“ಸಾರ್ವಭೌಮ ರಾಷ್ಟ್ರವಾದ ವೆನೆಜುವೆಲಾ ವಿರುದ್ಧ ಅಮೆರಿಕ ಸಂಯುಕ್ತ ಸಂಸ್ಥಾನವು ನಡೆಸಿರುವ ಘೋರ ಸೇನಾ ಆಕ್ರಮಣವನ್ನು ಡಿವೈಎಫ್ಐ ಪ್ರಬಲವಾಗಿ ಖಂಡಿಸುತ್ತದೆ. ವೆನೆಜುವೆಲಾದ ಕ್ಯಾರಕಾಸ್ ಮತ್ತು ಇತರ ಪ್ರದೇಶಗಳಲ್ಲಿ ನಾಗರಿಕ ಮತ್ತು ಮಿಲಿಟರಿ ಸ್ಥಳಗಳ ಮೇಲೆ ಅಮೇರಿಕಾ ನಡೆಸಿರುವ ಬಾಂಬ್ ದಾಳಿಯು ಅಂತರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಚಾರ್ಟರ್ ಹಾಗೂ ಸಾರ್ವಭೌಮತ್ವ ಮತ್ತು ಹಸ್ತಕ್ಷೇಪ ಮಾಡದಿರುವ ಮೂಲಭೂತ ತತ್ವಗಳ ಗಂಭೀರ ಉಲ್ಲಂಘನೆಯಾಗಿದೆ” ಎಂದು ಡಿವೈಎಫ್ಐ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ಹಾವೇರಿ ಪಟ್ಟಣದ ಗಾಂಧಿ ವೃತ್ತದಲ್ಲಿ ಎಸ್ಎಫ್ಐ, ಡಿವೈಎಫ್ಐ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ವೆನಿಜುವೆಲಾ ದೇಶದ ಮೇಲೆ ಸಾಮ್ರಾಜ್ಯಶಾಹಿ ಅಮೇರಿಕಾದ ಆಕ್ರಮಣವನ್ನು ಖಂಡಿಸಿ, ಅಧ್ಯಕ್ಷ ಮುದುರೋ ಹಾಗೂ ಮುದುರೊ ಪತ್ನಿಯ ಬಿಡುಗಡೆಗಾಗಿ ಆಗ್ರಹಿಸಿ ಮತ್ತು ವೆನೆಜುವೆಲಾ ಜನತೆಗೆ ಸೌಹಾರ್ದ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
“ಅಮೇರಿಕಾದ ಈ ದುಷ್ಕೃತ್ಯವು ಪ್ರತ್ಯೇಕ ಘಟನೆಯಲ್ಲ. ಆದರೆ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೇರಿಕಾ ಮತ್ತು ಪಶ್ಚಿಮ ಏಷ್ಯಾದಾದ್ಯಂತ ಹಲವಾರು ದೇಶಗಳ ಶಾಂತಿಯುತ ಅಸ್ತಿತ್ವವನ್ನು ನಾಶಪಡಿಸಿದ ಯುಎಸ್ ಸಾಮ್ರಾಜ್ಯಶಾಹಿಯ ದೀರ್ಘ ಮತ್ತು ಹಿಂಸಾತ್ಮಕ ಇತಿಹಾಸದ ಮುಂದುವರಿಕೆಯಾಗಿದೆ. ಇರಾಕ್, ಅಫ್ಘಾನಿಸ್ತಾನ್ ಮತ್ತು ಲಿಬಿಯಾದಿಂದ ಚಿಲಿ, ವಿಯೆಟ್ನಾಂ ಮತ್ತು ಈಗ ವೆನೆಜುವೆಲಾ ಇವುಗಳ ಆಡಳಿತದಲ್ಲಿ ಯುಎಸ್ ಸಾಮ್ರಾಜ್ಯಶಾಹಿಯು ಕುಟೀಲ ನೀತಿಯಿಂದ ಹಸ್ತಕ್ಷೇಪ ನಡೆಸಿರುವುದು ಈ ದೇಶಗಳಲ್ಲಿ ಅಪಾರ ಮಾನವ ಸಂಕಟ, ರಾಜಕೀಯ ಅಸ್ಥಿರತೆ ಮತ್ತು ಆರ್ಥಿಕ ವಿನಾಶಕ್ಕೆ ಕಾರಣವಾಗಿವೆ. ಇವೆಲ್ಲವೂ ಅಮೇರಿಕಾಕ್ಕಿರುವ ಸಂಪನ್ಮೂಲಗಳ ಮೇಲಿನ ಹಾಗೂ ಭೂ ರಾಜಕೀಯ ಪ್ರಾಬಲ್ಯ ಮೆರೆದು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ಸಾಮ್ರಾಜ್ಯಶಾಹಿಯ ಯುದ್ಧಕೋರ ದಾಹವಾಗಿದೆ. ಜಾಗತಿಕ ಮನುಷ್ಯರಲ್ಲಿ ಶಾಂತಿ ಐಕ್ಯತೆ ಬಯಸುವರೆಲ್ಲರೂ ಸಾಮ್ರಾಜ್ಯಶಾಹಿ ಈ ನಡೆಯನ್ನು ತೀವ್ರವಾಗಿ ಖಂಡಿಸಬೇಕಿದೆ” ಎಂದರು.
