ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಊಟ ಹಾಗೂ ಉಪಹಾರ ಒದಗಿಸುವ ಉದ್ದೇಶ ಹೊಂದಿರುವ ‘ಇಂದಿರಾ ಕ್ಯಾಂಟೀನ್’ ಯೋಜನೆಯು ರಾಜ್ಯಾದ್ಯಂತ ಜಾರಿಗೆ ಬಂದು ಏಳು ವರ್ಷಗಳೇ ಕಳೆದಿವೆ. ಆದರೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಐದು ತಿಂಗಳಿಂದ ಉದ್ಘಾಟನೆಯಾಗದೆ ಇಂದಿರಾ ಕ್ಯಾಂಟೀನ್ ನನೆಗುದಿಗೆ ಬಿದ್ದಿದೆ.
ಪಟ್ಟಣದ ಇಂದಿರಾ ಕ್ಯಾಂಟೀನ್‌ನಲ್ಲಿ ಎಲ್ಲ ಸಾಮಗ್ರಿಗಳು ಇದ್ದರೂ ಹಸಿದವರ ಹೊಟ್ಟೆಗೆ ಅನ್ನ ಭಾಗ್ಯವಿಲ್ಲ. ʼದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲʼ ಎಂಬಂತೆ ಜನಪ್ರತಿನಿದಿನಗಳ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ ಐದು ತಿಂಗಳಿಂದ ಆರಂಭವಾಗದೇ ಇರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇರುವ ಇಂದಿರಾ ಕ್ಯಾಂಟೀನ್ ಹಸಿದವರ ಪಾಲಿಗೆ ಅನ್ನವಾಗಬೇಕಿತ್ತು. ಕಳೆದ ಜೂನ್ ತಿಂಗಳಲ್ಲಿಯೇ ಇಂದಿರಾ ಕ್ಯಾಂಟೀನ್‌ಗೆ ಬೇಕಾದ ಎಲ್ಲ ಅಡುಗೆ ಸಾಮಗ್ರಿಗಳು ಇದ್ದರೂ ಕೂಡ ಏಳು ತಿಂಗಳಿಂದ ಸೇವೆ ಆರಂಭಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಹತ್ತಿರದಲ್ಲೇ ಬಸ್ ನಿಲ್ದಾಣ, ಅಂಚೆಕಚೇರಿ, ಆಟೋ ನಿಲ್ದಾಣಗಳಿವೆ. ನಿತ್ಯವೂ ಹಳ್ಳಿಗಳಿಂದ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ರೈತರು, ಆಟೋ ಚಾಲಕರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಜನರು ಶಿಗ್ಗಾವಿ ಪಟ್ಟಣಕ್ಕೆ ಬರುತ್ತಾರೆ. ಹಸಿವು ಹೊತ್ತು ಬಂದವರು ಇಂದಿರಾ ಕ್ಯಾಂಟೀನ್ ಕಡೆಗೆ ಕಣ್ಣು ಹಾಯಿಸಿದರೆ ಕೇವಲ ‘ಇಂದಿರಾ ಕ್ಯಾಂಟೀನ್’ ನಾಮಫಲಕ ಕಾಣುತ್ತಿದೆಯೇ ಹೊರತು ಊಟ ಮಾತ್ರ ಸಿಗುತ್ತಿಲ್ಲ.
ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ, ವಿಳಂಬ ನೀತಿಯಿಂದ ಇಂದಿರಾ ಕ್ಯಾಂಟೀನ್ ಒಳಗಡೆ ಮತ್ತೆ ಕಸಕಡ್ಡಿ ತುಂಬುತ್ತಿದೆ. ಕ್ಯಾಂಟೀನ್ ಸುತ್ತಮುತ್ತ ಎತ್ತ ಕಣ್ಣು ಹಾಯಿಸಿದರೂ ಸಾರಾಯಿ ಬಾಟಲಿಗಳೇ ಕಾಣಸಿಗುತ್ತಿವೆ. ಕಸ ಮುಳ್ಳುಗಂಟಿ, ಪ್ಲಾಸ್ಟಿಕ್ ಹಾಳೆಗಳು ಬಿದ್ದಿವೆ. ಕ್ಯಾಂಟೀನ್ ಪಕ್ಕದಲ್ಲಿಯೇ ಮೂತ್ರ ವಿಸರ್ಜನೆ ಮಾಡುವರು.

ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದರೆ ಅಲ್ಲಿ ಪುರಸಭೆಯ ಪೌರಕಾರ್ಮಿಕರಿಬ್ಬರು ಇರುವರು. ಅವರನ್ನು ಇನ್ನೂ ಯಾಕೆ ಆರಂಭವಾಗಿಲ್ಲವೆಂದು ಕೇಳಿದರೆ, “ನಾಲ್ಕೈದು ತಿಂಗಳಿಂದ ನಮ್ಮನ್ನು ಸ್ವಚ್ಛತೆ, ಇಲ್ಲಿರುವ ಸಾಮಾನುಗಳನ್ನು ಕಾಯಲು ಕಳುಹಿಸಿದ್ದಾರೆ. ಯಾವಾಗ ಆರಂಭವಾಗುತ್ತದೋ ಗೊತ್ತಿಲ್ಲ. ಆರಂಭವಾಗುವರೆಗೂ ಇಂದಿರಾ ಕ್ಯಾಂಟೀನನ್ನು ನೋಡಿಕೊಳ್ಳಬೇಕು” ಎಂದು ಹೇಳಿದರು.
ಕರವೇ ಗಜಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ್ ಮಾತನಾಡಿ, “ಕಾಂಗ್ರೆಸ್ ಪಕ್ಷದ ಕನಸಿನ ಕೂಸು ಇಂದಿರಾ ಕ್ಯಾಂಟೀನ್. ಈ ಯೋಜನೆ ಆರಂಭವಾಗಿ ಇಷ್ಟು ವರ್ಷ ಕಳೆದರೂ ಶಿಗ್ಗಾವಿ ಪಟ್ಟಣದಲ್ಲಿ ಸಂಪೂರ್ಣ ಕಾಮಗಾರಿ ಮುಗಿದಿರಲಿಲ್ಲ. ಈಗ ಕಟ್ಟಡ ಕಾಮಗಾರಿ ಮುಗಿದಿದೆ ಆದರೂ ಇನ್ನೂ ಕ್ಯಾಂಟೀನ್ ಆರಂಭವಾಗಿಲ್ಲ. ಆರ್ಥಿಕವಾಗಿ ಹಿಂದುಳಿದ ಜನರ ಹಸಿವನ್ನು ಕಡಿಮೆ ಹಣದಲ್ಲಿ ನೀಗಿಸಲು ಅನುಕೂಲವಾಗಿದೆ. ಹಾಗಾಗಿ ಶಾಸಕರು ಇನ್ನು ಹದಿನೈದು ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಬೇಕೆಂದು ಮನವಿ ಮಾಡುತ್ತೇವೆ. ಇಲ್ಲದಿದ್ದರೆ ಕರವೇ ಗಜಸೇನೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿದ್ದೀರಾ? ಹಾವೇರಿ | ಹೆಚ್ಚುವರಿ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಪ್ರತಿಭಟನೆ
ಶಿಗ್ಗಾವಿ ಪುರಸಭೆ ಮುಖ್ಯ ಅಧಿಕಾರಿ ಮಲ್ಲೇಶ್ ಆರ್ ಮಾತನಾಡಿ, “ಶಾಸಕರು ನವೆಂಬರ್ ಎರಡನೇ ತಾರೀಖಿನಂದು ಉದ್ಘಾಟನೆ ಮಾಡುವುದಾಗಿ ತಿಳಿಸಿದ್ದಾರೆ. ಅಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಲಾಗುವುದು” ಎಂದು ಮಾಹಿತಿ ನೀಡಿದರು.
ಈಗಾಗಲೇ ಇಂದಿರಾ ಕ್ಯಾಂಟೀನ್ ಯೋಜನೆ ಬಡಜನರ ಹಸಿವಿನ ಶಮನಕ್ಕೆ ಒಂದು ಆಶಾಕಿರಣವಾಗಿ ರೂಪುಗೊಂಡಿದ್ದರೂ, ಶಿಗ್ಗಾವಿ ಪಟ್ಟಣದಲ್ಲಿ ಯೋಜನೆಯ ಜಾರಿ ವಿಳಂಬವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ವಿಳಂಬ ನೀತಿ ಸ್ಥಳೀಯ ಜನರಿಗೆ ತೀವ್ರ ನಿರಾಸೆ ತಂದಿದೆ. ಇನ್ಮೇಲಾದರೂ ಸಂಬಂಧಿತ ಅಧಿಕಾರಿಗಳು ಚುರುಕಾಗಿ ಕ್ರಮ ಕೈಗೊಂಡು ಇಂದಿರಾ ಕ್ಯಾಂಟೀನ್ ಕಾರ್ಯಾರಂಭಕ್ಕೆ ಮುಂದಾಗಬೇಕಾಗಿದೆ.





