ಹಾವೇರಿ ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬದ ಅಂಗವಾಗಿ ಬುಧವಾರ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆ ಹಾಗೂ ‘ಹೋರಿಗಳ ಮೆರವಣಿಗೆ’ ವೇಳೆ ಹೋರಿಗಳು ಗುದ್ದಿ ನಾಲ್ವರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಪ್ರಾಣಿ ಹಿಂಸೆ ಹಾಗೂ ನಿರ್ಲಕ್ಷ್ಯದ ಆರೋಪದಡಿ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ಜನರು ದೀಪಾವಳಿ ಹಬ್ಬವನ್ನು ಹಟ್ಟಿ ಹಬ್ಬ(ಹಟ್ಟಿ ಲಕ್ಕವ್ವ ಪೂಜೆ) ಎಂದೇ ಆಚರಿಸುತ್ತಾರೆ. ಹಬ್ಬದ ದಿನದಂದು ಹೋರಿಗಳನ್ನು ಅಲಂಕರಿಸಿ ಪೂಜೆ ಮಾಡುತ್ತಾರೆ. ಇದೇ ಹೋರಿಗಳನ್ನು ಕಿಕ್ಕಿರಿದು ಸೇರುವ ಜನರ ನಡುವೆ ಓಡಿಸುತ್ತಾರೆ. ಈ ಗ್ರಾಮೀಣ ಆಚರಣೆ ವೇಳೆಯಲ್ಲಿಯೇ ಈ ವರ್ಷ ನಾಲ್ವರು ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡು ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ.
“ಹೋರಿ ಬೆದರಿಸುವ ಆಚರಣೆಗೂ ಸ್ಪರ್ಧೆಗೂ ವ್ಯತ್ಯಾಸವಿದೆ. ಆಚರಣೆ ವೇಳೆ ನಡೆದಿರುವ ಅವಘಡಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮುಂದಿನ ದಿನಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಹೆಚ್ಚುವರಿ ಪೊಲೀಸ್ ಎಸ್‌ಪಿ ಎಲ್ ವೈ ಶಿರಕೋಳ ತಿಳಿಸಿದ್ದಾರೆ.
“ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಹೇಳಿಕೆ ಪಡೆಯಲಾಗಿದೆ. ಪ್ರಾಣಿ ಹಿಂಸೆ ಹಾಗೂ ಪ್ರಾಣಿಯನ್ನು ಪ್ರಚೋದಿಸಿ ನಿರ್ಲಕ್ಷ್ಯ ವಹಿಸಿ ಸಾವಿಗೆ ಕಾರಣವಾದ ಆರೋಪದಡಿ ಹೋರಿ ವಾರಸುದಾರರು/ಪೋಷಕರು, ಆಯೋಜಕರು ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಸ್ಪರ್ಧೆಗಳು ನಡೆದರೆ, ಹೋರಿ ಮಾಲೀಕರು, ಆಯೋಜಕರು, ಪ್ರೋತ್ಸಾಹಕರು, ಬಹುಮಾನ ಕೊಡಿಸುವ ದಾನಿಗಳು ಹಾಗೂ ಪ್ರಚೋದಿಸುವ ಎಲ್ಲರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಘಟನೆ ಹಿನ್ನೆಲೆ
ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿ ಜಿಲ್ಲೆಯ ವಿವಿಧೆಡೆ ‘ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ’ ಹಾಗೂ ‘ಹೋರಿಗಳ ಮೆರವಣಿಗೆ’ಯಂತಹ ಆಚರಣೆಗಳನ್ನು ಮಾಡುತ್ತಾರೆ. ಈ ವೇಳೆ ಹೋರಿಗಳು ಗುದ್ದಿ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.
ಹಾವೇರಿಯ ದಾನೇಶ್ವರಿನಗರದ ನಿವಾಸಿ, ಹೆಸ್ಕಾಂನ ನಿವೃತ್ತ ನೌಕರ ಚಂದ್ರಶೇಖರ ಕೋಡಿಹಳ್ಳಿ(70), ದೇವಿಹೊಸೂರಿನ ಘನಿಸಾಬ ಮಹಮ್ಮದ್ ಹುಸೇನ್ ಬಂಕಾಪುರ(75) ಹಾಗೂ ತಿಳವಳ್ಳಿಯ ಯುವಕ ಭರತ್ ರಾಮಪ್ಪ ಹಿಂಗಮೇರಿ(24), ಯಳವಟ್ಟಿ ಗ್ರಾಮದ ಶ್ರೀಕಾಂತ ಗುರುಶಾಂತಪ್ಪ ಕೋಣನಕೇರಿ(40) ಮೃತಪಟ್ಟ ದುರ್ದೈವಿಗಳು.
ಹಾವೇರಿ ನಗರದ ವೀರಭದ್ರೇಶ್ವರ ದೇವಸ್ಥಾನದ ಬಳಿ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತಿತ್ತು. ಈ ವೇಳೆ, ಸ್ಪರ್ಧೆಯಿಂದ ತಪ್ಪಿಸಿಕೊಂಡು ಓಡಿದ ಹೋರಿಯೊಂದು, ಹಳೇ ಪಿ ಬಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಚಂದ್ರಶೇಖರ್ ಕೋಡಿಹಳ್ಳಿ ಅವರಿಗೆ ರಭಸದಿಂದ ಗುದ್ದಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದೇವಿಹೊಸೂರು ಗ್ರಾಮದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಎತ್ತುಗಳ ಮೆರವಣಿಗೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ಮೆರವಣಿಗೆಯಲ್ಲಿದ್ದ ಎತ್ತೊಂದು ಬೆದರಿ ಓಡಿದ್ದು, ಹೊಂಡದ ಓಣಿಯಲ್ಲಿರುವ ತಮ್ಮ ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ಘನಿಸಾಬ ಅವರ ಮೇಲೆ ದಾಳಿ ಮಾಡಿದೆ. ಎತ್ತಿನ ಕೊಂಬು ಅವರ ಕುತ್ತಿಗೆ ಮತ್ತು ಎದೆಗೆ ತೀವ್ರವಾಗಿ ತಿವಿದ ಪರಿಣಾಮ, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣ ಹೋಗಿದೆ.
ಈ ಸುದ್ದಿ ಓದಿದ್ದೀರಾ? ಔರಾದ್ | ಸೋಯಾ ಬಣವಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು : ಪರಿಹಾರಕ್ಕೆ ಆಗ್ರಹ
ಮತ್ತೊಂದು ದುರಂತದಲ್ಲಿ, ತಿಳವಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡಲು ಹೋಗಿದ್ದ ಭರತ್ ರಾಮಪ್ಪ ಹಿಂಗಮೇರಿ ಅವರ ಎದೆಗೆ ಹೋರಿಯೊಂದು ಬಲವಾಗಿ ಗುದ್ದಿದೆ. ಅದರ ರಭಸಕ್ಕೆ ನೆಲಕ್ಕೆ ಬಿದ್ದ ಭರತ್ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು. ಕೂಡಲೇ ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಹಾವೇರಿ ನಗರ, ಗ್ರಾಮೀಣ, ಆಡೂರು ಹಾಗೂ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.





