ಅನುದಾನದ ಕೊರತೆ, ದಾಖಲಾತಿ ಕೊರತೆ ನೆಪವೊಡ್ಡಿ ವಸತಿ ನಿಲಯವನ್ನು ಬಂದ್ ಮಾಡಲು ಆಡಳಿತ ಮಂಡಳಿ ಆದೇಶ ಹೊರಡಿಸಿದ್ದು, ಹತ್ತಾರು ವರ್ಷಗಳಿಂದ ವಸತಿ ನಿಲಯದಲ್ಲಿ ಆಶ್ರಯ ಪಡೆದಿದ್ದ ವಿಶೇಷ ಚೇತನ ಉದ್ಯೋಗಸ್ಥ ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ದಿಕ್ಕು ತೋಚದಂತಾಗಿದೆ.
ಹಾವೇರಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಕಲ್ಮೇಶರ ಗ್ರಾಮೀಣ ವಿದ್ಯಾಸಂಸ್ಥೆಯು, ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನುದಾನದಲ್ಲಿ ಉದ್ಯೋಗಸ್ಥ ಮಹಿಳೆಯರು ಹಾಗೂ ವಿಶೇಷ ಚೇತನ ವಿದ್ಯಾರ್ಥಿನಿಯರ ವಸತಿ ನಿಲಯವನ್ನು ನಡೆಸುತ್ತಿತ್ತು. ಸರಕಾರದ ಯಾವುದೇ ಆದೇಶವಿಲ್ಲದೆ ದಿಢೀರನೇ ಅನುದಾನದ ಕೊರತೆ, ದಾಖಲಾತಿ ಕೊರತೆಯ ನೆಪವೊಡ್ಡಿ ವಸತಿ ನಿಲಯವನ್ನು ಬಂದ್ ಮಾಡಲು ಹೊರಟಿದ್ದು, ಇದರಿಂದ ಆಶ್ರಯ ಪಡೆದಿದ್ದ ವಿಶೇಷ ಚೇತನ ವಿದ್ಯಾರ್ಥಿಗಳು, ಮಹಿಳೆಯರು ಕಂಗಲಾಗಿದ್ದಾರೆ.

ಕಲ್ಮೇಶ್ವರ ಗ್ರಾಮೀಣ ವಿದ್ಯಾ ಸಂಸ್ಥೆ ವತಿಯಿಂದ 2007ರಲ್ಲಿ ವಸತಿ ನಿಲಯ ಆರಂಭವಾಗಿತ್ತು. ಆಗ ವಸತಿ ನಿಲಯದಲ್ಲಿ ಮೂವತ್ತರಿಂದ ನಲವತ್ತು ವಿಶೇಷ ಚೇತನ ಮಹಿಳೆಯರು ಆಶ್ರಯ ಪಡೆದಿದ್ದರು. ಕೊರೋನ ನಂತರದಲ್ಲಿಯೂ ವಸತಿ ನಿಲಯ ಚೆನ್ನಾಗಿ ನಡೆಯುತ್ತಿತ್ತು. ದಿನ ಕಳೆದಂತೆ ಅಲ್ಲಿದ್ದ ಮಹಿಳೆಯರ ಸಂಖ್ಯೆ ಕ್ಷೀಣಿಸುತ್ತಾ ಬಂತು. 2024ರಲ್ಲಿ ಕೇವಲ ಐದು ಮಹಿಳೆಯರು ಮಾತ್ರ ವಸತಿ ನಿಲಯದಲ್ಲಿದ್ದರು. ‘ಕಡಿಮೆ ದಾಖಲಾತಿ ಇರುವ ಕಾರಣಕ್ಕೆ ವಸತಿ ನಿಲಯ ಬಂದ್ ಮಾಡುತ್ತೇವೆ’ ಎಂದು ಕಲ್ಮೇಶ್ವರ ವಿದ್ಯಾಸಂಸ್ಥೆ ಹೇಳುತ್ತಿದೆ.

