ದಲಿತರು, ಅಲ್ಪಸಂಖ್ಯಾತರ ಸಬ್ಸಿಡಿ ಯೋಜನೆಗಳಲ್ಲಿ ನೀಡುವ ಸವಲತ್ತುಗಳನ್ನು ರೈತರಿಗೆ ಕೊಡಿಸುವುದಾಗಿ ವಂಚನೆ ಮಾಡಿರುವ ಸಿ ಎಸ್ ನಾಗರಾಜ್ ಎಂಬಾತನನ್ನು ಕೂಡಲೇ ಬಂಧಿಸಬೇಕು ಮತ್ತು ಇಡೀ ಪ್ರಕರಣದ ಸುತ್ತ ಸೂಕ್ತ ತನಿಖೆ ನಡೆಸಿ, ನೊಂದ ರೈತರಿಗೆ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ, ದಲಿತ ಹಕ್ಕುಗಳ ಸಮಿತಿಯಿಂದ ಪ್ರತಿಭಟನೆ ನಡೆಸಿ ಹಾಸನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಹೊಳೆನರಸೀಪುರ ತಾಲೂಕಿನ ಹಳೇಕೋಟೆ ಹೋಬಳಿಯ ಚಾಕೇನಹಳ್ಳಿ ಕಟ್ಟೆ ಗ್ರಾಮದ ವಾಸಿಯಾದ ಸಣ್ಣೆಗೌಡ(ಶಿವಣ್ಣ) ಅವರ ಮಗನಾದ ಸಿ ಎಸ್ ನಾಗರಾಜು ಎಂಬಾತ ʼನಾನು ಹಾಸನ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ. ನಾನು ನಿಮಗೆ ಟ್ರ್ಯಾಕ್ಟರ್ ಮತ್ತು ರೋಟಾ ವೇಟರ್, ಮನೆ ಸಾಲ ಹಾಗೂ ಕಾರುಗಳನ್ನು ಸಬ್ಸಿಡಿ ರೂಪದಲ್ಲಿ ಕೊಡಿಸುತ್ತೇನೆ. ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಕೊಡಿಸುತ್ತೇನೆ. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆಬಾವಿ ಮತ್ತಿತರೆ ಸೌಲಭ್ಯಗಳನ್ನು ಕೊಡಿಸುತ್ತೇನೆ. ಜತೆಗೆ ದರಖಾಸ್ತು ಜಮೀನು ಮಾಡಿಸಿಕೊಡುತ್ತೇನೆ. ಗುಂಪುಗಳ ಸಾಲ ಮತ್ತು ವೈಯಕ್ತಿಕ ಸಾಲ, ಕೊಟ್ಟಿಗೆ ನಿರ್ಮಾಣ ಸಾಲ ಇವುಗಳನ್ನು ಕೊಡಿಸುತ್ತೇನೆʼ ಎಂದೆಲ್ಲ ಸುಳ್ಳುಗಳನ್ನು ಹೇಳಿ ರೈತರಿಂದ ಫೋನ್ನ್ ಪೇ ಮೂಲಕ, ನಗದು ರೂಪದಲ್ಲಿ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್, ತೆರಣ್ಯ ಶಾಖೆಯ ನಾಗರಾಜು ಅವರ ಬ್ಯಾಂಕ್ ಖಾತೆಗೆ ಸುಮಾರು ಒಟ್ಟು 60 ಲಕ್ಷ ರೂಪಾಯಿಗೂ ಹೆಚ್ಚು ಹಣ ಪಾವತಿಯಾಗಿದೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
“ನಾಗರಾಜನ ತಂದೆ ಸಣ್ಣೇಗೌಡ(ಶಿವಣ್ಣ) ಸ್ಥಳೀಯ ಪ್ರಭಾವಿ ರಾಜಕಾರಣಿ ಮತ್ತು ತಾಯಿ ಹರಿಹರಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ. ಇವರುಗಳ ಪ್ರಭಾವವನ್ನು ಬಳಸಿಕೊಂಡು ರಾಜ್ಯ ಸರ್ಕಾರ ದಲಿತರಿಗೆ ಮತ್ತು ಅಲ್ಪಸಂಖ್ಯಾತರಿಗೆ ಕೊಡುವ ಹಲವು ಸಬ್ಸಿಡಿ ಯೋಜನೆಗಳನ್ನು ಕೊಡಿಸುವುದಾಗಿ ವಂಚಿಸಿ ನೈಜ ಫಲಾನುಭವಿಗಳಾಗಿರುವ ದಲಿತರು, ರೈತರು ಮತ್ತು ಅಲ್ಪಸಂಖ್ಯಾತರಿಗೆ ಮೋಸಮಾಡಿ ಹಣವನ್ನು ದೋಚಿದ್ದಾನೆ. ಇವನ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ನಾಲ್ಕು ದೂರುಗಳು ದಾಖಲಾಗಿದ್ದು, ಎಫ್‌ಐಆರ್ ಆಗಿದೆ” ಎಂದರು.
