ಹಾವೇರಿ ಜಿಲ್ಲಾದಾದ್ಯಂತ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ, ಮಟ್ಕಾ ಅಡ್ಡಾಗಳಲ್ಲಿ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರವೇ (ನಾರಾಯಣಗೌಡ್ರ ಬಣ) ಜಿಲ್ಲಾ ಘಟಕದಿಂದ ಹಾವೇರಿ ನಗರದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, “ಜಿಲ್ಲೆಯ ಎಂಟು ತಾಲೂಕಿನಲ್ಲಿ ಬರುವಂತಹ ಹಳ್ಳಿಗಳು ಮತ್ತು ಪಟ್ಟಣದಲ್ಲಿ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ. ಸೂಕ್ತಕ್ರಮ ಕೈಗೊಳ್ಳಬೇಕಿದ್ದ ಪೊಲೀಸ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಜೂಜು ದಂಧೆಕೋರರ ಬಲೆಗೆ ಬಿದ್ದು ಅಮಾಯಕರು, ರೈತರು, ಕೂಲಿ ಕಾರ್ಮಿಕರು, ಯುವಕರು ಸಂಕಷ್ಟಕ್ಕೆ ಸಿಲುಕಿ ಹಣ ಕಳೆದುಕೊಂಡು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬರುತ್ತಿವೆ. ಇಸ್ಪೀಟ್ ಗ್ಯಾಂಬ್ಲಿರ್‌ಗಳು ಜೂಜಾಟಕ್ಕೆ ಬರುವವರ ಬೈಕ್, ಚಿನ್ನದ ಸರ, ಮೊಬೈಲ್ ಇತರೆ ವಸ್ತುಗಳನ್ನು ಅಡವಿಟ್ಟುಕೊಂಡು ಸಾಲ ಕೊಡುತ್ತಾರೆ. 10 ಸಾವಿರಕ್ಕೆ ಒಂದು ಸಾವಿರ ಬಡ್ಡಿ, ಒಂದು ಲಕ್ಷಕ್ಕೆ 10 ಸಾವಿರ ಬಡ್ಡಿ, ಮೀಟರ್ ಬಡ್ಡಿ ಮಾಡಿಕೊಂಡು ಸಾಲ ಕೊಡುತ್ತಾರೆ. ಇದರಿಂದ ಸಾಕಷ್ಟು ಕುಟುಂಬಗಳು ಬೀದಿಗೆ ಬರುತ್ತಿವೆ.
“ಈ ಹಿನ್ನೆಲೆ ಜಿಲ್ಲಾ ಪೊಲೀಸ್ ಇಲಾಖೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೇ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ಹಾಲೇಶ ಹಾಲಣ್ಣನವರ, ಬಿ.ಎಚ್ ಬಣಕಾರ, ಹಸನಸಾಬ ಹತ್ತಿಮತ್ತೂರ, ಕರಿಯಪ್ಪ ಕೊರವರ, ಕೊಟ್ರೇಶ ಗುತ್ತೂರ, ಸತ್ಯವತಿ ಕಡೇರ, ಗೌಸಪಾಕ್ ಬಾಲೆಬಾಯಿ, ನಿಂಗಪ್ಪ ಅಂಗೂರ, ಬಸಣ್ಣ ಕಳಸಣ್ಣವರ, ಪರಶುರಾಮ ಕಳಸಣ್ಣವರ, ಮಂಗಳಾ ಬಾಣಾಪುರ, ಈರಮ್ಮ ಕಾಡಸಾಲಿ, ಲಕ್ಷ್ಮೀಉಪಸ್ಥಿತರಿದ್ದರು.





