ಜಿಲ್ಲೆಯ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿರುವ ಹಾಸನ ಜಿಲ್ಲಾ ಒಕ್ಕಲಿಗರ ಸಂಘದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸರ್ಕಾರ ಮಹತ್ವದ ನೆರವು ನೀಡಿದೆ. ಸರ್ಕಾರಕ್ಕೆ ಪಾವತಿಸಬೇಕಿದ್ದ ನಿವೇಶನದ ದೊಡ್ಡ ಮೊತ್ತದ ಹಣವನ್ನು ವಿನಾಯಿತಿ ಮಾಡಿರುವುದಕ್ಕೆ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್. ಮುದ್ದೇಗೌಡ ಮತ್ತು ಹೆಚ್.ಪಿ. ಮೋಹನ್ ಹಾಗೂ ಇತರರು ಹಾಸನ ನಗರದಲ್ಲಿ ಪತ್ರಿಕಾಗೋಷ್ಠಿ ಮೂಲಕ ಕೃತಜ್ಞತೆ ಸಲ್ಲಿಸಿದರು.
1936ರಲ್ಲಿ ಸ್ಥಾಪನೆಯಾದ ಈ ಸಂಘವು ಶಿಕ್ಷಣ ಮತ್ತು ವಸತಿ ಸೇವೆಯನ್ನು ಮುಖ್ಯ ಗುರಿಯಾಗಿ ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ. ದಿವಂಗತ ಎಂ.ಆರ್. ಪುಟ್ಟಸ್ವಾಮಯ್ಯ ಅವರ ದಾನದಿಂದ ಶಂಕರ ಮಠ ರಸ್ತೆಯಲ್ಲಿ ವಿದ್ಯಾರ್ಥಿ ನಿಲಯ ಆರಂಭಗೊಂಡಿದ್ದು, ನಂತರ ದಿವಂಗತ ಜಿ.ಎ. ತಿಮ್ಮಪ್ಪ ಗೌಡರು ಸುಮಾರು 30 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಘದ ಮೂಲ ಸೌಕರ್ಯ ವಿಸ್ತರಣೆಗೆ ಕಾರಣರಾದರು. 2001ರಿಂದ ಅಧ್ಯಕ್ಷರಾಗಿ ರುವ ಜಿ.ಎಲ್. ಮುದ್ದೇಗೌಡರ ನೇತೃತ್ವದಲ್ಲಿ ಸಂಘವು ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ರವೀಂದ್ರನಗರ ಹಾಗೂ ಬಿ.ಎಂ. ರಸ್ತೆಯಲ್ಲಿ ಹೆಣ್ಣುಮಕ್ಕಳಿಗೆ 900ಕ್ಕೂ ಹೆಚ್ಚು ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಸತ್ಯಮಂಗಲ ಬಡಾ ವಣೆಯಲ್ಲಿ 250 ಗಂಡು ಮಕ್ಕಳಿಗೆ ವಸತಿ ನಿಲಯ ನಿರ್ಮಿಸಲಾಗಿದೆ. ಒಟ್ಟಾರೆ ಸುಮಾರು 1,000 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಜಿ ಎಲ್ ಮುದ್ದೇಗೌಡ ತಿಳಿಸಿದರು.
ಇದನ್ನೂ ಓದಿದ್ದೀರಾ?‘ನಮ್ಮೂರ ಶಾಲೆಗೆ ನಾವೆಲ್ಲರೂ ಭದ್ರಕೋಟೆಗಳಾಗಿ ನಿಲ್ಲುತ್ತೇವೆ’; ಗೊರೂರು ಪ್ರಾಜೆಕ್ಟ್ ಶಾಲೆಯ ಗ್ರಾಮಸ್ಥರು
2011ರಿಂದ ಬಡ ಕುಟುಂಬಗಳ 400ಕ್ಕೂ ಹೆಚ್ಚು ಮಕ್ಕಳಿಗೆ ರಿಯಾಯಿತಿ ದರದಲ್ಲಿ ಊಟ ಮತ್ತು ನಿರ್ವಹಣಾ ವೆಚ್ಚವನ್ನು ಸಂಘವೇ ಭರಿಸುತ್ತಿದ್ದು, ವರ್ಷಕ್ಕೆ ಸುಮಾರು 25 ಲಕ್ಷ ರೂ. ವೆಚ್ಚವಾಗುತ್ತಿದೆ. ಇದುವರೆಗೆ 8.500ಕ್ಕೂ ಹೆಚ್ಚು ವಿದ್ಯಾರ್ಥಿ ನಿಯರು ನಿಲಯ ಸೌಲಭ್ಯ ಪಡೆದು ಶಿಕ್ಷಣ ಪೂರ್ಣಗೊಳಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮೋಹನ್ ತಿಳಿಸಿದರು. ಈ ವೇಳೆ ಒಕ್ಕಲಿಗರ ಸಂಘದ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.





