“ಪ್ರತಿಯೊಂದು ತಾಲೂಕಿನಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕು. ‘ಕೆಲವೊಂದು ಕಡೆ ಖರೀದಿ ಕೇಂದ್ರ ಪ್ರಾರಂಭಿಸಿದ್ದೇವೆ. ಅಲ್ಲಿಗೆ ಹೋಗಿ ಹೆಸರು ನೋಂದಣೆ ಮಾಡಿಕೊಳ್ಳಿ’ ಎಂದು ತಾವು ಜಿಲ್ಲಾಧಿಕಾರಿ ತಿಳಿಸಿದ್ದೀರಿ. ಎಲ್ಲರೂ ಅಲ್ಲಿಗೆ ಹೋಗಿ ಮೆಕ್ಕೆಜೋಳವನ್ನು ಕೊಟ್ಟು ಬರಲು ಆಗುವುದಿಲ್ಲ. ತಾಲೂಕಿಗೆ ಒಂದು ಖರೀದಿ ಕೇಂದ್ರ ಸ್ಥಾಪನೆ ಮಾಡಲೇಬೇಕು” ಎಂದು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷರು ಭುವನೇಶ್ವರ ಶಿಡ್ಲಾಪುರ ಅವರು ಹಾವೇರಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
“ಹೊಲದಲ್ಲಿ ದುಡಿಯುವ ರೈತರು ಬೀದಿಗೆ ಬಂದು, ಮಳೆ ಚಳಿ ಎನ್ನದೆ ಹೋರಾಟದ ಹಾದಿ ಹಿಡಿಯಲಿಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ಕಾರಣವಾಗಿದೆ. ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿ ಮಾಡಬೇಕಾದರೂ ಹೋರಾಟ ಮಾಡಿ ಪಡೆಯಬೇಕು. ಬೆಳೆದೆ ಬೆಳೆಯನ್ನು ಮಾರಲು ಸಹಿತ ಹೋರಾಟ ಮಾಡಬೇಕು. ಬೆಳೆಯನ್ನು ತೆಗೆದುಕೊಳ್ಳಲು ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇರುವುದಿಲ್ಲ. ಸರಿಯಾದ ದರ ಇರುವುದಿಲ್ಲ” ಎಂದು ತಿಳಿಸಿದರು.
“ಒಬ್ಬ ರೈತರಿಗೆ ಕನಿಷ್ಠ ಒಂದು ನೂರು ಕ್ವೀಟಲ್ ಮೆಕ್ಕೆಜೋಳವನ್ನು ಸರ್ಕಾರ ಖರೀದಿ ಮಾಡಬೇಕು. ಹಾವೇರಿ ಜಿಲ್ಲೆಯಲ್ಲಿ 12 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಇದೆ. ಎಲ್ಲವನ್ನು ಸರ್ಕಾರವೇ ಖರೀದಿ ಮಾಡಬೇಕು. ಸರ್ಕಾರ ಖರೀದಿ ಮಾಡಲು ಆಗದಿದ್ದರೆ, ದರವನ್ನು ಏಕೆ ನಿಗದಿ ಮಾಡಬೇಕಿತ್ತು? ನೀವು ಮಾಡಿದ ದರ ನಮಗೆ ತೃಪ್ತಿ ತಂದಿಲ್ಲ. ಮೆಕ್ಕೆಜೋಳಕ್ಕೆ ಸರಿಯಾದ ಬೆಲೆಯನ್ನು ಕೊಡಬೇಕೆಂದು ನಿರಂತರವಾಗಿ ರಾಜ್ಯದ ತುಂಬೆಲ್ಲ ಹೋರಾಟ ನಡೆಯುತ್ತಿದೆ” ಎಂದು ತಿಳಿಸಿದರು.
“ಆದಕಾರಣ ಸರಕಾರ ಎಚ್ಚೆತ್ತುಕೊಂಡು ಖರೀದಿ ಕೇಂದ್ರ ಸ್ಥಾಪಿಸಬೇಕು.ರೈತ ಹೋರಾಟದ ಹಾದಿ ಹಿಡಿದರೆ ಹೊಲದಲ್ಲಿ ದುಡಿಯುವವರು ಯಾರು? ಬೆಳೆ ಬೆಳೆಯುವವರು ಯಾರು? ದೇಶಕ್ಕೆ ಅನ್ನ ಹಾಕುವರು ಯಾರು? ಇದನ್ನು ಮನಗಂಡು ಪ್ರತಿ ತಾಲೂಕಿಗೆ ಒಂದರಂತೆ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಸ್ಥಾಪಿಸಬೇಕು” ಎಂದು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಸರಕಾರಕ್ಕೆ ಮನವಿ ಮಾಡಿದರು.





