“ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಡಾ. ಬಿ.ಅರ್. ಅಂಬೇಡ್ಕರವರು ಕೇಂದ್ರ ಕಾರ್ಮಿಕ ಸಚಿವರಾದಾಗ ಜಾರಿಯಾದ 43 ಕಾರ್ಮಿಕ ಕಾನೂನುಗಳನ್ನು ಒಂದುಗೂಡಿಸಿ 4 ಕಾರ್ಮಿಕ ಸಂಹಿತೆಗಳನ್ನಾಗಿಸಿ ಕೇಂದ್ರ ಸರಕಾರ ಜಾರಿಮಾಡಲು ತುದಿಗಾಲ ಮೇಲೆ ನಿಂತಿದೆ. ಈ ಸಂಹಿತೆಗಳು ಜಾರಿಯಾದರೆ ದೇಶದ ದುಡಿಯುವ ಜನ ನವ ಗುಲಾಮಗಿರಿಗೆ ತಳ್ಳಪಡುತ್ತಾರೆ. ಕಾರ್ಪೋರೇಟ್ ತಿಮಿಂಗಗಳಿಗೆ ದೇಶವನ್ನು ಲೂಟಿ ಮಾಡಲು ಅವಕಾಶ ಕಲ್ಪಿಸಲು ಕಾರ್ಮಿಕರ ಹಕ್ಕುಗಳ ಮೇಲೆ ಕೇಂದ್ರದ ಬಿಜೆಪಿ ನೇತೃತ್ದ ಸರಕಾರ ತೀವ್ರ ದಾಳಿ ನಡೆಸುತ್ತಿದೆ. ಈ ದಾಳಿಗಳನ್ನು ಹಿಮ್ಮೇಟ್ಟಿಸಲು ದುಡಿಯುವ ಜನರ ಐಕ್ಯ ಹೋರಾಟ ತೀವ್ರಗೊಳಿಸಲು ಕಾರ್ಮಿಕರು ಸಜ್ಜಾಗಬೇಕು” ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.
ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ಸಿಐಟಿಯು ಜಿಲ್ಲಾ ಸಮ್ಮೇಳನವನ್ನು ಕಂಜರ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
“ಕಾರ್ಪೋರೇಟ್ ಕೋಮುವಾದದ ಅನೈತಿಕ ಸಂಬಂಧದ ಕೇಂದ್ರ ಸರಕಾರ ತನ್ನ ಜನವಿರೋಧಿ ನೀತಿಗಳನ್ನು ಜಾರಿಮಾಡಲು ಜನರ ದಿಕ್ಕು ತಪ್ಪಿಸಲು ಕೋಮುವಾದಿ ಹಾಗೂ ಭಾವನಾತ್ಮಕ ವಿಷಯಗಳನ್ನು ಜನರ ಮಧ್ಯ ನಿರಂತರ ಹರಿಬಿಡುತ್ತಿದೆ. ಈ ದ್ವಿಭಜಕ ನೀತಿಗಳನ್ನು ಕಾರ್ಮಿಕರು ಎಚ್ಚರಿಕೆಯಿಂದ ಹಿಮ್ಮೆಟ್ಟಿಸಿ ಒಗ್ಗಟ್ಟು ಸಾಧಿಸಬೇಕು” ಎಂದು ಕರೆ ನೀಡಿದರು.
“ರಾಜ್ಯದ ಕಾಂಗ್ರೆಸ್ ಸರಕಾರ ಪರ್ಯಾಯ ನೀತಿಗಳನ್ನು ರೂಪಿಸಿಕೊಳ್ಳದೇ ಕೇಂದ್ರದ ನೀತಿಗಳಿಗೆ ಜೋತು ಬಿದ್ದಿರುವುದು ವಿಷಾದನೀಯ. ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ, ಕೆಲಸ ಅವಧಿ ಸೇರಿದಂತೆ ಬಹುಮುಖ್ಯ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವುದನ್ನು ವಿರೋಧಿಸಿ ಮುಂದೆ ತೀವ್ರ ಹೋರಾಟವನ್ನು ಸಿಐಟಿಯು ನಡೆಸಲಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ವಕೀಲರ ಸಂಘದ ಕಾರ್ಯದರ್ಶಿ ನಾರಾಯಣ ಕಾಳೆ ಮಾತನಾಡಿ, ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ, ಕಾರ್ಮಿಕ ಕಾನೂನು ಹಾಗೂ ಸಾಮಾಜಿಕ ಭದ್ರತೆಯಿಂದ ವಂಚಿತರಾದ ಕಾರ್ಮಿಕರನ್ನು ಸಿಐಟಿಯು ಅಡಿ ಸಂಘಟಿಸುವ ಅವರಿಗೆ ನ್ಯಾಯ ಕೊಡಿಸುವ ಗಂಭೀರ ಪ್ರಯತ್ನಗಳನ್ನು ಮಾಡಲಾಗುವುದು” ಎಂದರು.
