“ಧರ್ಮಸ್ಥಳ ಪ್ರದೇಶದ ವಿದ್ಯಾರ್ಥಿನಿ ಸೌಜನ್ಯಳನ್ನು ಕಾಮುಕರು ಬರ್ಭರವಾಗಿ ಅತ್ಯಾಚಾರವೆಸಗಿ ಕೊಲೆಗೈದು ಇಂದಿಗೆ ಹದಿಮೂರು ವರ್ಷವಾಯಿತು. ನೈಜ ಅತ್ಯಾಚಾರಿ ಹಂತಕ ಆರೋಪಿಗಳನ್ನು ಬಂಧಿಸಿ ಶಿಕ್ಷೆ ನೀಡಿ, ಬಡವರ ಮಗಳು ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಹದಿಮೂರು ವರ್ಷದಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೇಸ್, ಬಿಜೆಪಿ, ಜೆಡಿ(ಎಸ್) ಮೈತ್ರಿಕೂಟ ಸೇರಿದಂತೆ ಎಲ್ಲ ಸರಕಾರಗಳು ವಿಫಲವಾಗಿವೆ” ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಕ್ರೋಶ ವ್ಯಕ್ತಪಡಿಸಿದರು.
ಹಾವೇರಿ ಪಟ್ಟಣದಲ್ಲಿ ಗುರುವಾರ ತಹಶೀಲ್ದಾರ ಕಛೇರಿ ಎದುರು ದಲಿತ, ಎಡ, ವಿದ್ಯಾರ್ಥಿ-ಯುವಜನ, ಮಹಿಳಾ, ರೈತ-ಕಾರ್ಮಿಕ ಹಾಗೂ ಮಾನವ ಹಕ್ಕು ಸಂಘಟನೆಗಳನ್ನೊಳಗೊಂಡ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯು ಹಮ್ಮಿಕೊಂಡಿದ್ದ ‘ನ್ಯಾಯಕ್ಕಾಗಿ ಜನಾಗ್ರಹ’ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
“ವಿಶೇಷ ನ್ಯಾಯಾಲಯವು ಗುರುತಿಸಿದಂತೆ ಸೌಜನ್ಯ ಅತ್ಯಾಚಾರ-ಕೊಲೆಯ ವೈದ್ಯಕೀಯ ಸಾಕ್ಷ್ಯಗಳನ್ನು ಸಂಗ್ರಹಿಸದ, ಘಟನಾ ಸ್ಥಳದಿಂದ ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸದೇ ಸಾಕ್ಷ್ಯ ನಾಶ ಮಾಡಿದ ವೈದ್ಯಕೀಯ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸೌಜನ್ಯ, ಪದ್ಮಲತಾ, ವೇದವಲ್ಲಿ, ಆನೆ ಮಾವುತ ನಾರಾಯಾಣ ಅವರ ಕೊಲೆ ಪ್ರಕರಣಗಳ ನೈಜ ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಬೇಕು” ಎಂದು ಒತ್ತಾಯಿಸಿದರು.
“ಗ್ರಾಮೀಣಾಭಿವೃದ್ದಿ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಪರಾಧ ನಡೆದಿರುವುದು, ಮೈಕ್ರೊ ಫೈನಾನ್ಸ್ ನಡೆಸಿರುವ ಆರೋಪಗಳು ವ್ಯಾಪಕವಾಗಿದೆ. ಸಾಲ ನೀಡಿಕೆ, ವಸೂಲಾತಿ ವಿಧಾನದಲ್ಲಿ ಕಾನೂನು, ನಿಯಮಗಳನ್ನು ಉಲ್ಲಂಘಿಸುವುದು, ತೀರಾ ಅವಮಾನಕಾರಿಯಾಗಿ, ಅಮಾನವೀಯವಾಗಿ ವಸೂಲಾತಿ ನಡೆಸುವ ದೂರುಗಳು ರಾಜ್ಯದ ಹಲವು ಭಾಗಗಳಲ್ಲಿ ಕೇಳಿಬಂದಿವೆ. ವಸೂಲಾತಿಯ ಸಂದರ್ಭದ ಅಪಮಾನ, ಹಿಂಸೆ ಭರಿಸಲಾಗದೆ ಆತ್ಮಹತ್ಯೆಗಳು ಘಟಿಸಿರುವುದು, ಮರ ಮಟ್ಟು ಸಹಿತ ಅವರ ಸ್ವತ್ತುಗಳನ್ನು ಬಲವಂತವಾಗಿ ಸ್ವಾಧೀನ ಪಡಿಸಿರುವ ಹಲವು ಪ್ರಕರಣಗಳು ನಡೆದಿವೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವು ಗಂಭೀರವಾದ ಆರ್ಥಿಕ ಅಪರಾಧಗಳಾಗಿವೆ. ಇವುಗಳ ಕುರಿತು ತನಿಖೆ ಆಗಬೇಕು” ಎಂದರು.
