ಹುಬ್ಬಳ್ಳಿಯ ಇನಾಂ ವೀರಾಪುರದ ಗರ್ಭಿಣಿ ಯುವತಿ ಮಾನ್ಯಾ ಪಾಟೀಲ ಮರ್ಯಾದೆಗೇಡು ಹತ್ಯೆ ಖಂಡಿಸಿ, ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಲು ಹಾಗೂ ಕಠಿಣ ಕಾಯ್ದೆ ರೂಪಿಸಲು ಆಗ್ರಹಿಸಿ ಹಾವೇರಿ ಜಿಲ್ಲೆಯ ಹಿರೇಕೆರೂರ ಪಟ್ಟಣದ ತಹಶೀಲ್ದಾರ ಕಚೇರಿ ಎದುರು SFI ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ನಂತರ ಎಸ್ಎಫ್ಐ ಜಿಲ್ಲಾ ಮುಖಂಡ ಅರುಣ್ ನಾಗವತ್ ಮಾತನಾಡಿ, “ಮರ್ಯಾದಾ ಹತ್ಯೆ ಪಿಡುಗನ್ನು ಬುಡಸಮೇತ ಕಿತ್ತುಹಾಕಲು ಸರ್ಕಾರ ಇಚ್ಛಾಶಕ್ತಿ ತೋರಬೇಕು. ಜಾತಿ ದ್ವೇಷದಿಂದ ಪ್ರೇಮಿಗಳ ಅಥವಾ ದಂಪತಿಗಳ ಮೇಲೆ, ಅವರ ಕುಟುಂಬದ ಮೇಲೆ ನಡೆಯುವ ಹಲ್ಲೆ, ಅಮಾನವೀಯ ಅಪರಾಧಗಳನ್ನು “ಘೋರ ಅಪರಾಧ” ಎಂದು ಪರಿಗಣಿಸಿ, ಮರ್ಯಾದಾ ಹತ್ಯೆ ವಿರುದ್ಧ ಕಠಿಣ ಕಾಯ್ದೆ ರೂಪಿಸಲು ಸರ್ಕಾರ ಮುಂದಾಗಬೇಕು” ಎಂದರು.
“ಅನ್ಯ ಜಾತಿ ಯುವಕ ವಿವೇಕಾನಂದ ದೊಡ್ಡಮನಿಯನ್ನು ಮದುವೆಯಾಗಿದ್ದಕ್ಕೆ ಏಳು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಾ ಪಾಟೀಲ ಮೇಲೆ ಸ್ವತಃ ತಂದೆ ಹಾಗೂ ಕುಟುಂಬಸ್ಥರು ನಡೆಸಿದ್ದ ಮರ್ಯಾದೆಗೇಡು ಭೀಕರ ಹತ್ಯೆಯು ನಾಗರೀಕ ಸಮಾಜಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಅಮಾನವೀಯವಾಗಿ ಹತ್ಯೆ ಮಾಡಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ಅಂತರ್ಜಾತಿ ವಿವಾಹವಾಗುವ ಎಲ್ಲ ಯುವಕ ಯುವತಿಯರಿಗೆ ಸೂಕ್ತ ಕಾನೂನು ರಕ್ಷಣೆ ನೀಡಬೇಕು. ಅವರಿಗೆ ಸಾಮಾಜಿಕವಾಗಿ ಆರ್ಥಿಕ ಬಲ ತುಂಬಲು ಪ್ರೋತ್ಸಾಹ ಧನ ಹೆಚ್ಚಳಗೊಳಿಸಬೇಕು ಹಾಗೂ ಮೀಸಲಾತಿ ಸೌಲಭ್ಯ ಒದಗಿಸುವುದು ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಹಾವೇರಿ | ಕಲುಷಿತ ಆಹಾರ ಸೇವನೆ; ಹಾಸ್ಟೆಲ್ ವಿದ್ಯಾರ್ಥಿಗಳ ಅಸ್ವಸ್ಥ, ಆಸ್ಪತ್ರೆಗೆ ದಾಖಲು
“ಮುಂದೆ ಈ ರೀತಿ ಘಟನೆಗಳು ನಡೆಯದಂತೆ ಈಗಾಗಲೇ ಅವಮರ್ಯಾದಾ ಹತ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಲವು ಮಹತ್ವದ ಆದೇಶಗಳನ್ನು ನೀಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ದೇಶದ ಸರ್ವೊಚ್ಛ ನ್ಯಾಯಾಲಯದ ಆದೇಶಗಳನ್ನು ಬದ್ದತೆಯಿಂದ ಪಾಲಿಸುವ ಮೂಲಕ ಸಮಾಜದಲ್ಲಿ ಮರ್ಯಾದೆಗೇಡು ಹತ್ಯೆಯ ವಿರುದ್ದ ಕಠಿಣ ಕಾನೂನು ಜಾರಿಗೆ ತರಬೇಕು” ಎಂದರು.
ಮನವಿ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಹರ್ಷಾ ಕೆ, ವಿನಯ್ ಚೌಟಿ, ಚೇತನ್ ಟಿ, ಮಂಜು ಹೆಚ್, ಪ್ರಮೋದ್ ಜಿ, ಸುನಿಲ್ ಎ, ಅಮೀರ್ ಖಾನ್, ಶಿವಪ್ಪ ಅಂಗಡಿ ಉಪಸ್ಥಿತರಿದ್ದರು.





