ಜಿ+1 ಮನೆಗಳನ್ನು ವಿತರಿಸಿ ಆರು ತಿಂಗಳಾದರೂ ಮನೆಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸದೇ ಕಾಲ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ನಗರ ಸಮಿತಿ ಹಾಗೂ ಜಿ+1 ಮನೆ ಫಲಾನುಭವಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಫಲಾನುಭವಿಗಳು ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ಹಲವು ವರ್ಷಗಳ ಹೋರಾಟದ ಫಲವಾಗಿ ಜೂನ್ 16, 2025 ರಂದು ಮಾನ್ಯ ಶಾಸಕರು, ಪುರಸಭೆಯ ಅಧ್ಯಕ್ಷರು, ಸರ್ವಸದಸ್ಯರು ಹಾಗೂ ಮುಖ್ಯಾಧಿಕಾರಿಗಳು ಜಿ+1 ಮನೆಗಳನ್ನು ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಿದ್ದರು. ಆದರೆ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಿ ಆರು ತಿಂಗಳಾದರೂ ಜಿ+1 ಮನೆಗಳಿಗೆ ನಿರ್ಮಿತಿ ಕೇಂದ್ರ ಹಾಗೂ ಪುರಸಭೆ ಅಧಿಕಾರಿಗಳು ವಿದ್ಯುತ್ (ಕರೆಂಟ್) ಸಂಪರ್ಕ ಕೊಟ್ಟು ಮೀಟರ್ ಅಳವಡಿಸದಿರುವ ಹಾಗೂ ಕನಿಷ್ಠ ಕುಡಿಯುವ ನೀರಿನ ಸೌಲಭ್ಯ ಒದಗಿಸಿಲ್ಲ” ಎಂದು ತೀವ್ರವಾಗಿ ಖಂಡಿಸಿದರು.
“ನಿರ್ಮಿತಿ ಕೇಂದ್ರದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿ ನಡವಳಿಕೆಯಿಂದಾಗಿ ಜಿ+1 ಮನೆ ಫಲಾನುಭವಿಗಳು ತೀವ್ರ ಸಂಕಷ್ಟವನ್ನು ಎದುರಿಸಬೇಕಾಗಿದೆ. ಮನೆಗಳಿಗೆ ನಿಗದಿತ ಅವಧಿಯೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮೀಟರ್ ಅಳವಡಿಸದಿದ್ದರೆ ನಿರ್ಮಿತಿ ಕೇಂದ್ರದ ಎದುರುಗಡೆ ತೀವ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಈ ಮೊದಲು ಹಂಚಿಕೆಯಾಗಿದ್ದ ಜಿ+1, 24 ಮನೆಗಳಿಗೆ ಒಂದು ನಲ್ಲಿಯನ್ನು ಮಾತ್ರ ಕೊಡಲಾಗಿತ್ತು. ಕಳೆದ ಜೂನ್ 2025ರಲ್ಲಿ ಹಂಚಿಕೆ ಮಾಡಿದ 156 ಜಿ+1 ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಇನ್ನೂ ಕಲ್ಪಿಸಿಲ್ಲ. ಕನಿಷ್ಠ ಕುಡಿಯುವ ನೀರಿಗಾಗಿ ಅಗತ್ಯವಿರುವ ನಲ್ಲಿ ಅಳವಡಿಸದಿರುವುದರಿಂದ ಜನತೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಈ ಎಲ್ಲ ಜಿ+ ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಪ್ರತಿ ಮನೆಗೆ ನಲ್ಲಿ ಅಳವಡಿಸಬೇಕು” ಎಂದು ಆಗ್ರಹಿಸಿದರು.
“ಈಗಾಗಲೇ ಜಿ+ 1 ಮನೆಗಾಗಿ ಅರ್ಜಿ ಹಾಕಿ ಪುರಸಭೆಗೆ ಫಲಾನುಭವಿ ವಂತಿಗೆ ಹಣ ತುಂಬಿರುವ ನಿವೇಶನ/ಮನೆ ರಹಿತ ಹಲವಾರು ಜನ ಫಲಾನುಭವಿಗಳಿಗೆ ಮನೆ ದೊರೆತಿಲ್ಲ. ಪುರಸಭೆಗೆ ಫಲಾನುಭವಿ ವಂತಿಗೆ ಕಟ್ಟಿ ಅರ್ಜಿ ಹಾಕಿರುವ ಬಡ ಜನರಿಗೆ (ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿದ್ದರೆ ಪರಿಹರಿಸಿ) ವಸತಿ ಸೌಲಭ್ಯ ಕಲ್ಪಿಸಬೇಕು. ಹಾಗೂ ಮಾರುತಿ ನಗರ, ಬಸವನಗರ, ಸಾಲಗೇರಿ ಓಣಿ ದ್ಯಾಮವ್ವನ ಪಾದಗಟ್ಟಿ ಸೇರಿದಂತೆ ಪುರಸಭೆಯ ಪ್ರದೇಶ ವ್ಯಾಪ್ತಿಯಲ್ಲಿರುವ ಎಲ್ಲ ವಸತಿ ರಹಿತ ಬಡಜನರಿಗೆ ಹಿತ್ತಲು ಸಹಿತ ಮನೆ/ನಿವೇಶನ ಸೌಲಭ್ಯ ಕಲ್ಪಿಸಬೇಕು. ಅದಕ್ಕಾಗಿ ಪುರಸಭೆ ವ್ಯಾಪ್ತಿಯಲ್ಲಿರುವ ಖಾಲಿ ಜಾಗೆಯನ್ನು ಬಳಸಿಕೊಳ್ಳಬೇಕು ಹಾಗೂ ಅಗತ್ಯಬಿದ್ದರೆ ಭೂಮಿ ಖರೀದಿ ಮಾಡಿಯಾದರೂ ಎಲ್ಲ ವಸತಿರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಜಿ+1 ಮನೆ ಫಲಾನುಭವಿಗಳ ಹೋರಾಟ ಸಮಿತಿ ಮುಖಂಡ ವೀರಣ್ಣ ಗಡ್ಡಿಯವರ ಮಾತನಾಡಿ, “ಜಿ+ ಮನೆಗಳಲ್ಲಿ ಗೋಡೆಗಳಲ್ಲಿ ಡ್ರೈನೇಜ್ ಹಾಗೂ ಸ್ನಾನದ ಕೊಠಡಿ ನೀರು ಸೋರಿಕೆಯಾಗುತ್ತಿದೆ. ಇನ್ನೂ ಕೆಲ ಮನೆಗಳಲ್ಲಿ ದುರಸ್ತಿ ಕೆಲಸ ಬಾಕಿ ಉಳಿದಿದೆ. ಆದ್ದರಿಂದ ಈ ಎಲ್ಲ ಬಾಕಿ ಕೆಲಸಗಳನ್ನು ಕೂಡಲೇ ದುರಸ್ತಿಗೊಳಿಸಬೇಕು. ಜಿ+ ಮನೆ ಸ್ಟೇರಕೇಸ್ ಮೇಲೆ ಸುರಕ್ಷತೆಗಾಗಿ ಜಾಲರಿ ಹಾಕಿಸಬೇಕು. ಜಿ+ ಮನೆ ಆವರಣದಲ್ಲಿ ದೇವಸ್ಥಾನದ ಹತ್ತಿರ ಗುಂಡಿಬಿದ್ದಿದೆ, ಅದನ್ನು ಮಣ್ಣು ಹಾಕಿಸಿ ಸಮತಟ್ಟುಗೊಳಿಸಬೇಕು ಹಾಗೂ ರಸ್ತೆ ನಿರ್ಮಿಸಬೇಕು. ಶುಚಿತ್ವಕ್ಕಾಗಿ ಜಿ+ ಮನೆಯಾವರಣದಲ್ಲಿ ನಿರಂತರವಾಗಿ ಕಾಲುವೆ (ಗಟಾರು) ಸ್ವಚ್ಚಗೊಳಿಸಬೇಕು. ಪ್ರತಿ ದಿನ ಕಸ ತುಂಬಿಸಿಕೊಳ್ಳುವ ವಾಹನ ಬರುವಂತೆ ಮಾಡಬೇಕು. ಸೊಳ್ಳೆ ಹೆಚ್ಚಾಗದಂತೆ ಪಾಗಿಂಗ್ ಮಾಡಬೇಕು. ಹಾಗೂ ಜಿ+ ಮನೆ ಆವರಣದಲ್ಲಿ ಸಮುದಾಯಭವನ ಹಾಗೂ ಅಂಗನವಾಡಿ ಮಂಜೂರು ಮಾಡಬೇಕು” ಎಂದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಪುರಸಭೆಯ ಮುಖ್ಯಾಧಿಕಾರಿ ಕೆ. ಮಲ್ಲೇಶ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳಾದ ರಮೇಶಗೌಡ ಅವರು ಮನವಿ ಸ್ವೀಕರಿಸಿ ಮಾತನಾಡಿ, ನಿಗದಿತ ಅವಧಿಯಲ್ಲಿ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಲ್ಲಿ ನಮ್ಮಿಂದ ತಪ್ಪಾಗಿದೆ. ಇವತ್ತಿನಿಂದಲೇ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಕೊಡಿಸುವ ಕೆಲಸವನ್ನು ಆರಂಭಿಸುತ್ತೇವೆ, ದಯವಿಟ್ಟು ಪ್ರತಿಭಟನೆ ಹಿಂಪಡೆದುಕೊಂಡು ಇದೊಂದು ಬಾರಿ ಅವಕಾಶ ಮಾಡಿಕೊಡಿ; ಒಂದು ತಿಂಗಳೊಳಗಾಗಿ ಈ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇವೆ” ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ನಗರ ಸಮಿತಿ ಅಧ್ಯಕ್ಷ ಮೌಲಾಲಿ ನವಲಗುಂದ, ಕಾರ್ಯದರ್ಶಿ ಕಿಶೋರ್ ದೋತ್ರರೆ, ಮಕಬುಲ್ ಯಲ್ಲಾಪೂರ, ಗುರುನಗೌಡ ದುಂಡಿಗೌಡ್ರ, ಕಸ್ತೂರಿ ಜಿ. ವಡ್ಡರ, ಮಂಜುಳಾ ತಡಸ, ಸುಮಿತ್ರಾ ಶಿರಹಟ್ಟಿ, ರಾಧಾ ಆಲೂರು, ಅಸ್ಮಾ ದೇವಸೂರು, ಸಾವಿತ್ರಿ ಚೌಹಾಣ, ಬಸೀರಾಬಾನು ಖುರ್ಷಾಪುರ, ಮಾಲಾನಬಿ ಬಡಿಗೇರ, ಕೃಷ್ಣಪ್ಪ ಗದಗ, ಗಣೇಶ ತೋಟಿಗೆರ, ರುದ್ರೇಶ ಗೌರಣ್ಣನವರ, ಶಂಭು ಗಾಟೆನವರ, ಅಮಿತ್ ಬಿಂಡಲಗಿ, ಕಾಶಮ್ಮ ತಿಟ್ಟೇನವರ, ಜಯಮ್ಮ ಅಂಗಡಿ ಸೇರಿದಂತೆ ಜಿ+1 ಮನೆ ಫಲಾನುಭವಿಗಳು ಇದ್ದರು.





