“ಪ್ರತಿ ತಿಂಗಳಿನಲ್ಲಿ 30 ಹೆರಿಗೆಗಳು ಇಲ್ಲದ ಕಾರಣ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಿ ಪರಿವರ್ತನೆ ಮಾಡಿದ್ದಾರೆ. ಇದು ಜನಸಾಮಾನ್ಯರ ಮೇಲೆ ಕೈಗೊಂಡ ಕರಾಳ ಆದೇಶ. ಈ ಆದೇಶವನ್ನು ಹಿಂಪಡೆಯಬೇಕು” ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಕಿಡಿಕಾರಿದರು.
ಹಾವೇರಿ ಪಟ್ಟಣದಲ್ಲಿ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಆರೋಗ್ಯ ಇಲಾಖೆಯ ಅವೈಜ್ಞಾನಿಕ ಆದೇಶವನ್ನು ಹಿಂಪಡೆಯುವ ಕುರಿತು ಕರ್ನಾಟಕ ರಾಜ್ಯ ರೈತ ಸಂಘಹಾಗು ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಿ ಅವರು ಮಾತನಾಡಿದರು.
“ಆಸ್ಪತ್ರೆಗಳಲ್ಲಿ ಹೆರಿಗೆ ತಜ್ಞರು ನೇಮಕ ಇಲ್ಲ. ಅರವಳಿಕೆ ತಜ್ಞರು ಇರುವುದಿಲ್ಲ. ಒಳ್ಳೆಯ ಸೌಲಭ್ಯದಿಂದ ಕೂಡಿದ ಪ್ರಯೋಗಾಲಯಗಳು ಇಲ್ಲ. ಸೌಲಭ್ಯಗಳನ್ನು ನೀಡದೇ ಈ ರೀತಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುವುದು ಮಹಾ ತಪ್ಪು” ಎಂದರು.
“ಪ್ರತಿ ತಾಲೂಕ ಕೇಂದ್ರದಿಂದ ಸುಮಾರು 30-35 ಕಿಲೋಮೀಟರ್ ದೂರದಲ್ಲಿರುವ ಹಳ್ಳಿಗಳ ಜನಸಾಮಾನ್ಯರಿಗೆ ಹಾವು ಕಚ್ಚಿದರೆ, ವಿದ್ಯುತ್ ಸ್ಪರ್ಶ, ಕಾಡು ಮೃಗಗಳಿಂದ ಹಾನಿಯಾದರೆ, ವಿಷಪ್ರಾಶನವಾದರೆ, ಅಪಘಾತ ಸಂಭವಿಸಿದರೆ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಾದರೆ, ತುರ್ತು ಸಮಸ್ಯೆಗಳು, ಹೆರಿಗೆ ಸಮಸ್ಯೆಯಾದಾಗ, ದೂರದಿಂದ ಬರುವುದು ಬಹಳ ಕಷ್ಟವಾಗುತ್ತದೆ. ತುರ್ತು ಚಿಕಿತ್ಸೆ ಸಿಕ್ಕರೆ ಅವರ ಜೀವ ಉಳಿಸಬಹುದು. ಇಂತಹ ಅವೈಜ್ಞಾನಿಕ ತೀರ್ಮಾನದ ಆದೇಶದಿಂದ ಜನರ ಜೀವಕ್ಕೆ ಅಪಾಯವಾಗುತ್ತದೆ ಇದನ್ನು ಸರ್ಕಾರಕ್ಕೆ ಮಾನ್ಯ ಶಾಸಕರು ಮನವರಿಕೆ ಮಾಡಿಸಬೇಕು” ಎಂದು ಮನವಿ ಮಾಡಿದರು.
“ಪ್ರತಿ ಸಮುದಾಯ ಕೇಂದ್ರದಲ್ಲಿ ಡಯಾಲಿಸಿಸ್ ಸೌಲಭ್ಯ ಕಲ್ಪಿಸಬೇಕು. ತಜ್ಞ ವೈದ್ಯರನ್ನು ನೇಮಿಸಬೇಕು. ಅರವಳಿಕೆ ತಜ್ಞರನ್ನು ನೇಮಿಸಬೇಕು. ಪ್ರಯೋಗಾಲಯಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಆಸ್ಪತ್ರೆಯ ಮೇಲ್ವಿಚಾರಣೆಗೆ ಅನುಭವಿಕರ ಮಾರ್ಗದರ್ಶನ ಸಮಿತಿ ರಚನೆ ಆಗಬೇಕು. ತಾತ್ಕಾಲಿಕವಾಗಿ ನೇಮಕಗೊಂಡ ಸಿಬ್ಬಂದಿಗಳು ರೋಗಿಗಳ ಜೊತೆಗೆ ಸರಿಯಾಗಿ ನಡೆದುಕೊಳ್ಳುವಂತೆ ಸೂಚಿಸಬೇಕು. ಈ ಎಲ್ಲಾ ವಿಚಾರಗಳನ್ನು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಅಲ್ಲಿಯ ವಸ್ತು ಸ್ಥಿತಿಯನ್ನು ಸರ್ಕಾರಕ್ಕೆ ವಿವರಿಸಿ ತಕ್ಷಣದಿಂದ ಈ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯ ಮಾಡಬೇಬೇಕು” ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ ಹಾವೇರಿ ಒತ್ತಾಯಿಸುತ್ತದೆ
ಈ ಸಂದರ್ಭದಲ್ಲಿ ಶಿವಯೋಗಿ ಚ ಹೊಸಗೌಡ್ರ, ಸುರೇಶ ಚಲವಾದಿ, ವಿರುಪಾಕ್ಷಪ್ಪ ಗುಡಗೂರ, ಮುಂತಾದವರು ಉಪಸ್ಥಿತರಿದ್ದರು