“ನಾಗರಾಜನ ವಿರುದ್ಧ ಈವರೆಗೂ ನಾಲ್ಕು ದೂರುಗಳು ದಾಖಲಾಗಿದ್ದರೂ ಸಂಬಂಧಪಟ್ಟ ಹೊಳೆನರಸೀಪುರ ಪೊಲೀಸರು ಯಾವುದೇ ಕ್ರಮವನ್ನು ಕೈಗೊಳ್ಳದೆ, ಬಂಧಿಸದಿರುವುದು, ವಂಚಕರ ಪರವಾದ ನಿಲುವು ಹೊಂದಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ದಲಿತರ ಹೆಸರಿನಲ್ಲಿರುವ ಯೋಜನೆಗಳನ್ನು ಇತರರಿಗೆ ಕೊಡಿಸುವುದಾಗಿ ಹಣದ ವಂಚನೆ ಮಾಡಿರುವ ನಾಗರಾಜು ಸಿ ಎಸ್ ನೇರವಾಗಿ ದಲಿತರಿಗೆ ಮೋಸ ಮಾಡಿದ್ದು, ಇವನ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿಕೊಂಡು ಆತನನ್ನು ಬಂಧಿಸಿ ತನಿಖೆಗೆ ಒಳಪಡಿಸಿ ಜತೆಗೆ ಮೋಸಕ್ಕೆ ಒಳಗಾಗಿರುವ ರೈತರಿಗೆ ಹಣವನ್ನು ವಾಪಸ್ ಕೊಡಿಸಬೇಕು” ಎಂದು ಆಗ್ರಹಿಸಿದರು.
“ಇಡೀ ಪ್ರಕರಣವನ್ನು ನೋಡಿದರೆ ಈ ಕೆಲಸ ಕೇವಲ ನಾಗರಾಜು ಸಿ ಎಸ್ ಒಬ್ಬನಿಂದ ಮಾತ್ರವಲ್ಲದೇ ಇದರಲ್ಲಿ ಅವನ ತಂದೆ ಸಣ್ಣೇಗೌಡ(ಶಿವಣ್ಣ) ಮತ್ತು ನಾಗರಾಜು ಸಿ ಎಸ್ ಕೆಲಸ ಮಾಡುತ್ತಿದ್ದ ನಾಗರಿಕ 360 ಸಂಸ್ಥೆ ಮತ್ತಿತರ ಸ್ವಯಂ ಸೇವಾ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿರುವುದು ಗೊತ್ತಾಗುತ್ತಿದೆ. ನಾಗರಾಜ ಹಲವು ರಾಜಕಾರಣಗಳ ಹೆಸರುಗಳನ್ನು ಬಳಸಿಕೊಂಡಿರುವುದು ಮಾತ್ರವಲ್ಲದೆ, ತಹಶೀಲ್ದಾರ್‌ಗಳ ಹೆಸರುಗಳನ್ನೂ ದುರುಪಯೋಗಪಡಿಸಿಕೊಂಡು ರೈತರನ್ನು ನಂಬಿಸಿ ಮೋಸ ಮಾಡಿದ್ದಾನೆ” ಎಂದು ದೂರಿದರು.
“ಸಿ ಎಸ್ ನಾಗರಾಜ ಹೊಳೆನರಸೀಪುರ ತಾಲೂಕಿನ ರೈತರಿಗೆ ಮೋಸ ಮಾಡಿರುವುದು ಮಾತ್ರವಲ್ಲದೇ ಇದೇ ರೀತಿ ಜಿಲ್ಲೆಯಲ್ಲಿ ಸಾಕಷ್ಟು ಜನರಿಗೆ ಮೋಸ ಮಾಡಿ ವಂಚಿಸಿರುತ್ತಾನೆ. ಇದರ ಕುರಿತು ಬುವನಹಳ್ಳಿಯ ತುಳಸಿರಾಮ್ ಎಂಬುವವರಿಗೆ ₹5,35,000 ಮೋಸ ಮಾಡಿರುವ ಕುರಿತು 2024ರ ಡಿಸೆಂಬರ್ 6ರಂದು ಹಾಸನದ ಬಡಾಬವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಎಫ್‌ಐಆರ್ ಕೂಡ ಆಗಿದೆ. ಪ್ರಕರಣ ನ್ಯಾಯಾಲಯದಲ್ಲಿದೆ. ಇದನ್ನು ಗಮನಿಸಿದರೆ ಇಂತಹ ಜಾಲದಲ್ಲಿ ಹಲವರು ಸಿಕ್ಕಿಹಾಕಿಕೊಂಡು ಮೋಸಹೋಗಿರುವ ಸಾಧ್ಯತೆಗಳಿವೆ” ಎಂದು ಹೇಳಿದರು.
