ಹಾಸನ ನಗರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ವತಿಯಿಂದ ಮಾರ್ಚ್ 7 ಮತ್ತು 8ರಂದು ಹಾಸನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ ಎಂದು ಒಕ್ಕೂಟದ ಡಾ. ಎಚ್. ಎಸ್ ಅನುಪಮಾ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಹಾಸನ ನಗರದ ಮಹಾರಾಜ ಉದ್ಯಾನವನದಲ್ಲಿರುವ ಬಯಲು ರಂಗಮಂದಿರದಲ್ಲಿ ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಕಲಾತಂಡಗಳಿಂದ ಹೋರಾಟದ ಹಾಡುಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಸಾಮಾಜಿಕ ಹೋರಾಟಗಾರ್ತಿ, ಲೇಖಕಿ ಹಾಗೂ ನ್ಯಾಯವಾದಿ ತೀಸ್ತಾ ಸೆಟಲ್ವಾಡ್ (ಮುಂಬಯಿ) ಮತ್ತು ಸಾಮಾಜಿಕ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ (ಬೆಂಗಳೂರು) ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಡಾ. ಎಚ್. ಎಸ್ ಅನುಪಮಾ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ ರಾಜಣ್ಣಗೌಡ, ರತಿ ರಾವ್, ಡಾ. ವೀರಭದ್ರಪ್ಪ, ಗೀತಾ ವಿ., ಡಾ. ರಂಗಲಕ್ಷ್ಮಿ, ರಾಜಶೇಖರ್ ಹುಲಿಕಲ್, ರಾಜು ಗೊರೂರು, ಪುಷ್ಪಾ ಎಂ.ಬಿ., ಮಂಗಳಮ್ಮ, ಮಮತಾ, ಎಚ್.ಬಿ. ಪೂರ್ಣಿಮಾ ಹಾಗೂ ಧರ್ಮೇಶ್ ಸೇರಿದಂತೆ ಹಲವರು ಗೌರವ ಉಪಸ್ಥಿತರಾಗಿ ಭಾಗವಹಿಸಲಿದ್ದಾರೆ. ಇದಾದ ನಂತರ ಮಹಾರಾಜ ಉದ್ಯಾನವನದಿಂದ ಆರಂಭವಾಗುವ ಹಕ್ಕೊತ್ತಾಯ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಮಾಪ್ತಿಯಾಗಲಿದೆ. ಬಳಿಕ ಬೆಳಗ್ಗೆ 11.30ಕ್ಕೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಯಶೋಧರಾ ದಾಸಪ್ಪ ವೇದಿಕೆಯಲ್ಲಿ ಬೃಹತ್ ಸಾರ್ವಜನಿಕ ಮಹಿಳಾ ಸಮಾವೇಶ ನಡೆಯಲಿದೆ ಎಂದು ಒಕ್ಕೂಟದಿಂದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಡಾ. ಸುಕನ್ಯಾ ಕನಾರಳ್ಳಿ ಮಹಿಳಾ ಚೈತನ್ಯದ ಕುರಿತು ಮಾತನಾಡಲಿದ್ದು, ತೀಸ್ತಾ ಸೆಟಲ್ವಾಡ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಇದೇ ವೇಳೆ “ಹಾಸನ ಮಣ್ಣಿನ ಹೆಣ್ಣು ದನಿಗಳು” ಎಂಬ ಸಾಂದರ್ಭಿಕ ಗ್ರಂಥವನ್ನು ಬಿಡುಗಡೆ ಮಾಡಲಾಗುತ್ತದೆ. ಕಾರ್ಯಕ್ರಮದ ಅಂಗವಾಗಿ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಜಿಲ್ಲೆಯ ಚಿತ್ರಕಲಾವಿದೆಯರಿಂದ ಚಿತ್ರಕಲಾ ಪ್ರದರ್ಶನ ಹಾಗೂ ಪುಸ್ತಕ ಮಾರಾಟದ ವ್ಯವಸ್ಥೆಯೂ ಇರಲಿದೆ. ಇದಲ್ಲದೆ ಮಾರ್ಚ್ 8ರಂದು ಹಾಸನಾಂಬ ಕಲಾಕ್ಷೇತ್ರದಲ್ಲಿ “ಮಹಿಳಾ ದೌರ್ಜನ್ಯ: ಸವಾಲುಗಳು ಮತ್ತು ಬಿಡುಗಡೆಯ ಸಾಧ್ಯತೆಗಳು” ಎಂಬ ವಿಷಯದ ಕುರಿತಾಗಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.
ಇದನ್ನೂ ಓದಿದ್ದೀರಾ?ಬಾಬಾ ಬುಡನ್‌ಗಿರಿ ʼಉರುಸ್ʼ ವಿವಾದ; ಸರ್ಕಾರದ ವಿರುದ್ಧ ಕಾವೇರಿದ ಪ್ರತಿಭಟನೆ
ಈ ವೇಳೆ ಡಾ. ಸಬಿತಾ ಬನ್ನಾಡಿ,ಶೈಲಜಾ, ಕಲಾವತಿ,ಮಧುಸೂಧನ, ಭಾನುಮತಿ, ಲೀಲಾವತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.





