ಹಾಸನ ಜಿಲ್ಲಾ ಜಾತಿ ಮತ್ತು ಆದಾಯ ದೃಢೀಕರಣ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಕಾನೂನುಬಾಹಿರವಾಗಿ ವರ್ತಿಸಿದ್ದಕ್ಕಾಗಿ ಹೈಕೋರ್ಟ್ ₹2 ಲಕ್ಷ ದಂಡವನ್ನು ವಿಧಿಸಿದೆ.
ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾದ ಅಭ್ಯರ್ಥಿಯೊಬ್ಬರ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ದೃಢೀಕರಿಸಲು ಒಂದು ವರ್ಷದವರೆಗೆ ಕಾಯಿಸಿದ್ದು, ಕಾನೂನಿಗೆ ವಿರುದ್ಧವಾಗಿ ದೃಢೀಕರಣ ನೀಡಲು ನಿರಾಕರಿಸಿರುವುದು ಮತ್ತು ಕೋರ್ಟ್ನ ಹಸ್ತಕ್ಷೇಪದ ನಂತರವೇ ಅವುಗಳನ್ನು ಅನುಮೋದಿಸಿದಕ್ಕಾಗಿ ಹೈಕೋರ್ಟ್ ದಂಡ ವಿಧಿಸಿದೆ.
ಕೋರ್ಟ್ ತನ್ನ ಆದೇಶದಲ್ಲಿ, “ಸಮಿತಿಯ ಸದಸ್ಯರು ಕಾನೂನನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ. ಇದರ ಪರಿಣಾಮವಾಗಿ ಅರ್ಜಿದಾರರು ಅನಗತ್ಯ ಮೊಕದ್ದಮೆಗೆ ಒಳಗಾಗಿ 12 ತಿಂಗಳುಗಳ ಉದ್ಯೋಗದ ನಷ್ಟವನ್ನು ಅನುಭವಿಸಿದ್ದಾರೆ. ಆದ್ದರಿಂದ, ಸಮಿತಿಯವರಿಗೆ ದಂಡ ವಿಧಿಸಬೇಕು” ಎಂದು ತಿಳಿಸಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮುತ್ತುಲಕ್ಷ್ಮಿ ಬಿ ಎನ್ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಅಂಗೀಕರಿಸುವಾಗ ಈ ಆದೇಶ ನೀಡಿದ್ದಾರೆ.
ಕಾನೂನಿನ ಉಲ್ಲಂಘನೆ ಮತ್ತು ಸಮಿತಿಯ ಟಿಪ್ಪಣಿ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮುತ್ತುಲಕ್ಷ್ಮಿ ಬಿ ಎನ್ ಎಂಬುವವರು 2023ರ ಜನವರಿಯಲ್ಲಿ ಕ್ಯಾಟಗರಿ 3ಎ ಅಡಿಯಲ್ಲಿ ಸಹಾಯಕ ಸಾರ್ವಜನಿಕ ಪ್ರಾಸಿಕ್ಯೂಟರ್ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ, 2023ರ ಮೇ ವೇಳೆ ಸರ್ಕಾರಿ ಪೋರ್ಟಲ್ನಲ್ಲಿ ತಮ್ಮ ಮೂಲ ಪ್ರಮಾಣಪತ್ರಗಳ ಚಿತ್ರಗಳನ್ನು ಅಪ್ಲೋಡ್ ಮಾಡಲು ಸೂಚಿಸಲಾಗಿತ್ತು. ಆದರೂ, ಸಮಿತಿಯು ದೃಢೀಕರಣ ನೀಡಲು ನಿರಾಕರಿಸಿತು.
