ಮದುವೆಗೆ ಒಪ್ಪದ ಹಿನ್ನೆಲೆ, ಶಾಲಾ ಶಿಕ್ಷಕ್ಷಿಯೊಬ್ಬರನ್ನು ದುರುಳರು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಿರುವ ಘಟನೆ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ನಡೆದಿದೆ.
ಶಾಲಾ ಶಿಕ್ಷಕಿ ಅರ್ಪಿತಾ ಅಪಹರಣಕ್ಕೊಳಗಾದವರು. ಈಕೆಯ ಸಂಬಂಧಿ ರಾಮು ಎಂಬುವವರು ಅಪಹರಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗುರುವಾರ ಬೆಳಗ್ಗೆ ಸುಮಾರು 8 ಗಂಟೆಗೆ ಅರ್ಪಿತಾ ಶಾಲೆಗೆ ತೆರಳುತ್ತಿದ್ದರು. ಈ ವೇಳೆ, ಕಾರ್ನಲ್ಲಿ ಬಂದ ರಾಮು ಎಂಬಾತ ಬಲವಂತವಾಗಿ ಆಕೆಯನ್ನು ಎಳೆದುಕೊಂಡು ಹೋಗಿದ್ದಾನೆ. ಅರ್ಪಿತಾ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬೆಳಗ್ಗೆಯೇ ಈ ಘಟನೆ ನಡೆದಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ.
ಈ ಸುದ್ದಿ ಓದಿದ್ದೀರಾ? ಝೀರೋ ಟ್ರಾಫಿಕ್‌ನಲ್ಲಿ ಬಂದ ಮಗುವಿಗೆ ಚಿಕಿತ್ಸೆ ನೀಡದ ನಿಮ್ಹಾನ್ಸ್; ಸಾವು
ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸದ್ಯ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದು, ತಂಡ ರಚಿಸಿದ್ದಾರೆ. ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