ಸಮ್ಮೇಳನದ ನಿರ್ಣಯಗಳು:
1. ಕೇಂದ್ರ ಸರಕಾರ ಜಾರಿಮಾಡಲಿರುವ ಕಾರ್ಮಿಕರನ್ನು ನವಗುಲಾಮಗಿರಿಗೆ ತಳ್ಳಲಿರುವ ಕಾರ್ಮಿಕ ಸಂಹಿತೆಗಳು ರದ್ದಾಗಬೇಕು.
2. ಅಸಂಘಟಿತ ಕಾರ್ಮಿಕರಿಗೆ ವಸತಿ ಸೇರಿದಂತೆ ಸಮಗ್ರ ಸಾಮಾಜಿಕ ಭದ್ರತೆ ಒದಗಿಸಬೇಕು.
3. ಖಾಯಂಮೇತರ ನೌಕರರ ಖಾಯಂಮಾತಿಗಾಗಿ ರಾಜ್ಯ ಸರಕಾರ ಶಾಸನ ರೂಪಿಸಬೇಕು.
4. ಪರಿಷ್ಕೃತ ಕನಿಷ್ಟ ವೇತನ ಕರಡು ಅಧಿಸೂಚನೆಯನ್ನು ಯಾವುದೇ ಒತ್ತಡಕ್ಕೆ ಮಣಿಯದೇ ವಿಳಂಭ ಮಾಡದೇ ಅಂತಿಮ ಅಧಿಸೂಚನೆ ಹೊರಡಿಸಬೇಕು.
5. ಯೋಜನಾ ನೌಕರರನ್ನು ಕನಿಷ್ಟ ವೇತನ ಕಾಯ್ದೆಯಡಿ ತರಬೇಕು.
ಸಮ್ಮೇಳನದ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾ ಮುಖಂಡ ಅಂದಾನೆಪ್ಪ ಕೆ. ಹೆಬಸೂರು ವಹಿಸಿದ್ದರು. ಕಾರ್ಯಕ್ರಮವನ್ನು ಬಸವರಾಜ ಬಾರ್ಕಿ ನಿರ್ವಹಿಸಿದರು, ಸಿದ್ದಮ್ಮ ಚೌಟಿ ವಂದಿಸಿದರು.
ಈ ಸುದ್ದಿ ಓದಿದ್ದೀರಾ? ದ್ವೇಷ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ನೋಟಿಸ್ ಜಾರಿ, ಪ್ರಕರಣ ದಾಖಲು
ವೇದಿಕೆಯಲ್ಲಿ ಗ್ರಾಮ ಪಂಚಾಯತ ನೌಕರ ಸಂಘಟನೆ ಮುಖಂಡರಾದ ಸುಭಾಸ್ ಸೊಟ್ಟೆಪ್ಪನವರ, ಅಂಗನವಾಡಿ ನೌಕರರ ಸಂಘಟನೆಯ ಮುಖಂಡರಾದ ರಾಜೇಶ್ವರಿ ಹಿರೇಮಠ, ಕಟ್ಟಡ ನಿರ್ಮಾಣ ಕಾರ್ಮಿಕ ಸಂಘಟನೆಯ ಮುಖಂಡರಾದ ಚನವೀರಯ್ಯ ಹೀರೇಮಠ, ಹಾಸ್ಟೇಲ್ ಹೊರಗುತ್ತಿಗೆ ನೌಕರರ ಸಂಘಟನೆಯ ಮುಖಂಡರಾದ ಶಾಂತಾ ವೀ ಗಡ್ಡಿಯವರ, ಹಮಾಲಿ ಕಾರ್ಮಿಕ ಸಂಘಟನೆ ಮುಖಂಡರಾದ ಹುಸೇನಸಾಬ್ ಏರಿಮನಿ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಖಾಯಮೇತರರ ನೌಕರರ ಸಂಘಟನೆಯ ಚೈತ್ರಾ ಎಸ್.ಕೆ, ಬೀಡಿ ಕಾರ್ಮಿಕ ಸಂಘಟನೆಯ ರುಬಿಯಾ ಬಾನು ಅತ್ತಾರ, ವಿದ್ಯುತ್ ಹೊರಗುತ್ತಿಗೆ ನೌಕರ ಮುಖಂಡರಾದ ಚಂದ್ರು ಬೆನಕನಹಳ್ಳಿ ಇದ್ದರು. ಸಮ್ಮೇಳನದಲ್ಲಿ ಸಿಐಟಿಯು ಸಂಯೋಜಿತ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.