ಸರ್ವೋಚ್ಚ ನ್ಯಾಯಾಲಯದ ಕಾನೂನಿನ ನಿರ್ದೇಶನದಂತೆ, ಸಮಿತಿಯು ಅಂತಿಮವಾಗಿ “ಅರ್ಜಿದಾರರ ಪತಿಯ ಆದಾಯವು ಮಿತಿಯನ್ನು ಮೀರಿದ್ದರೂ, ಕೋರ್ಟ್ನ ನಿರ್ದೇಶನದ ಆಧಾರದ ಮೇಲೆ ಮಾತ್ರ ಮಾನ್ಯತಾ ಪ್ರಮಾಣಪತ್ರವನ್ನು ನೀಡಲಾಗಿದೆ” ಎನ್ನುವ ಟಿಪ್ಪಣಿಯೊಂದಿಗೆ ಪ್ರಮಾಣಪತ್ರವನ್ನು ಜಾರಿಗೊಳಿಸಿತ್ತು.
ಸಮಿತಿಯ ಈ ಟಿಪ್ಪಣಿಯನ್ನು, “ಸರ್ವೋಚ್ಚ ನ್ಯಾಯಾಲಯದಿಂದ ಸ್ಥಾಪಿತವಾದ ಕಾನೂನಿನ ಅಜ್ಞಾನ ಮಾತ್ರವಲ್ಲದೇ, ಉದ್ಧಟತನದಿಂದ ನ್ಯಾಯಾಲಯಕ್ಕೆ ಅವಮಾನ ಎಸಗಿದೆ. ಮುತುಲಕ್ಷ್ಮಿ ಅವರ ಅರ್ಜಿಯನ್ನು ಅಂಗೀಕರಿಸುವಾಗ, ಸಮಿತಿಯ ಸದಸ್ಯರು ಉದ್ದೇಶಪೂರ್ವಕವಾಗಿ ಕಾನೂನನ್ನು ನಿರ್ಲಕ್ಷಿಸಿದ್ದಾರೆ” ಎಂದು ತೀರ್ಪು ನೀಡಿದರು.
“ಸಮಿತಿಯ ಕಾನೂನುಬಾಹಿರ ಕೃತ್ಯದಿಂದಾಗಿ ಮುತ್ತುಲಕ್ಷ್ಮಿಯವರು ಅನಗತ್ಯ ಮೊಕದ್ದಮೆಗೆ ಒಳಗಾಗಿ 12 ತಿಂಗಳುಗಳ ಕಾಲ ಉದ್ಯೋಗದ ನಷ್ಟವನ್ನು ಅನುಭವಿಸಿದ್ದಾರೆ. ಆದ್ದರಿಂದ ಆ ಈ ವೇಳೆ ಆಯ್ಕೆಯಾಗಿದ್ದ ಇತರೆ ಅಭ್ಯರ್ಥಿಗಳು ಜೂನ್ 2024ರಲ್ಲಿ ಸೇವೆಗೆ ಸೇರಿದ್ದಾರೆ. ಇದೀಗ ಉದ್ಯೋಗನಷ್ಟ ಅನುಭವಿಸಿರುವ ಮುತ್ತುಲಕ್ಷ್ಮಿಯವರಿಗೆ ಆಗಿನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ವೈಯಕ್ತಿಕ ಖರ್ಚಿನಿಂದ ₹2 ಲಕ್ಷ ದಂಡವನ್ನು ಪಾವತಿಸಬೇಕು” ಎಂದು ಕೋರ್ಟ್ ಆದೇಶಿಸಿದೆ.
ಹೈಕೋರ್ಟ್ನ ಈ ತೀರ್ಪು, ಕಾನೂನಿನ ಉಲ್ಲಂಘನೆ ಮತ್ತು ಅಧಿಕಾರದ ದುರುಪಯೋಗವನ್ನು ತಡೆಯಲು ಸರ್ಕಾರಿ ಸಮಿತಿಗಳು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂಬ ಸಂದೇಶವನ್ನು ಸಾರುತ್ತದೆ. ಈ ಘಟನೆಯಿಂದಾಗಿ, ಜಾತಿ ಮತ್ತು ಆದಾಯ ದೃಢೀಕರಣ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಕಾನೂನಿನ ಪಾಲನೆಯ ಮಹತ್ವವನ್ನು ಒತ್ತಿಹೇಳಲಾಗಿದೆ.





