ಹಾವೇರಿ ಜಿಲ್ಲೆಯ ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪ್ರಕರಣದ ಏಳು ಆರೋಪಿಗಳನ್ನು ಒಂದು ವರ್ಷ ಕಾಲ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಸವಣೂರ ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ಅವರು ಪ್ರಕರಣದ ಏಳೂ ಆರೋಪಿಗಳನ್ನು ಗಡಿಪಾರು ಮಾಡಿ ಡಿ. 18ರಂದು ಆದೇಶ ಹೊರಡಿಸಿದ್ದಾರೆ.
ಅಪ್ತಾಬ್ ಚಂದನಕಟ್ಟಿ, ಮದರ್ ಸಾಬ್ ಮಂಡಕ್ಕಿ, ಮಹ್ಮಮದ್ ಸಾದಿಕ್ ಅಗಸಿಮನಿ, ರಿಯಾಜ್ ಸಾವಿಕೇರಿ, ಸಮಿವುಲ್ಲಾ ಲಾಲನವರ, ಶೋಯಿಬ್ ಮುಲ್ಲಾ ಹಾಗೂ ತೌಸಿಪ್ ಅಹ್ಮದ್ ಚೌಟಿ ವಿರುದ್ಧ ಈ ಕ್ರಮ ಜರುಗಿದೆ. ಆರೋಪಿಗಳು ಯಾದಗಿರಿ ಜಿಲ್ಲೆಯ ಹುಣಸಗಿ ಪೊಲೀಸ್ ಠಾಣೆಯಲ್ಲಿ ನಿಯಮಿತವಾಗಿ ಹಾಜರಾತಿ ನೀಡಬೇಕು.
ಬಾಕಿ ಇರುವ ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುವ ವೇಳೆ ಠಾಣೆಗೆ ಪೂರ್ವ ಮಾಹಿತಿ ನೀಡಬೇಕು. ಜೊತೆಗೆ ನಿಗದಿತ ಮಾರ್ಗಗಳ ಮೂಲಕವೇ ಹಾವೇರಿ ಜಿಲ್ಲೆಗೆ ಪ್ರವೇಶಿಸಲು ಎಸಿ ಆದೇಶದಲ್ಲಿ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ.