ವಿವಿಧ ರೈತರಿಂದ ಹಣ ಹಣಪಡೆದ ವಿವರ
1 ಗೋಪಾಲಕೃಷ್ಣ ಬಿನ್ ಗೋವಿಂದೇಗೌಡ, ಕರಗನಹಳ್ಳಿ 17,16,000/-
2 ಮಧು ಬಿ ಎಸ್ ಬಿನ್ ಶಿವಪ್ಪ, ಪಡವಲಹಿಪ್ಪೆ 35,00,000/-
3 ಶೃತಿ ಕೋಮ್ ಲೋಕೇಶ್, ಕರಗನಹಳ್ಳಿ 4,05,400/-
4 ಅಭಿಲಾಶ ಕೋಮ್ ಪ್ರಕಾಶ, ಮಾರಶೆಟ್ಟಿಹಳ್ಳಿ 3,04,000/-
5 ಯೋಗಣ್ಣ ಬಿನ್ ಈರೇಗೌಡ, ಉದ್ದೂರು ಹೊಸಹಳ್ಳಿ 1,30,000/-
ಒಟ್ಟು 60,55,400/-
ಈ ಮೇಲ್ಕಂಡ ಪ್ರಕರಣವನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ದಲಿತರು ಮತ್ತು ರೈತರಿಗೆ ಮೋಸ, ವಂಚನೆ ಮಾಡಿರುವ ಸಿ ಎಸ್ ನಾಗರಾಜನನ್ನು ಕೂಡಲೇ ಬಂಧಿಸಬೇಕು. ಈ ಕೃತ್ಯದಲ್ಲಿ ಸಹಕರಿಸಿದ ಅವರ ತಂದೆ ತಾಯಿ ಮತ್ತಿತರರನ್ನು ತನಿಖೆಗೊಳಪಡಿಸಿ ಸೂಕ್ತ ಕಾನುನು ಕ್ರಮ ಜರುಗಿಸಿ ಹಣ ಕಳೆದುಕೊಂಡ ರೈತರಿಗೆ ಹಣವನ್ನು ವಾಪಸ್ ಕೊಡಿಸಬೇಕು ಹಾಗೂ ನೈಜ ಫಲಾನುಭವಿಗಳಾದ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಯೋಜನೆಗಳಲ್ಲಿ ಮೋಸವಾಗದಂತೆ ಎಚ್ಚರಿಕೆ ವಹಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಅಪಘಾತದಲ್ಲಿ ಅಜ್ಜವಾರದ 4 ಮಂದಿ ಯುವಕರು ಸಾವು: ಮೃತರ ಸ್ವ-ಗ್ರಾಮಕ್ಕೆ ಶಾಸಕ ಪ್ರದೀಪ್ ಈಶ್ವರ್ ಭೇಟಿ
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್ ಆರ್ ನವೀನ್ ಕುಮಾರ್, ಕರ್ನಾಟಕ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಎಂ ಜಿ ಪೃಥ್ವಿ, ದಲಿತ ಮುಖಂಡ ರಾಜಶೇಖರ್ ಹುಲಿಕಲ್, ಸಿಐಟಿಯು ಮುಖಂಡರಾ ಅರವಿಂದ್, ಶೈಲಜಾ, ವೀಣಾ, ಎಸ್‌ಎಫ್ಐ ಮುಖಂಡ ರಮೇಶ್ ಮತ್ತು ಸಂತ್ರಸ್ತ ರೈತರಾದ ಮಧು ಪಿ ಎಸ್, ಗೋಪಾಲಕೃಷ್ಣ, ಶೃತಿ, ಲೋಕೇಶ್ ಸೇರಿದಂತೆ ಹಲವರು ಇದ್ದರು.