ಅಹಿಂದ ಸಂಘಟನೆಯ ಜಿಲ್ಲಾ ಮುಖಂಡ ಬಸವರಾಜ ಹಾದಿಮನಿ ಮಾತನಾಡಿ, “ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ನೂರಾರು ಅಸಹಜ ಸಾವುಗಳು, ಆತ್ಮಹತ್ಯೆಗಳು, ಕೊಲೆಗಳು ನಡೆದಿವೆ ಎಂದು ಚರ್ಚೆಗಳು ನಡೆಯುತ್ತಿದ್ದಂತೆ, ಧರ್ಮಸ್ಥಳ ಗ್ರಾಮ ಪಂಚಾಯತ್ ನೀಡಿರುವ ಮಾಹಿತಿ ಹಕ್ಕು ದಾಖಲೆಗಳು ನಮ್ಮ ಆತಂಕವನ್ನು ಇಮ್ಮಡಿಗೊಳಿಸಿದೆ. 15 ವರ್ಷದ ಹೆಣ್ಣು ಮಗುವಿನ ಶವ ದೇವಸ್ಥಾನದ ಸ್ನಾನಘಟ್ಟದಲ್ಲಿ ಪತ್ತೆಯಾದ ದಿನವೇ ಪೋಸ್ಟ್ಮಾರ್ಟಂ ನಡೆಸಿ ದಫನ ಮಾಡಲು ಗ್ರಾಮ ಪಂಚಾಯತ್ಗೆ ಪೊಲೀಸರು ಸೂಚಿಸಿದ್ದಾರೆ. ಮೃತ ಹೆಣ್ಣು ಮಗುವಿನ ಪೊಷಕರ ಪತ್ತೆಗೆ ಪೊಲೀಸರು ಕಾನೂನಿನ ಯಾವ ಕ್ರಮವನ್ನೂ ಕೈಗೊಳ್ಳದೇ , ಕನಿಷ್ಠ ಒಂದೆರಡು ದಿನ ಕಾಯುವ ವ್ಯವಧಾನವೂ ಇಲ್ಲದೇ ಶವ ಪತ್ತೆಯಾದ ದಿನವೇ ತರಾತುರಿಯಲ್ಲಿ ಕಾನೂನು ಮೀರಿ ದಫನ ಮಾಡಿರುವ ದಾಖಲೆ ಹಲವು ಅನುಮಾನಗಳನ್ನೂ, ಅಮಾನವೀಯತೆಯ ಬಗೆಗೆ ಆಕ್ರೋಶವನ್ನೂ ತರಿಸುತ್ತದೆ” ಎಂದರು.
“ಇನ್ನೊಂದು ದಾಖಲೆ ಹೇಳುವ ಪ್ರಕಾರ, ಸುಮಾರು 45 ವರ್ಷದ ಮಹಿಳೆಯನ್ನು ಧರ್ಮಸ್ಥಳ ದೇವಸ್ಥಾನದ ಶರಾವತಿ ಲಾಡ್ಜ್ನಲ್ಲಿ ಕೊಲೆ ಮಾಡಲಾಗಿದ್ದು, ಪೊಲೀಸರು ಆ ಮಹಿಳೆಯನ್ನು ಅಪರಿಚಿತೆ ಎಂದು ಘೋಷಿಸಿದ್ದಾರೆ. ವಸತಿಗೃಹದಲ್ಲಿ ಪತ್ತೆಯಾದ ಮಹಿಳೆಯ ಅಪರಿಚಿತೆ ಆಗಲು ಹೇಗೆ ಸಾದ್ಯ? ಅದಲ್ಲದೇ, ಪತ್ತೆಯಾದ ಬಹುತೇಕ ಎಲ್ಲಾ ಶವಗಳನ್ನು ಹೂಳಲು ಸೂಚಿಸಿರುವ ಪೊಲೀಸರು, ಹೂಳಲೇಬೇಕಾದ ಕೊಲೆಯಾದ ಮಹಿಳೆಯ ಶವವನ್ನು ದಹನ ಮಾಡಲು ಸೂಚಿಸುತ್ತಾರೆ. ಗ್ರಾಮ ಪಂಚಾಯತ್ನವರು ಸಹಜವೆಂಬಂತೆ ಹೂತು ಹಾಕಬಹುದು ಎಂಬ ಕಾರಣಕ್ಕಾಗಿ ಪೊಲೀಸರು ದಫನ ಎಂದು ಬರೆದು ಆವರಣದಲ್ಲಿ ಸ್ಪಷ್ಟವಾಗಿ ದಹನ ಎಂದು ಬರೆಯುವ ಮೂಲಕ ಶವದ ಸಾಕ್ಷ್ಯ ನಾಶಮಾಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಂತಹ ಹಲವು ದಾಖಲೆಗಳು ಆರ್ಟಿಐ ಮೂಲಕ ಅಧಿಕೃತವಾಗಿ ಲಭ್ಯವಾಗಿದ್ದು, ಎಸ್ಐಟಿ ರಚನೆಯ ಸಂಬಂಧ ಹೊರಡಿಸಲಾದ ಆದೇಶದಲ್ಲಿರುವ ನಿಯಮಗಳಂತೆ ಇವೆಲ್ಲವೂ ತನಿಖೆಯಾಗಬೇಕಿದೆ” ಎಂದರು.