“ಭಾರತದ ಯುವಕರು ವೆನೆಜುವೆಲಾದ ಜನರು ಮತ್ತು ಸಾಮ್ರಾಜ್ಯಶಾಹಿಯನ್ನು ವಿರೋಧಿಸುವ ಎಲ್ಲಾ ರಾಷ್ಟ್ರಗಳೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದಾರೆ. ಸಾಮ್ರಾಜ್ಯಶಾಹಿ ಯುದ್ಧಗಳ ವಿರುದ್ಧ ಒಂದಾಗಲು ಮತ್ತು ಶಾಂತಿ, ಸಾರ್ವಭೌಮತ್ವ ಮತ್ತು ಸ್ವ-ನಿರ್ಣಯವನ್ನು ರಕ್ಷಿಸಲು ಪ್ರಪಂಚದಾದ್ಯಂತದ ಪ್ರಜಾಪ್ರಭುತ್ವ, ಪ್ರಗತಿಪರ ಮತ್ತು ಶಾಂತಿ-ಪ್ರೀತಿಯ ಶಕ್ತಿಗಳಿಗೆ ಎಸ್ಎಫ್ಐ-ಡಿವೈಎಫ್ಐ ಕರೆ ನೀಡುತ್ತವೆ” ಎಂದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ವೆನೆಜುವೆಲಾ ವಿರುದ್ಧದ ಪ್ರಸ್ತುತ ಆಕ್ರಮಣವು ಬಲವಂತವಾಗಿ ಆಡಳಿತ ಬದಲಾವಣೆಯನ್ನು ಹೇರುವ ಮತ್ತು ದೇಶದ ಆಯಕಟ್ಟಿನ ಸಂಪನ್ಮೂಲಗಳನ್ನು, ವಿಶೇಷವಾಗಿ ತೈಲ ಮತ್ತು ಖನಿಜಗಳನ್ನು ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಬಾಹ್ಯ ಹಸ್ತಕ್ಷೇಪವಿಲ್ಲದೆ ತಮ್ಮ ಸ್ವಂತ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಹಕ್ಕನ್ನು ರಕ್ಷಿಸಿಕೊಳ್ಳುವ ಹೋರಾಟದಲ್ಲಿ ಎಸ್ಎಫ್ಐ – ಡಿವೈಎಫ್ಐ ವೆನೆಜುವೆಲಾದ ಜನರು ಮತ್ತು ಅವರ ಕಾನೂನುಬದ್ಧ ಸರ್ಕಾರದೊಂದಿಗೆ ದೃಢವಾಗಿ ನಿಲ್ಲುತ್ತವೆ” ಎಂದರು.
“ಸಾಮ್ರಾಜ್ಯಶಾಹಿ ಮಿಲಿಟರಿ ಹಸ್ತಕ್ಷೇಪದಿಂದ ಮುಕ್ತವಾಗಿ ಲ್ಯಾಟಿನ್ ಅಮೆರಿಕವನ್ನು ಶಾಂತಿಯ ವಲಯವೆಂದು ಘೋಷಿಸಬೇಕು. ಯುಎಸ್ ಆಕ್ರಮಣವನ್ನು ತಕ್ಷಣವೇ ನಿಲ್ಲಿಸಲು, ಕೆರಿಬಿಯನ್ ಪ್ರದೇಶದಿಂದ ಎಲ್ಲಾ ಯುಎಸ್ ಮಿಲಿಟರಿ ಉಪಸ್ಥಿತಿಯನ್ನು ಹಿಂತೆಗೆದುಕೊಳ್ಳಲು ಎಸ್ಎಫ್ಐ-ಡಿವೈಎಫ್ಐ ಆಗ್ರಹಿಸುತ್ತವೆ. ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಗೈಯ್ಯುತ್ತಿರುವ ಯುಎಸ್ ಸರ್ಕಾರದ ದುರ್ವರ್ತನೆಯನ್ನು ಬಲವಾಗಿ ವಿರೋಧಿಸುತ್ತವೆ” ಎಂದರು.
ಪ್ರತಿಭಟನೆಯಲ್ಲಿ ಸಾಮ್ರಾಜ್ಯಶಾಹಿ ಅಮೇರಿಕಾಗೆ ಧಿಕ್ಕಾರ!
ಅಂತರಾಷ್ಟ್ರೀಯ ಸೌಹಾರ್ದತೆ ಚಿರಾಯುವಾಗಲಿ! ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಡಿಎಸ್ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉಡಚಪ್ಪ ಮಾಳಗಿ, ಬಹುಜನ ಚಳುವಳಿ ಮುಖಂಡ ಎಮ್.ಕೆ ಮಕಬುಲ್, ಅಲೆಮಾರಿ ಸಮುದಾಯ ಸಂಘಟನೆ ಜಿಲ್ಲಾಧ್ಯಕ್ಷ ಸೆಟ್ಟಿ ವಿಭೂತಿ ನಾಯಕ್, ಅಂಗವಿಕಲ ಸಂಘಟನೆ ಮುಖುಂಡರಾದ ಮಂಜುನಾಥ ಕಮ್ಮಾರ, ಬಸನಗೌಡ ಪಾಟೀಲ, ಎಸ್ಎಫ್ಐ ಡಿವೈಎಫ್ಐ ಮುಖಂಡರಾದ ಅರುಣ ನಾಗಾವತ್, ಚೈತ್ರಾ ಕೊರವರ, ಜೀವನಸಿಂಗ್ ರಜಪೂತ, ಧನುಷ್ ದೊಡಮನಿ, ಸೌಮ್ಯಾ ಕ್ಯಾತನ್ ಸೇರಿದಂತೆ ಇತರರಿದ್ದರು.





