“ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಾಖಲೆಯ 9ನೇ ಬಜೆಟ್ ಮಂಡಿಸಿದ್ದಾರೆ. ದೇಶದಲ್ಲಿ ಆಳವಾಗಿರುವ ನಿರುದ್ಯೋಗ ಸೇರಿದಂತೆ ಯುವಜನತೆ ಎದುರಿಸುತ್ತಿರುವ ಸಂಕಷ್ಟಗಳನ್ನು ಮರೆಮಾಚುವ ಅಂಕಿ ಸಂಖ್ಯೆ ಮೇಲಾಟದ ಬಜೆಟ್ ಆಗಿದೆ. ಇದರಿಂದ ಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ಭಾರತದ ಕೋಟ್ಯಂತರ ಯುವಜನರಿಗೆ ಯಾವುದೇ ಉದ್ಯೋಗದ ನೈಜ ಭರವಸೆ ಹಾಗೂ ಭದ್ರತೆ ಮೂಡಿಸುವಲ್ಲಿ ವಿಫಲವಾಗಿದೆ” ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು “ಔಪಚಾರಿಕ ವಲಯಗಳಲ್ಲಿನ ಉದ್ಯೋಗದ ಅನಿಶ್ಚಿತೆಯು ಲಕ್ಷಾಂತರ ಜನರನ್ನು ಅಸುರಕ್ಷಿತ ಗಿಗ್ ಕೆಲಸಕ್ಕೆ ತಳ್ಳಿದೆ. ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಕಾನೂನು ಮಾನ್ಯತೆ ನೀಡಿರುವುದನ್ನು ಹೊರತುಪಡಿಸಿ ಬಜೆಟ್ ಅನುದಾನದಲ್ಲಿ ಯಾವುದೇ ಹಂಚಿಕೆಯನ್ನು ಒದಗಿಸುವುದಿಲ್ಲ. ಅಸ್ತಿತ್ವದಲ್ಲಿರುವ ಬದ್ಧತೆಗಳನ್ನು ಗೌರವಿಸಲು ವಿಫಲವಾಗಿದೆ. ಇದೇ ರೀತಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕೋಟ್ಯಾಂತರ ಕಾರ್ಮಿಕರ ಕುರಿತು ಯಾವುದೇ ನಿರ್ದಿಷ್ಟ ಕಲ್ಯಾಣ ಕಾರ್ಯಕ್ರಮ ಹೊಂದಿಲ್ಲದ ಕಾರ್ಮಿಕ ವಿರೋಧಿ ಬಜೆಟ್ ಆಗಿದೆ” ಎಂದರು.
“ಈಗಾಗಲೇ ಅಸಮಾನತೆಯ ಸನ್ನಿವೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ನಡುವೆ ಬದುಕಲು ಹೆಣಗಾಡುತ್ತಿರುವ ದೇಶದ ಕಾರ್ಮಿಕರಿಗೆ ಯಾವುದೇ ಭದ್ರತೆ ಒದಗಿಸುವಲ್ಲಿ ವಿಫಲವಾಗಿರುವ ಜನವಿರೋಧಿ ಬಜೆಟ್ ಆಗಿದೆ. ಜನ ಸಾಮನ್ಯರ ಹಿತವನ್ನು ರಕ್ಷಿಸಲು ಕನಿಷ್ಠ ಕಾಳಜಿ ಹಾಗೂ ಮುತುವರ್ಜಿಯ ಅಂಶಗಳನ್ನು ಹೊಂದಿರದ ಈ ಬಜೆಟ್‌ನಲ್ಲಿ ಖಾಸಗಿ ಕಾರ್ಪೊರೇಟ್ ವರ್ಗಗಳಿಗೆ ಹೆಚ್ಚು ಪ್ರೋತ್ಸಾಹ ಹಂಚಿಕೆಗಳನ್ನು ಮತ್ತಷ್ಟು ವಿಸ್ತರಿಸುವ ಮತ್ತು ಹೆಚ್ಚಿಸುವ ಮೂಲಕ ಬಂಡವಾಳಶಾಹಿ-ಕಾರ್ಪೋರೇಟ್ ಸ್ನೇಹಿ ಬಜೆಟ್ ಆಗಿದೆಯಲ್ಲದೇ ಸಾಮಾನ್ಯ ಜನರ ಹಿತಾಸಕ್ತಿಗೆ ದ್ರೋಹ ಬಗೆದಿದೆ” ಎಂದು ಹೇಳಿದರು.
ಈ ಯುವ ವಿರೋಧಿ, ಕಾರ್ಮಿಕ ವಿರೋಧಿ, ಕಾರ್ಪೊರೇಟ್ ಪರವಾದ ಬಜೆಟ್ ಅನ್ನು ಡಿವೈಎಫ್ಐ ತಿರಸ್ಕರಿಸುತ್ತದೆ. ಮತ್ತು ಈ ನೀತಿಗಳ ವಿರುದ್ಧ ಒಗ್ಗಟ್ಟಿನ ಪ್ರತಿರೋಧವನ್ನು ತೀವ್ರಗೊಳಿಸಲು ದೇಶದ ಯುವಜನರಿಗೆ ಕರೆ ನೀಡುತ್ತದೆ” ಎಂದರು.





