“ಚಂಸು ಅವರ ಕವಿತೆಗಳನ್ನು ಒಂದು ಚೌಕಟ್ಟಿನಲ್ಲಿ ಇಟ್ಟು ಮಾತನಾಡುವುದೇ ಅಸಾಧ್ಯ. ಚಂಸು ವಿಶಾಲ ವ್ಯಾಪ್ತಿಯ ಕವಿ. ಅವನೊಳಗೊಬ್ಬ ಪತ್ರಕರ್ತ ಇರುವಂತೆ, ತನ್ನ ಜನರನ್ನು ಪ್ರೀತಿಸುವ ರೈತನೂ ಇದ್ದಾನೆ” ಎಂದು ಸಾಹಿತಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಹೇಳಿದರು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರ ನಗರದಲ್ಲಿ ರವಿವಾರ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮಾತೋಶ್ರೀ ಮಹದೇವಕ್ಕ ಮಂಗಳವಾದ್ಯ ಮತ್ತು ತರಬೇತಿ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮ ಘಟಕ ಮೇಡ್ಲೆರಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕವಿ ಚಂಸು ಪಾಟೀಲರ ‘ಕುಳದ ಸಂಗಾತ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ವರ್ತಮಾನದ ಬದುಕನ್ನು ತೀವ್ರವಾಗಿ ವಿಡಂಬಿಸುತ್ತಲೇ ಅಚ್ಚರಿ ಹುಟ್ಟಿಸುವ ಚಂಸು ಕಾವ್ಯ ಎಚ್ಚರದ ಗಂಟೆಯಾಗಿಯೂ ಮಾರ್ದನಿಸುತ್ತದೆ ಎಂದರು.
“ಸಮಕಾಲೀನ ಜಗತ್ತಿನ ಎಲ್ಲ ಆಗುಹೋಗುಗಳನ್ನು ಸಾಮಾನ್ಯನೊಬ್ಬನ ಕಣ್ಣಿನಿಂದ ನೋಡಿ, ಜನಪರವಾಗಿ ಪ್ರತಿನುಡಿಯುವ ಧಾವಂತ ಕುಳದ ಸಂಗಾತದ ಕವಿತೆಗಳಲ್ಲಿದೆ. ಕೃಷಿ ಸಮಸ್ಯೆಗಳೂ ಸೇರಿದಂತೆ, ಜನಸಾಮಾನ್ಯರ ದೈನಂದಿನ ನಿಟ್ಟುಸಿರನ್ನೆ ಪಿಸುಗುಡುವಂತೆ ಇಲ್ಲಿನ ಕವಿತೆಗಳು ಎದೆ ತಟ್ಟುತ್ತವೆ. ಕಾವ್ಯದ ವಿನ್ಯಾಸದಲ್ಲಿ ಹೊಸ ಪ್ರಯೋಗ ಹಾಗೂ ವಸ್ತುವಿಷಯ ವೈವಿಧ್ಯತೆಗಳಿಂದ ‘ಕುಳದ ಸಂಗಾತ’ ವಿಶೇಷ ಎನಿಸುತ್ತದೆ” ಎಂದು ಅವರು ವಿವರಿಸಿದರು.
“ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ಜೊತೆಗೇ ಸ್ಥಳೀಯ ಘಟನಾವಳಿಗಳೂ ಇಲ್ಲಿ ಕಾವ್ಯಕ್ಕೆ ವಸ್ತು ಆಗಿವೆ. ಚಂಸು ಅವರ ಕವಿತೆಗಳು ಸಮಕಾಲೀನ ರಾಜಕೀಯದ ಬಗ್ಗೆ ಮಾತನಾಡುತ್ತಲೇ ಬಂಡವಾಳಶಾಹಿಯ ಧೋರಣೆಗಳ ಬಗ್ಗೆ ಎಚ್ಚರಿಸುತ್ತವೆ” ಎಂದು ಹೇಳಿದರು.
ಹಿರಿಯ ರೈತರೂ, ಪಿಎಲ್‌ಡಿ ಬ್ಯಾಂಕಿನ ಮಾಜಿ ನಿರ್ದೆಶಕರಾದ ಶಿವಪುತ್ರಪ್ಪ ಕೊಪ್ಪದ ಅವರು ಪುಸ್ತಕ ಬಿಡುಗಡೆ ಮಾಡಿದರು.
ಕಸಾಪ ತಾಲೂಕ ಅಧ್ಯಕ್ಷರಾದ ಪ್ರಭಾಕರ್ ಶಿಗ್ಲಿ, ಎಸ್ ಎಫ್ ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಶ್ರೀಮತಿ ಮಾದೇವಮ್ಮ ಸಾವಕ್ಕನವರ್, ಕಸಾಪ ಮೆಡ್ಲೇರಿ ಗ್ರಾಮ ಘಟಕದ ಅಧ್ಯಕ್ಷರಾದ ಮಾರುತಿ ತಳವಾರ್, ಸಂಗೀತ ತರಬೇತಿ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ್ ಸಾವಕ್ಕನವರ್, ಕವಿ ಚಂಸು ಪಾಟೀಲ, ಮಲ್ಲೇಶಪ್ಪ ಮದ್ಲೇರ ಮೊದಲಾದವರು ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ದ್ವೇಷ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ನೋಟಿಸ್ ಜಾರಿ, ಪ್ರಕರಣ ದಾಖಲು
ಇದೇ ಸಂದರ್ಭದಲ್ಲಿ ಪಿಎಚ್‌ಡಿ ಪುರಸ್ಕೃತ ಡಾ. ಮಂಜಪ್ಪ ಚಲವಾದಿ, ಡಾ. ಗುರು ಎಸ್ ಚಲವಾದಿ ಹಾಗೂ ಕಲಾವಿದರು ಮೈಲಾರಪ್ಪ ಚಲವಾದಿ, ಸಂಜೀವಪ್ಪ ದೊಡ್ಡ ಕಾಳೇರ್, ಹನುಮಂತಪ್ಪ ದೊಡ್ಡ ಕಾಳೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.