2024 ಜೂನ್ ತಿಂಗಳಿನಿಂದಲೇ ವಸತಿ ನಿಲಯವನ್ನು ಬಂದ್ ಮಾಡಲಾಗುತ್ತದೆ ಎಂದು ಸಂಸ್ಥೆಯ ಮಂಡಳಿಯವರು ಹೇಳಿದ್ದರು. ಇದೀಗ ಏಪ್ರಿಲ್ 1ರಿಂದ ವಸತಿ ನಿಲಯ ಬಂದ್ ಮಾಡಲಾಗುತ್ತದೆ ಎಂದು ಆದ್ದೇಶಿಸಿದ್ದಾರೆ. ಇದರ ವಿರುದ್ಧ ಮಹಿಳೆಯರು ಪತ್ರಭಟನೆ ನಡೆಸುವುದಾಗಿ ಹೇಳಿದ್ದಾರೆ.
“ದಾಖಲಾತಿ ಕೊರತೆ ಇರುವ ಕಾರಣದಿಂದ ವಸತಿ ನಿಲಯವನ್ನು ಬಂದ್ ಮಾಡುತ್ತಿದ್ದೇವೆ. ಸರಕಾರದ ಹಣ ವ್ಯಯ ಆಗಬಾರದೆಂದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಲ್ಮೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎನ್. ಎಚ್ ದಯಾನಂದ ಅವರು ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ವಿಶೇಷ ಚೇತನ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಪಡೆದು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದ್ದ ವಸತಿ ನಿಲಯವನ್ನು ಮುಚ್ಚಲು ಮುಂದಾಗಿರುವ ನಿರ್ಧಾರದಿಂದ ಮುಂದಿನ ದಾರಿ ಕಾಣದಾಗಿದೆ ಎಂದು ಆಶ್ರಯ ಪಡೆದಿದ್ದ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಈದಿನ ಡಾಟ್ ಕಾಮ್ ಜೊತೆಗೆ ವಿಶೇಷ ಚೇತನ ವಿದ್ಯಾರ್ಥಿನಿ ಹೇಮಾ ಪ್ರಕಾಶ್ ಮಾತನಾಡಿ, “ನೂರಾರು ಕನಸುಗಳನ್ನು ಕಟ್ಟಿಕೊಂಡು ಸ್ವಂತ ಕಾಲಮೇಲೆ ನಿಂತು, ಘನತೆಯ ಜೀವನವನ್ನು ರೂಪಿಸಿಕೊಳ್ಳಬೇಕೆಂಬ ಆಸೆಗೆ ಆಶ್ರಯ ಬೇಕಿದೆ. ಸರ್ಕಾರದ ಅನುದಾನ ಬರುತ್ತಿಲ್ಲ ಎಂದು ಸಂಸ್ಥೆ ಮುಖ್ಯಸ್ಥರು ನಿಮ್ಮ ಮನೆಗಳಿಗೆ ಹೋಗಿ ಎಂದಿದ್ದಾರೆ. ಮನೆಗೆ ಹೋದರೆ ಸಮಾಜದಲ್ಲಿ ಬದುಕುವುದು ಬಹಳಷ್ಟು ಕಷ್ಟವಾಗುತ್ತದೆ. ಬಸ್ ಗಳಲ್ಲಿ, ರಸ್ತೆಗಳಲ್ಲಿ ವಿಪರೀತ ಜನಸಂದಣಿಯ ಮಧ್ಯೆ ಓಡಾಡಲು ಕಷ್ಟವಾಗುತ್ತದೆ” ಎಂದು ಅಳಲನ್ನು ತೋಡಿಕೊಂಡರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ವಿಶೇಷ ಚೇತನರಿಗೆ ಪುನರ್ ವಸತಿ ಕಲ್ಪಿಸುವಲ್ಲಿ ಭ್ರಷ್ಟಾಚಾರದ ದೂರುಗಳು ಕೇಳಿಬಂದಿವೆ. ವಸತಿ ನಿಲಯದಲ್ಲಿಯೂ ಲೋಪಗಳು ಕಂಡು ಬಂದಿವೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಹಾಗೂ ವಿಶೇಷ ಚೇತನ ಮಹಿಳೆಯರಿಗೆ ಶಾಶ್ವತ ವಸತಿ ನಿಲಯವನ್ನು ಸ್ಥಾಪಿಸಿ ಅನುಕೂಲ ಮಾಡಬೇಕೆಂದು” ಆಗ್ರಹಿಸಿದರು.

ವಿಶೇಷ ಚೇತನರ ಪಾಲಕರ ಒಕ್ಕೂಟದ ರಾಜ್ಯ ಪ್ರದಾನ ಕಾರ್ಯದರ್ಶಿ ರಂಗಪ್ಪ ದಾಸರ ಮಾತನಾಡಿ, “ವಿಶೇಷ ಚೇತನ ವಿದ್ಯಾರ್ಥಿನಿಯರ ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ನ್ಯಾಯ ಸಿಗಬೇಕು. ವಸತಿ ನಿಲಯದಲ್ಲಿ ನಡೆಯುತ್ತಿರುವ ಅವ್ಯವಸ್ಥೆ, ಶೋಷಣೆ, ಅನ್ಯಾಯದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಕಲ್ಮೇಶ್ವರ ವಿದ್ಯಾ ಸಂಸ್ಥೆಯವರು ವಸತಿ ನಿಲಯವನ್ನು ದಿಢೀರನೇ ಬಂದ್ ಮಾಡಿ ವಿಶೇಷ ಚೇತನ ಮಹಿಳೆಯರನ್ನು ಹೊರ ಹಾಕುತ್ತಿರುವುದು ಖಂಡನೀಯ. ಈ ಕುರಿತು ಹೋರಾಟ ಮಾಡಲಾಗುವುದೆಂದು” ಎಚ್ಚರಿಕೆ ನೀಡಿದರು.
ಎಲ್ಲ ಇದ್ದು ಏನು ಮಾಡಲಾಗದೆ ಇರುವವರ ನಡುವೆ ವಿಶೇಷ ಚೇತನ ಮಹಿಳೆಯರು ಸಮಾಜದಲ್ಲಿ ತಲೆ ಎತ್ತಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತೇವೆ ಎಂದು ಹೇಳುವವರಿಗೆ ಸರಕಾರ ಸ್ವಂತ ಕಟ್ಟಡ ನಿರ್ಮಿಸಿ, ಆಶ್ರಯ ಕಲ್ಪಿಸಬೇಕಿದೆ.





