ಆರ್ ಟಿ ಸಿ ದುರಸ್ಥಿಗಾಗಿ ₹12 ಸಾವಿರ ಲಂಚ ಪಡೆಯುತ್ತಿದ್ದ ಆರೋಪದಡಿ ತಹಶೀಲ್ದಾರ ಕಚೇರಿಯ ಶಿರಸ್ತೆದಾರ ಹಾಗೂ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು (ಎಸ್ಡಿಎ) ಹಾವೇರಿ ಜಿಲ್ಲಾ ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ಲ ತಹಸೀಲ್ದಾರ್ ಕಚೇರಿಯಲ್ಲಿ ಶಿರಸ್ತೆದಾರ ತಮ್ಮಣ್ಣ ಕಾಂಬಳೆ, ಎಸ್ಡಿಎ ಗೂಳೆಪ್ಪ ಮನಗೂಳಿ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಎಸ್ಡಿಎ ಶಿವಾನಂದ ಬಡಿಗೇರ್ ಸೇರಿದಂತೆ ಮೂವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬೊಮ್ಮನಹಳ್ಳಿ ಗ್ರಾಮದ ಶಂಕ್ರಪ್ಪ ಗುಮಗುಂಡಿ ಅವರ ಆರ್ಟಿಸಿ ದುರಸ್ಥಿ ಅರ್ಜಿಯ ಪ್ರಕ್ರಿಯೆ ಮಾಡಲು ಲಂಚ ಬೇಡಿಕೆಯಿಟ್ಟಿದ್ದ ಮೂವರೂ, ಹಣ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
“ದುರಸ್ತಿ ಮಾಡಲು ಆರೋಪಿಗಳು ₹ 12 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದರು. ಹಾನಗಲ್ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಪುರಾವೆ ಸಮೇತ ಸೆರೆ ಹಿಡಿಯಲಾಗಿದೆ” ಎಂದು ಲೋಕಾಯುಕ್ತರು ಹೇಳಿದರು.
ಈ ಸುದ್ದಿ ಓದಿದ್ದೀರಾ?
ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ನವೀನ ಬಸನಗೌಡ ಪಾಟೀಲ ಎಂಬುವವರು ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.





