಸ್ಟೇಟ್ ಬಳಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ.
“ಈ ಮಣ್ಣು ಕುಸಿತ ಆಗಿರುವ ಸ್ಥಳದ ಪಕ್ಕದಲ್ಲೇ ಎತ್ತಿನಹೊಳೆ ಪೈಪಪ್‌ಲೈನ್ ಹಾದು ಹೋಗಿದ್ದು, ಅದೇ ಕಾರಣದಿಂದ ಭೂಮಿ ಸಡಿಲಗೊಂಡು ಭೂಕುಸಿತ ಸಂಭವಿಸಿದೆ” ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭದ್ರಾ ಜಲಾಶಯದಿಂದ ನೀರು ಹರಿವು; ಇಮ್ಮಡಿಯಾದ ರೈತರ ಸಂತಸ
ರಸ್ತೆ ಕುಸಿದು ಸುಮಾರು 500 ಅಡಿಗಳವರೆಗೂ ಮಣ್ಣು ಕೊಚ್ಚಿಹೋಗಿರುವುದಲ್ಲದೆ ಎಸ್ಟೇಟ್ ಒಳಗಿರುವ ಕೆರೆ-ಕಟ್ಟೆಯೂ ಒಡೆದು ಹೋಗಿದೆ. ಮತ್ತೊಂದೆಡೆ ಹೆದ್ದಾರಿಯೂ ಕುಸಿದಿದ್ದು, ಸೋಮವಾರ ಸಂಚಾರ ಅಸ್ತವ್ಯಸ್ತವಾಗಿತ್ತು. ಸಕಲೇಶಪುರ ಕಡೆಯಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಬದಲಿ ರಸ್ತೆಯು ದೊಡ್ಡ ಪ್ರಮಾಣದಲ್ಲಿ ಕುಸಿದಿದೆ. ಇದರಿಂದ ಹಲವು ಗ್ರಾಮಗಳ ನಡುವಿನ ಸಂಪರ್ಕವೂ ಕಡಿತವಾಗಿದೆ. ಸುದ್ದಿ ತಿಳಿದ ಕೂಡಲೇ ತಾಲೂಕು ಉಪ ವಿಭಾಗಧಿಕಾರಿ ಡಾ. ಶ್ರುತಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.





