“ಹಾವೇರಿ ತಾಲೂಕಿನಲ್ಲಿ ರೈತರ ಬೆಳೆ ಸಮೀಕ್ಷೆ ಮಾಡಿರುವುದಲ್ಲಿ ತಾರತಮ್ಯ ಮಾಡಲಾಗಿದ್ದು, ಈ ವರ್ಷ ಅತಿವೃಷ್ಟಿಯಿಂದ ರೈತರ ಬೆಳೆ ಹಾಳಾಗಿದ್ದು, ಎರಡು ಸಲ ಬೆಳೆ ಹಾಕಿದರೂ ರೈತರಿಗೆ ಇಳುವರಿ ಬಂದಿರುವುದಿಲ್ಲ. ಕೂಡಲೇ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಾವೇರಿ ಪಟ್ಟಣದ ತಹಸೀಲ್ದಾರ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದರು.
ರೈತ ಸಂಘದ ಗೌರವಾಧ್ಯಕ್ಷರು ಸುರೇಶ ಛಲವಾದಿ ಮಾತನಾಡಿ, “ಬೆಳೆ ಇಳುವರಿ ಬರದೇ ಇರವುದರಿಂದ ಕಳಪೆ ಬೀಜ ಮತ್ತು ಕಳಪೆ ಗೊಬ್ಬರ ಕೊಟ್ಟು ರೈತರಿಗೆ ಅನ್ಯಾಯವಾಗಿದೆ. ಇದನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕಳಪೆ ಬೀಜ, ಗೊಬ್ಬರವನ್ನು ಮಾರಾಟ ಮಾಡುತ್ತಿರುವವರ ಮೇಲೆ ಕಾನೂನುಕ್ರಮ ಕೈಗೊಳ್ಳಬೇಕು. ಇದರಿಂದ ಮುಂದಿನ ದಿನಗಳಲ್ಲಿ ಕಳಪೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತದೆ” ಎಂದರು.
“ಮುಂದಿನ ಸಾಲಿನಲ್ಲಿ ರೈತರು ತೆಗೆದುಕೊಳ್ಳುವ ಬೀಜವನ್ನು ಪರೀಕ್ಷೆಗೆ ಒಳಪಡಿಸಿದಲ್ಲಿ, ರೈತರಿಗೆ ಅನುಕೂಲವಾಗುತ್ತದೆ” ಎಂದು ಹೇಳಿದರು.
“ಇನ್ನೂ ನಮ್ಮ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದೆ ಬರುವ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ತಹಶೀಲ್ದಾರ ಕಛೇರಿ ಎದುರಿಗೆ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಹಕ್ಕೊತ್ತಾಯಗಳು:1)ರೈತರ ಬೆಳೆ ಹಾನಿಯಲ್ಲಿ ಆದಂತಹ ಸಮಸ್ಯೆಗಳನ್ನು ಸರಿಪಡಿಸಬೇಕು. 2) ರೈತರ ಮಧ್ಯಂತರ ಬೆಳೆವಿಮೆ ಕೊಡಬೇಕು. 3) ನಮ್ಮ ಹೊಲ ನಮ್ಮ ದಾರಿ ಸಮಸ್ಯೆ ಬಗೆಹರಿಸಬೇಕು, 4)ಹೆಸ್ಕಾಂ ಇಲಾಖೆಯವರು ರೈತರ ಸಮಸ್ಯೆ ಬಗ್ಗೆ ಅತೀ ಶೀಘ್ರದಲ್ಲಿ ಬಗೆಹರಿಸಬೇಕು ಇನ್ನೂ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲ್ಲೂಕಾ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಹೊಸಗೌಡ್ರ, ತಾಲೂಕು ಅಧ್ಯಕ್ಷರು ದಿಳೇಪ್ಪ ಮಣ್ಣೂರ, ರೈತ ಮುಖಂಡರು ರಾಜುಸಾಬ ತರ್ಲಘಟ್ಟ, ಮಂಜುನಾಥ ಕದಮ, ಶಿವಬಸಪ್ಪ ಗೋವಿ ಹೆಮ್ಮಣ್ಣ ಬುದಗಟ್ಟಿ ನಾಗಪ್ಪ ಓಲೇಕಾರ, ಅಣ್ಣಪ್ಪ ಬುಳಬುಳಿ, ಸಿದ್ದಪ್ಪ ಚಿಂದಿ, ರುದ್ರೇಶ ನರೋಗಲ್ಲ, ಈರಣ್ಣ ಚಕ್ರಸಾಲಿ, ಕಲ್ಲಪ್ಪ ಸಣ್ಮನಿ ಇನ್ನೂ ಅನೇಕರು ಉಪಸ್ಥಿತರಿದ್ದರು.





