“ಛತ್ರಿಪತಿ ಶಿವಾಜಿ ಮಹಾರಾಜ ಅಪ್ರತಿಮ ಶೂರ ಹಾಗೂ ಉತ್ತಮ ಆಡಳಿತಗಾರರಾಗಿದ್ದರು. ಇಂದಿನ ಯುವ ಸಮೂಹ ಇಂತಹ ಮಹಾನ್ ನಾಯಕರ ಆದರ್ಶಗಳನ್ನು ತಿಳಿದುಕೊಳ್ಳಬೇಕು. ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಎಫ್.ಎನ್. ಗಾಜಿಗೌಡ್ರ ಹೇಳಿದರು.
ಹಾವೇರಿ ನಗರದ ತಾಲೂಕು ಮರಾಠಾ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮರಾಠಾ ಸಮಾಜದ ಸಹಯೋಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಹಿಂದೂ ಮರಾಠಾ ಸಾಮ್ರಾಜ್ಯದ ಸ್ಥಾಪಕ ಶಿವಾಜಿ ಮಹಾರಾಜರು, ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಬರಿ ಪುಸ್ತಕದಲ್ಲಿ ಓದುವಂತಾಗಿದೆ. ಇಂದಿನ ಮಕ್ಕಳು ಮೊಬೈಲ್‌ನಲ್ಲಿ ಮುಳುಗಿಹೋಗಿದ್ದು, ಮೊಬೈಲ್ ಬಳಕೆ ಕಡಿಮೆಮಾಡಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು” ಎಂದು ಸಲಹೆ ನೀಡಿದರು.
ಉದ್ಘಾಟನೆ ನೆರವೇರಿಸಿದ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ್ ಎಲ್ ಅವರು ಮಾತನಾಡಿ, “ಶಿವಾಜಿ ಮಹಾರಾಜರು ಉತ್ತಮ ಆದರ್ಶ ಮೌಲ್ಯಗಳನ್ನು ಹೊಂದಿದ್ದು, ಶಿವಾಜಿ ಅವರ ಈ ಸಾಧನೆಗೆ ಅವರ ತಾಯಿ ಜೀಜಾಭಾಯಿ ಅವರ ಪಾತ್ರ ಬಹು ಮುಖ್ಯವಾಗಿದೆ.. ಶಿವಾಜಿ ಅವರು ಬಾಲ್ಯದಲ್ಲಿದ್ದಾಗಲೇ ಅವರಿಗೆ ರಾಮಾಯಣ, ಮಹಾಭರತ ಮತ್ತು ಧೀರ ಯೋಧರ ಕತೆಗಳನ್ನು ಹೇಳುವ ಮೂಲಕ ಸದಾ ಅವರಿಗೆ ಸ್ಫೂರ್ತಿ ನೀಡುತಿದ್ದರು. ನಿಜವಾದ ಹಿಂದೂ ರಾಷ್ಟ್ರದ ನಿರ್ಮಾತೃ ಎಂದರೆ ತಪ್ಪಾಗಲಾರದು” ಎಂದು ಹೇಳಿದರು.
ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಂ. ಎಂ. ಮೈದೂರ ಮಾತನಾಡಿ, “ಶಿವಾಜಿ ಅವರ ಆಚಾರ-ವಿಚಾರ ಬಹಳ ಜನಪ್ರಿಯವಾಗಿವೆ. ತಾಯಿಯೇ ಮೊದಲು ಗುರು, ಜೀಜಾಭಾಯಿ ಅವರ ಬೋಧನೆಯಿಂದ ಶಿವಾಜಿ ಅವರು ಜೀವನದಲ್ಲಿ ಉತ್ತಮ ಸಾಧನೆ ಮಾಡಿದರು. ಮಕ್ಕಳು ಇತಿಹಾಸವನ್ನು ಓದಬೇಕು, 12 ಮತ್ತು 16 ನೇ ಶತಮಾನದ ಮಹಾನ್ ವ್ಯಕ್ತಿಗಳನ್ನು ಸ್ಮರೀಸಬೇಕು” ಎಂದು ಹೇಳಿದರು.
ಶ್ರೀಮತಿ ರೇವತಿ ವಿವೇಕಾನಂದ ತಿಳುವಳ್ಳಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಹಿರೇಮಠ, ಜಿಲ್ಲಾ ಮಾರಾಠ ಸಮಾಜದ ಅಧ್ಯಕ್ಷ ವೆಂಕೋಜಿ, ಸಮಾಜದ ಮುಖಂಡರು ಇತರರು ಉಪಸ್ಥಿತರಿದ್ದರು.





