ಯಗಚಿ ಕಾಲುವೆ ಯೋಜನೆಗಾಗಿ ಸುಮಾರು 20 ವರ್ಷಗಳ ಹಿಂದೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಪಾವತಿಸದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿಗಳ (ಡಿಸಿ) ಸರ್ಕಾರಿ ಕಾರನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
ಯಗಚಿ ಕಾಲುವೆಗಾಗಿ ಭೂಮಿ ಕಳೆದುಕೊಂಡ ನಾಗಮ್ಮ, ಲಕ್ಷ್ಮೀ ಗೌಡ ಹಾಗೂ ಜಗದೀಶ್ ಅವರು, ಸರಿಯಾದ ಪರಿಹಾರ ನೀಡಿಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಒಟ್ಟು ಸುಮಾರು ₹11 ಲಕ್ಷ 22 ಸಾವಿರ ಪರಿಹಾರ ಇನ್ನೂ ಬಾಕಿಯಿದೆ ಎಂದು ಅವರು ದೂರಿದ್ದಾರೆ. ಪ್ರತಿ 10.5 ಗುಂಟೆಗೆ ಕೇವಲ ₹40 ಸಾವಿರ ಪರಿಹಾರ ನಿಗದಿ ಮಾಡಲಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಲಯ ಎರಡು ವರ್ಷಗಳ ಹಿಂದೆಯೇ ಪರಿಹಾರ ಪಾವತಿಸುವಂತೆ ಆದೇಶ ನೀಡಿತ್ತು. ಆದರೂ ಎರಡು ವರ್ಷಗಳಾದರೂ ಪರಿಹಾರ ಪಾವತಿಯಾಗದ ಹಿನ್ನೆಲೆಯಲ್ಲಿ, ಕೊನೆಗೆ ಡಿಸಿ ಕಾರು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿದ್ದೀರಾ?ಹಾಸನ | ಬ್ರಹ್ಮದೇವರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉಳಿಸಿ; ಎಐಡಿಎಸ್‌ಓ ಪ್ರತಿಭಟನೆ
ನ್ಯಾಯಾಲಯದ ಆದೇಶದಂತೆ ಕೋರ್ಟ್ ಅಧಿಕಾರಿಗಳು ಹಾಗೂ ವಕೀಲರು ಹಾಸನ ಡಿಸಿ ಕಚೇರಿಗೆ ತೆರಳಿ ಕಾರು ಜಪ್ತಿಗೆ ಮುಂದಾದರು. ಈ ವೇಳೆ ಡಿಸಿ ಕಚೇರಿ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆದಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ದೂರಿದಾರರು ಡಿಸಿ ಕಾರಿನ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಯವರ ಕಾರು ಜಪ್ತಿ ಮಾಡಲಾಗಿದೆ.





