“ಸಂವಿಧಾನ ಪರವಾದ ಶಿಕ್ಷಣವನ್ನು ಕಾರ್ಪೊರೇಟ್ ಸಂಸ್ಥೆಗಳು ಕಲಿಸಿಕೊಡಲು ಸಾಧ್ಯವಿಲ್ಲ. ಆದರೆ ಸಮಾನ ಶಿಕ್ಷಣ ಕೊಡದೆ ಹೊರತು ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಈ ದೇಶದಲ್ಲಿ ಮಹಿಳೆಯರು ದೀನ ದಲಿತರಿಗೆ, ಬಡವರಿಗೆ ನ್ಯಾಯ ಕೊಡಿಸಲು ಹೇಗೆ ಸಾಧ್ಯ? ದೇಶದಲ್ಲಿ ಡೆಮಾಕ್ರಸಿ ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಿದೆ. ಅಷ್ಟಕ್ಕೆ ಸೀಮಿತ ಮಾಡಿರುವುದು ಮತ್ತು ಇವತ್ತಿನ ರಾಜಕೀಯ ಕುತಂತ್ರ ದಿಂದ ನಮಗೆ ಮಾಡುವ ವಂಚನೆಯಾಗಿದೆ” ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಪಕರು ಡಾ. ಕಿರಣ ಗಾಜನೂರು ಹೇಳಿದರು.
ಹಾವೇರಿ ಪಟ್ಟಣದ ಗುರು ಭವನದಲ್ಲಿ ಭಾರತ ವಿದ್ಯಾರ್ಥಿ ಫಡೆರೇಷನ್ ವತಿಯಿಂದ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ನಾನು ಗಾಜನೂರು ಎನ್ನುವ ಒಂದು ಸಣ್ಣ ಹಳ್ಳಿಯಿಂದ ಬಂದವನು. ನನ್ನ ತಂದೆ ಕೃಷಿ ಕೂಲಿಕಾರನಾಗಿ ಕೆಲಸ ಮಾಡಿ ನನ್ನನ್ನು ಓದಿಸಿದ್ದಾರೆ. ಇವತ್ತು ಹಹೆಸರಾಂತ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಾನು ಒಬ್ಬ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರೆ ಅದಕ್ಕೆ ಹಾಸ್ಟೆಲ್ ಮುಖ್ಯವಾದ ಕಾರಣವಾಗುತ್ತದೆ” ಎಂದು ಹೇಳಿದರು.
“ನಮ್ಮ ದೇಶದಲ್ಲಿ ಶೇ.70ರಷ್ಟು ಮಕ್ಕಳು ಬಡ ಮತ್ತು ದಲಿತ ಹಾಗೂ ಶೋಷಿತ ಕಾರ್ಮಿಕರ ಮಕ್ಕಳಿದ್ದಾರೆ. ಅವರಿಗೂ ಉನ್ನತ ಶಿಕ್ಷಣ ಪಡೆಯಬೇಕು ಎನ್ನುವ ಬಯಕೆ ಇದೆ. ಆ ನಿಟ್ಟಿನಲ್ಲಿ ಪ್ರಯತ್ನ ಕೂಡ ಮಾಡುತ್ತಿದ್ದಾರೆ. ಆದರೆ ಇಂದು ಆ ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ದೊರೆಯುತ್ತಿಲ್ಲ. ಇಂದು ನಡೆಯುವ ಈ ಹಾಸ್ಟಲ್ ಸಮಾವೇಶ ಬಹಳ ಮಹತ್ವವನ್ನು ಪಡೆದಿದೆ. ಇದನ್ನು ತಾವೆಲ್ಲರೂ ಕೂಡ ಸದುಪಯೋಗ ಪಡೆದುಕೊಳ್ಳಬೇಕು ಎನ್ನುವುದು ನನ್ನ ಆಸೆಯಾಗಿದೆ” ಎಂದರು.
“ಅನೇಕ ಹೋರಾಟಗಾರರು ಧಾರ್ಮಿಕವಾಗಿ ಧರ್ಮ, ಉಳಿಬೇಕು ಜಾತಿ ಉಳಿಬೇಕು ಎನ್ನುವ ತಮ್ಮ ಹಿತಾಸಕ್ತಿಗಾಗಿ ಹೋರಾಟಗಳನ್ನು ರೂಪಿಸುತ್ತಿರುವುದು ನೋಡುತ್ತಿದ್ದೇವೆ. ಆದರೆ ಜನರ ಬದುಕಿನ ಪ್ರಜಾಸತ್ತಾತ್ಮಕ ಹಕ್ಕುಗಳ, ಸಮಾನ ಸಾಮಾಜಿಕ ಆಶಯಗಳನ್ನು ಇಟ್ಟುಕೊಂಡು ಇವತ್ತು ಹೋರಾಟಗಳು ರೂಪಿಸಲು ಯಾರು ಮುಂದಾಗುತ್ತಿಲ್ಲ. ಆದರೆ ಇದರ ಮಧ್ಯೆ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಮಾಜವಾದದ ಕನಸುಗಳು ಹೊತ್ತುಕೊಂಡು ಕಾರ್ಯಕ್ರಮಗಳನ್ನ ಹೋರಾಟಗಳನ್ನ ರೂಪಿಸುತ್ತಾ ಬಂದಿರುವುದು ಇವತ್ತು ನಾವು ಗಮನಿಸುತ್ತಿದ್ದೇವೆ” ಎಂದು ಹೇಳಿದರು.

