“ರೈತರು ಬೆಳೆದ ಮೆಕ್ಕೆಜೋಳಕ್ಕೆ ಕನಿಷ್ಠ ₹3,000 ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಸೋಮವಾರ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಹುಲಿಹಳ್ಳಿ ಬಳಿ ಇರುವ ಎಪಿಎಂಸಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರು ಹನಮಂತಪ್ಪ ಕಬ್ಬಾರ ಮಾತನಾಡಿ, “ಹಾವೇರಿ ಜಿಲ್ಲಾದ್ಯಂತ ಹೆಚ್ಚಿನ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಮೆಕ್ಕೆಜೋಳ ರಾಣೆಬೆನ್ನೂರ ಮಾರುಕಟ್ಟೆಗೆ ಬಂದಿದ್ದು, ಸೂಕ್ತ ಬೆಲೆ ಇಲ್ಲ. ಈಗ ಮೆಕ್ಕೆಜೋಳವನ್ನು 1,700 ರಿಂದ 1,950 ರೂಪಾಯಿಗೆ ಖರೀದಿ ಮಾಡುತ್ತಿದ್ದು ರೈತರಿಗೆ ನಷ್ಟ ಆಗುತ್ತಿದೆ” ಎಂದರು.
“ಹೊಸದಾಗಿ ನಿರ್ಮಾಣವಾದ ಮೆಗಾ ಮಾರ್ಕೆಟ್ ಕರ್ನಾಟಕದಲ್ಲಿಯೇ ದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿ ಇ-ಟೆಂಡರ್ ವ್ಯವಸ್ಥೆ ಇದೆ. ಆದರೆ ನಾವು 3ರಿಂದ ಸಾಯಂಕಾಲ 5:30ರವರೆಗೆ ಕಾಯುತ್ತಿದ್ದೇವೆ, ಆಗಿಲ್ಲ. ಇದು ರಾತ್ರಿ 9 ಅಥವಾ 11 ಆದರೂ ಆಗಬಹುದು ಎನ್ನುತ್ತಿದ್ದಾರೆ. ಇದರಿಂದ ರೈತರು ಮುಗಿಸಿಕೊಂಡು ಮನೆಗೆ ಹೋಗಲಿಕ್ಕೆ ತೊಂದರೆ ಆಗುತ್ತದೆ. ಆದ್ದರಿಂದ ಬೆಳಗ್ಗೆ 11ಕ್ಕೆ ಇ-ಟೆಂಡರ್ ಪ್ರಕ್ರಿಯೆ ಮುಗಿಸಿ, ಸಂಜೆ 6ರರೊಳಗೆ ತೂಕ ಮಾಡಿ ಖರೀದಿ ಮಾಡಲಿಕ್ಕೆ ಅನೂಕುಲ ಮಾಡಿಕೊಟ್ಟರೆ, ರೈತರು ಬೇಗ ಕೊಟ್ಟು ಹೊಗಲಿಕ್ಕೆ ಅನುಕೂಲ ಆಗುತ್ತದೆ” ಎಂದರು.
“ಮೆಕ್ಕೆಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ₹3,000 ಕೊಟ್ಟರೆ ರೈತರಿಗೆ ಅನುಕೂಲ ಆಗುತ್ತದೆ. ರಾಜ್ಯ, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಪಿ.ಡಿ.ಎಸ್ ನಿಂದ ಹೊರಗೆ ಇಟ್ಟಿದ್ದರಿಂದ ರೈತರಿಗೆ ಅನ್ಯಾಯವಾಗಿದೆ. ಸರಿಪಡಿಸಬೇಕು” ಎಂದು ಒತ್ತಾಯಿಸಿದರು.
“ಜೊತೆಗೆ ಈರುಳ್ಳಿ, ಭತ್ತ, ಬೆಳ್ಳುಳ್ಳಿ ಇತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಿ ಸರ್ಕಾರ ರೈತರ ಹಿತರಕ್ಷಣೆಯ ಬಗ್ಗೆ ಚಿಂತನೆ ಮಾಡಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರು ಹನುಮಂತಪ್ಪ ದ್ವಿಗಿಹಳ್ಳಿ, ಮಹೇಶ ಕೊಟ್ಟೂರು, ರಾಜಶೇಖರ ದೂದಿಹಳ್ಳಿ, ಮಂಜುನಾಥ ಸಂಬೋಜಿ, ರಾಜೇಶ ಅಂಗಡಿ, ಬಸವರಾಜ ಮೇಗಳಗೇರಿ, ಲಲೀತಾ ಲಮಾಣಿ, ಶೈಲಮ್ಮ ಅರಳಗೇರಿ, ನೀಲಮ್ಮ ಮೇಗಳಗೇರಿ, ಕೊಟ್ರಮ್ಮ ಕಾಯಕದ, ಅಮೀದಾಬಾನಿ ಶೀಡೇನೂರು, ನಾಗಮ್ಮ ತಳವಾರ, ಮಹದೇವಪ್ಪ ಬಣಕಾರ, ಚಂದ್ರಶೇಖರ ಪಾಟೀಲ, ನಿಂಗಪ್ಪ ಸತ್ಯಪ್ಪನವರ, ಪರಸಪ್ಪ ಚಿತ್ತಣ್ಣನವರ ಇನ್ನೂ ಅನೇಕರು ಪಾಲ್ಗೊಂಡಿದ್ದರು.





