“ಆರೋಗ್ಯವನ್ನು ವಿಶಾಲ ದೃಷ್ಟಿಯಿಂದ ನೋಡಬೇಕು. ಸಾಮಾಜಿಕ ಸಮಸ್ಯೆ, ಅನ್ಯಾಯ, ಅಸಮಾನತೆ, ತಾರತಮ್ಯದಿಂದ ಸಾಮಾಜದಲ್ಲಿ ಅಸಮತೋಲನ ಕಾಣುತ್ತಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಶೈಕ್ಷಣಿಕವಾಗಿ ಒಳಗೊಂಡ ವ್ಯವಸ್ಥೆ ಇಲ್ಲಿ ಅವಕಾಶ ಇರುತ್ತದೆಯೋ ಅಲ್ಲಿ ಆರೋಗ್ಯವು ಒಳಗೊಂಡಿದೆ” ಎಂದು ಸಂಪನ್ಮೂಲ ವ್ಯಕ್ತಿ ಡಾ. ಅಕಿಲಾ ಅವರು ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ಲೋಯಲಾ ವಿಕಾಸ ಕೇಂದ್ರದಲ್ಲಿ ಜನವೇದಿಕೆ, ವಿವಿಧ ಸಂಘಟನೆಗಳು ಹಾಗೂ ಕರ್ನಾಟಕ ಜನಾರೋಗ್ಯ ಚಳುವಳಿ ಸಹಯೋಗದಲ್ಲಿ ಸರ್ಕಾರಿ ಆರೋಗ್ಯ ವ್ಯವಸ್ಥೆ ಉಳಿಸಿ ಜನರ ರಕ್ಷಸಿ ಶೀರ್ಷಿಕೆ ಅಡಿಯಲ್ಲಿ ಹಾವೇರಿ ಜಿಲ್ಲಾ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು.
“ನೀರು, ವಸತಿ ಹೀಗೆ ಅನೇಕ ಹಕ್ಕುಗಳಿಗಾಗಿ ಹೋರಾಟ ಮಾಡಿದ ಹಾಗೆ ಆರೋಗ್ಯದ ಬಗ್ಗೆ ನಾವ್ಯಾಕೆ ಹೋರಾಟ ಮಾಡ್ತಿಲ್ಲ. ಆರೋಗ್ಯದ ಬಗ್ಗೆ ಚಿಂತನೆ ಮಾಡ್ತಿಲ್ಲ. ಆರೋಗ್ಯ ಅಂದರೆ ಆಸ್ಪತ್ರೆ, ಡಾಕ್ಟರ್, ರೋಗಿಗಳು, ದೈಹಿಕ ಅಷ್ಟೇ ಸಂಕುಚಿತ ಅಲ್ಲ. ಒಳ್ಳೆ ಆಹಾರ, ಗಾಳಿ, ಶೌಚಾಲಯ, ಶಿಕ್ಷಣ, ಉದ್ಯೋಗ ಇವೆಲ್ಲವೂ ಮನುಷ್ಯನಿಗೆ ಇದ್ದರೆ ಆರೋಗ್ಯ ಇದ್ದ ಹಾಗೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕರು ಫಾದರ್ ವಿನ್ಸಂಟ್ ಜೇಸನ್ ಮಾತನಾಡಿ, “ಕೊರೊನಾ ಸಂದರ್ಭದಲ್ಲಿ ಬೆಡ್ ಕೊರತೆ ಇದ್ದಾಗ, ಒಂದು ಬೆಡ್ ಗೆ ನಾಲ್ಕು ಲಕ್ಷ ಕೊಡಿ ಕೊಡುತ್ತೇವೆಂದು ಹೇಳಿದ್ದರು. ಬಡವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಇಂತಹ ಕೆಟ್ಟವ್ಯವಸ್ಥೆ ವ್ಯವಸ್ಥೆ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಿದರೆ ಬದಲಾವಣೆ ಆಗಲು ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮದ ಪ್ರಸ್ತಾವಿಕವಾಗಿ ರೋಶನಿ ಟ್ರಸ್ಟ್ ಕೆ. ಎಫ್ ನಾಯ್ಕರ ಮಾತನಾಡಿ, “ಹಾನಗಲ್ಲ ತಾಲ್ಲೂಕಿನಲ್ಲಿ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಕೊರತೆ, ಸೌಲಭ್ಯಗಳ ಕೊರತೆ ಇರುವಾಗ ಜನಸಾಮಾನ್ಯರಿಗೆ ಹೇಗೆ ಆರೋಗ್ಯ ಕೊಡಲು ಆಗುತ್ತದೆ ಎಂಬ ಪ್ರಶ್ನೆ ಕಾಡುತ್ತದೆ. ಇಪ್ಪತ್ತು ಸಾವಿರ ಜನಸಂಖ್ಯೆಗೆ ಒಂದು ಸರಕಾರಿ ಆಸ್ಪತ್ರೆ ಇರಬೇಕು. ಆದರೆ ಕೆಲವು ಕಡೆ ನಲವತ್ತು ಸಾವಿರ ಜನಸಂಖ್ಯೆಗೆ ಆಸ್ಪತ್ರೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರ (ಪಿ.ಎಚ್.ಸಿ) ಇಪ್ಪತ್ನಾಲ್ಕು ಗಂಟೆಗಳ ಕಾಲ ತೆರೆದಿರಬೇಕು. ಆದರೆ ಅನೇಕ ಕಡೆ ಎಂಟು ಗಂಟೆ ಮಾತ್ರ ತೆರೆದಿರುತ್ತವೆ. ಹೀಗಾದರೆ ಬಡವರು ಚಿಕಿತ್ಸೆ ಹೇಗೆ ಪಡೆಯಲು ಸಾಧ್ಯ” ಎಂದು ಹೇಳಿದರು.
“ನಾವು ಸಮೀಕ್ಷೆಯಲ್ಲಿ ಕಂಡುಕೊಂಡ ಹಾಗೆ ಐದು ಜಿಲ್ಲೆಗಳಲ್ಲಿ 172 ಆಶಾ ಕಾರ್ಯಕರ್ತರ ಕೊರತೆ ಇದೆ. ಇದನ್ನು ಯಾರು ಕೇಳಬೇಕು? ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೆ, ಬಡವರೂ ಸಹಿತ ಖಾಸಗಿ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಇದ್ದು, ಹಣ ಕಟ್ಟಲಾಗದೆ ಹೆಣ ತರಲು ಒದ್ದಾಡುವ ಪರಿಸ್ಥಿತಿ ಇದೆ. ಹಾಗಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಉತ್ತಮ ಚಿಕೆತ್ಸೆ ಸಿಗಬೇಕು” ಎಂದು ಹೇಳಿದರು.
ಸಂವಿಧಾನ ಪೀಠಿಕೆ ಓದುವುದರ ಮೂಲಕ ಕಾರ್ಯಕ್ರಮ ಆರಂಭವಾಯಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದೆಹಲಿ ಸ್ಪೋಟ ಹಿನ್ನೆಲೆ; ನಗರ, ಜಿಲ್ಲೆಯಾದ್ಯಂತ ಪೊಲೀಸರ ಕಟ್ಟೆಚ್ಚರ, ತಪಾಸಣೆ
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಬಸವರಾಜ ಕೊತಂಬರಿ, ಚಂದ್ರಪ್ಪ ಹೊಸಳ್ಳಿ, ಮಹಾಲಿಂಗಪ್ಪ ಅಕ್ಕಿವಳ್ಳಿ, ನಿವೃತ್ತ ಅಧಿಕಾರಿ ಡಾ. ಕಮ್ಮಾರ, ಗ್ರಾಕೂಸ್ ಸಂಘಟನೆಯ ಗಂಗಮ್ಮ, ನಿವೃತ್ತ ಅಧಿಕಾರಿ ಬಿ ಆರ್ ಶೆಟ್ಟರ್, ಚೈತ್ರಾ ಕಂಬಾಳಿಮಠ, ಸುವರ್ಣ ಆರ್. ಎಚ್ ಮಂಜುನಾಥ್ ಕರ್ಜಗಿ, ಕಲೀಮ್ ಮಾಸಣಕಟ್ಟಿ, ಮಂಜುನಾಥ ಕುದರಿ, ಹಾಲೇಶ್ ಗೊಲ್ಲರ್ ಇನ್ನೂ ಅನೇಕರು ಭಾಗವಹಿಸಿದ್ದರು.