ನಮಗೆ ಮುಖ್ಯವಾಗಿ ಶಿಕ್ಷಣ ಹೇಗೆ ಬೇಕು ಎನ್ನುವ ವಿಚಾರವನ್ನು ಅರಿಯಬೇಕಿದೆ. ನಾವು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು ಕೊಂಡಿದ್ದೇವೆ. ಇವತ್ತು ನಮ್ಮ ಜಗತ್ತಿನಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಆದರೆ ಇದರ ನಡುವೆ ಜಿಡಿಪಿ ಉತ್ತಮವಾಗಿದೆ. ಕಂಪನಿಗಳು ಹೇಳಿತ್ತಿವ ಅದೇ ಸಂದರ್ಭದಲ್ಲಿ ನಾವು ನೋಡುವುದಾದರೆ, ನಮ್ಮ ದೇಶ ಹಸಿವಿನಲ್ಲಿ 111ನೇ ಸ್ಥಾನದಲ್ಲಿದೆ. ಅಂದರೆ ಇಲ್ಲಿ ತೀವ್ರ ಬಡತನ ಕೂಡ ಇದೆ ಎನ್ನುವುದು ಇದರ ಅರ್ಥವಾಗುತ್ತದೆ. ಒಂದು ಕಡೆ ಜಿಡಿಪಿ ಉತ್ತಮವಾಗಿದ್ದರೆ ಇನ್ನೊಂದು ಕಡೆ, ಹಸಿವು ಮತ್ತು ಬಡತನ ಹೆಚ್ಚು ಕಾಡುತ್ತಿದೆ. ಇದು ಯಾವ ತರದ ಅಭಿವೃದ್ಧಿ ಪ್ರಶ್ನೆ ಮಾಡಿಕೊಳ್ಳಬೇಕಿದೆ” ಎಂದು ಹೇಳಿದರು.
“ಇಂದು ಬಂಡವಾಳ ಶಾಹಿ ವ್ಯವಸ್ಥೆ, ವಿಜೃಂಭಿಸುತ್ತಲೇ ಕಾರ್ಪೊರೇಟೀಕರಣ ನಿರಂತರವಾಗಿ ವಿಸ್ತರಿಸುತ್ತಿದೆ. ಕಾನ್ವೆಂಟ್(ನರ್ಸರಿ) ಶಾಲೆಗಳು ಪ್ರಭಾವ ಹೆಚ್ಚು ಆಗುತ್ತಿದೆ. ಉದ್ಯೋಗಗಳು ಕಡಿಮೆಯಾಗುತ್ತಿವೆ. ಇವತ್ತು ಕಾರ್ಪೊರೇಟ್ ಸಂಸ್ಥೆಗಳು ನಿಮಿಷ ನಿಮಿಷಗಳನ್ನು ಲೆಕ್ಕಾಚಾರ ಹಾಕಿ ದುಡಿಸಿ ಕೊಂಡು ಬೆಳೆಯುತ್ತಿವೆ. ಆದರೆ ಇಂದು ಸಾರ್ವಜನಿಕ ಶಿಕ್ಷಣ ವಲಯ ಸಂಪೂರ್ಣವಾಗಿ ಸೊರಗಿ ಹೋಗಿರುವುದು ಕಾಣುತ್ತೇವೆ. ಇಂತಹ ಸಂದರ್ಭದಲ್ಲಿ SFI ವಿದ್ಯಾರ್ಥಿಗಳ ಚಳುವಳಿಯನ್ನು ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಸಮಾವೇಶ ನಿಮಗೆ ಒಳ್ಳೆಯ ಮಾರ್ಗದರ್ಶನ ಮಾಡಲಿ” ಎಂದು ಹೇಳಿದರು.
ಎಸ್ ಎಫ್ ಐ ರಾಷ್ಟೀಯ ಅಧ್ಯಕ್ಷರು ಆದರ್ಶ ಎಮ್ ಮಾತನಾಡಿ, ಇಂದು ಶಿಕ್ಷಣ ವಲಯದಲ್ಲಿ ವಿವಿಧ ಸಮಸ್ಯೆಗಳು ತಲೆದೂರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಇದರ ವಿರುದ್ಧ SFI ಕರ್ನಾಟಕ ರಾಜ್ಯ ಸಮಿತಿ ಜಾಥಾವನ್ನು ಕೈಗೊಂಡಿದೆ. ಶಿಕ್ಷಣದ ಬದಲಾವಣೆಗಾಗಿ ಖಾತರಿಯುವ ವಿದ್ಯಾರ್ಥಿಗಳ ನಡುವೆ ಸಮಾಜದ ಬದಲಾವಣೆ ಮುಖ್ಯವಾದ ಅಂಶವಾಗಿದೆ” ಎಂದರು.
