“ದೇಶದ ಐಕ್ಯತೆ, ಸಾಮರಸ್ಯ, ಆರೋಗ್ಯಕರ ಮನಸ್ಸಿನ ದೇಶ ಕಟ್ಟುವ ಸಂಕಲ್ಪ ಮಾಡಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ನಮಗೆಲ್ಲ ಮಾದರಿಯಾಗಿದ್ದಾರೆ” ಎಂದುರಾಷ್ಟೀಯ ಏಕತಾ ದಿವಸ ಆಚರಣೆಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ ಎಂ ಭಾಸ್ಕರ್ ಅವರು ಹೇಳಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಸೇವಾ ಯೋಜನಾ ಕೋಶದಿಂದ ಆಯೋಜಿಸಲಾದ ರಾಷ್ಟ್ರೀಯ ಏಕತಾ ದಿವಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಸಂಘರ್ಷದ ಕಾಲದಲ್ಲಿ ದೇಶದ ಮೊದಲ ಉಪ ಪ್ರಧಾನಮಂತ್ರಿ, ಗೃಹ ಮಂತ್ರಿಯಾಗಿ ದೇಶವನ್ನ ಒಂದೇ ಭಾರತದ ಕಡೆಗೆ ತೆಗೆದುಕೊಂಡು ಬಂದಿರುವ ಮೊದಲ ಪಂಕ್ತಿಯ ಶ್ರೇಯಸ್ಸು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೆ ಸಲ್ಲುತ್ತದೆ. ಭಾರತದ ಬಹುಭಾಗ, ಬಹುಪ್ರದೇಶವನ್ನು ಒಂದೇ ಕೊಡೆಯ ನೆರಳಿನಲ್ಲಿ ತರುವುದು ಧೈರ್ಯದ ಕೆಲಸವಾಗಿದೆ ಭಾರತೀಯರು ಒಂದೇ ಕಡೆಗೆ ಇರಬೇಕು. ಚಿದ್ರಿಸಿ ಹೋಗುವ ನೆಲವನ್ನು ಒಂದುಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ” ಎಂದರು.
ಕುಲಪತಿ ಡಾ. ಟಿ. ಎಂ ಭಾಸ್ಕರ್ ಅವರು ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು.
ಹಿರಿಯ ಸಂಶೋಧನಾಧಿಕಾರಿಗಳಾದ ಡಾ.ಕೆ ಪ್ರೇಮಕುಮಾರ್ ಅವರು ಮಾತನಾಡಿ, “ಅನೇಕತೆಯಲ್ಲಿ ಏಕತೆಯ ಕುರಿತು ಮಾತನಾಡುತ್ತೇವೆ ಆದರೆ ಇವೆಲ್ಲ ಆಚರಣೆಗೆ ಮಾತ್ರ ಸೀಮಿತವಾಗಿದ್ದು ವಿಪರ್ಯಾಸವಾಗಿದೆ. ಸಮಾಜದಲ್ಲಿ ಧರ್ಮ ಜಾತಿಗಳ, ಮನುಷ್ಯ ಮನುಷ್ಯರ ನಡುವೆ ಪರಸ್ಪರ ಏಕತೆ ಕಳೆದುಕೊಂಡು ದ್ವೇಷ ಅಸುಯೆಗಳಿಂದ ತುಂಬಿದ ಮನಸ್ಥಿತಿಯಿಂದ ಹೊರಬಂದು ಎಲ್ಲರೂ ಏಕತೆಯಿಂದ ನಡೆದುಕೊಳ್ಳಬೇಕು ಅಂದಾಗ ಈ ತರದ ಆಚರಣೆಗಳಿಗೆ ಅರ್ಥ ಬರುತ್ತದೆ” ಎಂದರು.
ಎನ್ ಎಸ್ ಎಸ್ ಸಂಯೋಜನಾಧಿಕಾರಿಗಳಾದ ಡಾ. ಗಿರೇಗೌಡ ಅರಳಿಹಳ್ಳಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, “ಸರ್ದಾರ್ ವಲಭಬಾಯಿ ಪಟೇಲ್ ಅವರ 150ನೇ ಜನ್ಮ ದಿನದ ನಿಮಿತ್ಯ ಎನ್ ಎಸ್ ಎಸ್ ಕೋಶದಿಂದ ರಾಷ್ಟಿಯ ಏಕತಾ ದಿವಸವನ್ನು ಆಚರಿಸಲಾಗುತ್ತಿದೆ” ಎಂದರು.
ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಾದ ಅಭಿನಯ.ಹೆಚ್ ಪ್ರಾರ್ಥಿಸಿದರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ವೆಂಕನಗೌಡ ಪಾಟೀಲ ವಂದಿಸಿದರು, ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕ ಶಿವಾನಂದ ದೊಡ್ಡಮನಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಪಾಲ್ಗೊಂಡಿದ್ದರು.