ಕರ್ನಾಟಕ ರಾಜ್ಯ ರೈತ ಸಂಘಟನೆಯ ಜಿಲ್ಲಾ ಮುಖಂಡ ಸುರೇಶ ಛಲವಾದಿ ಮಾತನಾಡಿ, “ಸರ್ಕಾರ ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯಬಾರದು. ವಿರೋಧ ಪಕ್ಷವಾಗಿರುವ ಬಿಜೆಪಿಯು ಬಹಿರಂಗವಾಗಿ ಎಸ್ಐಟಿ ತನಿಖೆ ಮತ್ತು ಸಾಕ್ಷಿ/ದೂರುದಾರರಿಗೆ ಬೆದರಿಕೆ ಒಡ್ಡುತ್ತಿದ್ದು ಅದನ್ನು ನಿಲ್ಲಿಸಲು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತರ ಪರವಾಗಿ ಕೆಲಸ ಮಾಡುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ಸರ್ಕಾರ ಮಾಡಬೇಕಿರುವ ಕೆಲಸವನ್ನು ಜನಪರ ಹೋರಾಟಗಾರರು ಮಾಡುತ್ತಿದ್ದಾರೆ. ಆದರೆ ಸರ್ಕಾರದ ಕೆಲ ಪ್ರಭಾವಿಗಳು ಮತ್ತು ಪೊಲೀಸರು ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುವ ಮೂಲಕ ದೂರುದಾರರ, ಸಂತ್ರಸ್ತರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ಇವೆಲ್ಲವನ್ನೂ ನಿಯಂತ್ರಿಸಿ, ಎಸ್ಐಟಿ ತನಿಖೆ ಪ್ರಾಮಾಣಿಕ, ಪಾರದರ್ಶಕವಾಗಿ ನಡೆಯುವಂತೆ ಕ್ರಮವಹಿಸಬೇಕು. ದಲಿತರ ಭೂಮಿ ಕಬಳಿಕೆಯಾಗಿದ್ದು, ಸರಕಾರ ಆ ಭೂಮಿಯನ್ನು ಮರಳಿ ದಲಿತರಿಗೆ ಕೊಡಿಸಬೇಕು” ಎಂದರು.
ಜನಪರ ಕವಿ ಚಂಸು ಪಾಟೀಲ ಮಾತನಾಡಿ, “ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ-ಕೊಲೆಯಾಗಿ ಹದಿಮೂರು ವರ್ಷ ಗತಿಸಿದರೂ ಅವಳ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಆಡಳಿತ ವ್ಯವಸ್ಥೆ ವೈಫಲ್ಯ ಕಂಡಿರುವುದು ದುರಂತ ಹಾಗೂ ಆಘಾತಕಾರಿಯಾಗಿದೆ. ಸರಕಾರ ಈ ಪ್ರಕರಣದಲ್ಲಿ ಮೀನಮೇಷ ಎಣಿಸದೆ ನೈಜ ಅಪರಾಧಿಗಳನ್ನು ಪತ್ತೆ ಹಚ್ಚಿ, ಕಠಿಣ ಶಿಕ್ಷೆ ನೀಡಬೇಕು” ಎಂದರು
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ನಾಯಕಿ ಚೈತ್ರಾ ಕೊರವರ, ಡಿಎಚ್ಎಸ್ ಜಿಲ್ಲಾ ಮುಖಂಡರು ವೀರಣ್ಣ ಗಡ್ಡಿಯವರ, ಸಿಐಟಿಯು ಜಿಲ್ಲಾ ಮುಖಂಡರು ಅನ್ನದಾನೆಪ್ಪ ಕೆ ಹೆಬಸೂರ, ಅಲೆಮಾರಿ ಅರೆ ಅಲೆಮಾರಿ ಸಂಘಟನೆಯ ಜಿಲ್ಲಾಧ್ಯಕ್ಷರು ಶೆಟ್ಟಿ ವಿಭೂತಿನಾಯಕ್, ಪಿ.ಯು ಕಾಲೇಜು ಅತಿಥಿ ಉಪನ್ಯಾಸಕರು ಸಂಘಟನೆಯ ಮುಖಂಡರು ರಮೇಶ ತಳವಾರ, ಐನ್.ಟಿಯುಸಿ ಜಿಲ್ಲಾ ಮುಖಂಡರಾದ ಎ.ಎಂ ಪಟವೇಗಾರ, ಶಿವಕುಮಾರ ಹಿರೇಮಠ, ಎಸ್ಎಫ್ಐ-ಡಿವೈಎಫ್ಐ ಮುಖಂಡರಾದ ಹರೀಶ ಘೋರ್ಪಡೆ, ಪರಪ್ಪ ಅಕ್ಕಿ, ಅರುಣ ನಾಗಾವತ್, ಭಾಗ್ಯಾ ಲಮಾಣಿ, ನವೀನಾ ಲಮಾಣಿ, ಫಕ್ಕಿರೇಶ ಮ್ಯಾಗಳಮನಿ, ಯಲ್ಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.