“ಇಂದು ಭಾರತದಲ್ಲಿ ಶಿಕ್ಷಣ ನೀತಿ ಮತ್ತು NEP ಪಾಲಿಸಿಗಳು ವ್ಯಾಪಾರಿಕರಣಕ್ಕೆ ಆದ್ಯತೆ ನೀಡಿ ದುಡ್ಡಿದ್ದವರಿಗೆ ಶಿಕ್ಷಣವನ್ನು ಮಾರುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಯೋಜನೆಯನ್ನು ರೂಪಿಸುತ್ತಿದೆ. ನಮಗೆ ಕಡ್ಡಾಯ ಶಿಕ್ಷಣ ಬೇಕಿದೆ. ಯಾಕೆಂದರೆ ನಮ್ಮ ದೇಶದಲ್ಲಿ ಇನ್ನೂ ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳು ಹಳ್ಳಿಯಿಂದ ಬರುವ ವಿದ್ಯಾರ್ಥಿಗಳು ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಇವರುಗಳ ಭವಿಷ್ಯವನ್ನು ರೂಪಿಸಲು, ಸಂವಿಧಾನದ ಆಶಯವನ್ನು ಈಡೇರಿಸಲು ಮತ್ತು ಸಮಾಜದ ಬದಲಾವಣೆಗಾಗಿ ಶಿಕ್ಷಣ ಮೂಲಭೂತ ಹಕ್ಕಾಗಬೇಕಿದೆ” ಎಂದರು.
ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ” “ಇಂದು ಹಾವೇರಿಯಲ್ಲಿ ನಾವು ರಾಜ್ಯಮಟ್ಟದ ಸಮಾವೇಶವನ್ನು ಮಾಡುತ್ತಿದ್ದೇವೆ. ಇದೇ ಸಂದರ್ಭದಲ್ಲಿ “ರಾಜ್ಯದಾದ್ಯಂತ ಶೈಕ್ಷಣಿಕ ಜಾಥವನ್ನು ಮಾಡಿ ಹಾವೇರಿಯಲ್ಲಿ ಸಮರೂಪವನ್ನು ಮಾಡುತ್ತಿದ್ದೇವೆ. ಈ ಜಾಥಾ ಶಿಕ್ಷಣ ವಲಯದಲ್ಲಿ ಸಂಚಲವನ್ನು ಮೂಡಿಸಿದೆ. ಇವತ್ತು ವಸತಿ ನಿಲಯಗಳಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳು, ಸಿಬ್ಬಂದಿಗಳಿಲ್ಲ, ಪೌಷ್ಟಿಕ ಆಹಾರ ದೊರೆಯುತ್ತಿಲ್ಲ.. ಇದನ್ನೆಲ್ಲಾ ಅರಿತ SFI ರಾಜ್ಯದಲ್ಲಿ ಹಾಸ್ಟೆಲ್ ಸಮಾವೇಶವನ್ನು ಮಾಡಲು ನಿರ್ಧರಿಸಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪುನೀತ್ ಸ್ಮರಣಾರ್ಥ ಆರ್ಯ ಈಡಿಗ ಸಂಘದಿಂದ ಪುಷ್ಪನಮನ ಹಾಗೂ ಉಪಹಾರ ವಿತರಣೆ
ಸಮಾವೇಶದ ಗೌರವಧ್ಯಕ್ಷತೆಯನ್ನು ಹಿರಿಯ ಕಾರ್ಮಿಕ ಮುಖಂಡರು ವಿಜಯಕುಮಾರ ಮುದಕನ್ನವರ, ಅಧ್ಯಕ್ಷರತೆಯನ್ನು ಪರಿಮಳ ಜೈನ್, ಅನನ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷರು ಮಲ್ಲಿಕಾರ್ಜುನ್ ಹಾವೇರಿ, ಶಿವಪ್ಪ ಎನ್. ಅಂಬ್ಲಿಕಲ್, ಎಸ್.ಎಫ್.ಐ ರಾಜ್ಯ ಉಪಾಧ್ಯಕ್ಷರು ಸುಜಾತಾ ವಿ, ಡಾ.ದೊಡ್ಡಬಸವರಾಜ, ಸಾಹಿತಿ ಸತೀಶ್ ಕುಲಕರ್ಣಿ, ನಾರಾಯಣ ಕಾಳೆ, ರೇಣುಕಾ ಕಹಾರ, ಉಡಚಪ್ಪ ಮಾಳಗಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಸವರಾಜ ಎಸ್. ಅವರು ನಿರೂಪಿಸಿದರು.





