“ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳು ತಮ್ಮ ಭಾಷಿಕ ಗುರುತನ್ನು ರಕ್ಷಿಸುವುದರ ಜೊತೆಗೆ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಂಡಿವೆ. ಕರ್ನಾಟಕವು ಈ ಉದಾಹರಣೆಗಳಿಂದ ಸ್ಫೂರ್ತಿಯನ್ನು ಪಡೆದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಿಗೆ ಆದ್ಯತೆ ನೀಡುವ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು” ಎಂದು ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ ಒತ್ತಾಯಿಸಿದರು.
ಹಾವೇರಿ ಪಟ್ಟಣದ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತರುವಂತೆ ಪ್ರತಿಭಟಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಕರ್ನಾಟಕ ರಾಜ್ಯದ ಪಠ್ಯಕ್ರಮದಲ್ಲಿ ಸಾಧಾರಣವಾಗಿ ಕನ್ನಡ ಪ್ರಥಮ ಭಾಷೆಯಾಗಿ, ಇಂಗ್ಲೀಷ್ ದ್ವಿತೀಯ ಭಾಷೆಯಾಗಿ, ಹಿಂದಿ ತೃತೀಯ ಭಾಷೆಯಾಗಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ರಾಜ್ಯ ಪಠ್ಯಕ್ರಮದಲ್ಲಿ ಓದುವ ಮಕ್ಕಳು ಮೂರನೇ ಭಾಷೆಯಾಗಿ ಹಿಂದಿ ಕಲಿಯುವುದು ಕಡ್ಡಾಯವಾಗಿದೆ. ಅಷ್ಟೇ ಅಲ್ಲದೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರು ಅಂಕಗಳಿಗೆ ಹಿಂದಿ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಿದೆ” ಎಂದರು.
“ತೃತೀಯ ಭಾಷೆಯಾದ ಹಿಂದಿಯು ಕರ್ನಾಟಕದ ವಿದ್ಯಾರ್ಥಿಗಳಿಗೆ ಅನಗತ್ಯವಾದ ಒತ್ತಡವನ್ನು ಒಡ್ಡುತ್ತಿದೆ. 2024ರ SSLC ಪರೀಕ್ಷೆಯಲ್ಲಿ 90,794 ವಿದ್ಯಾರ್ಥಿಗಳು ತೃತೀಯ ಭಾಷೆಯಾದ ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದಾರೆ. ಇದು ಒಟ್ಟು ವಿದ್ಯಾರ್ಥಿಗಳಲ್ಲಿ ಸುಮಾರು 21% ರಷ್ಟಿದೆ. 2025ರಲ್ಲಿ ಈ ಸಂಖ್ಯೆ 1.2 ಲಕ್ಷಕ್ಕಿಂತ ಹೆಚ್ಚಾಗಿದೆ” ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಇದು ಅತ್ಯಂತ ಆಘಾತಕಾರಿ ಬೆಳವಣಿಗೆಯಾಗಿದೆ” ಎಂದು ಹೇಳಿದರು.
“ಹಿಂದಿಯ ಕಡ್ಡಾಯ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಶೈಕ್ಷಣಿಕ ಹೊರೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಹಿಂದಿ ಹೇರಿಕೆಗೆ ಕನ್ನಡದ ಮಕ್ಕಳ ಭವಿಷ್ಯ ಬಲಿಯಾಗುತ್ತಿದೆ. ತ್ರಿಭಾಷಾ ಸೂತ್ರದ ಕುರಿತು ರಾಷ್ಟ್ರಕವಿ ಕುವೆಂಪು ಅವರು ಹಿಂದೆಯೇ ತೀಕ್ಷ್ಣವಾದ ವಿರೋಧವನ್ನು ಸಾರಿದ್ದರು” ಎಂದರು.
“ಕರ್ನಾಟಕದ ಸಾಂಸ್ಕೃತಿಕ ಮತ್ತು ಭಾಷಿಕ ಅಸ್ಮಿತೆಯಲ್ಲಿ ಈ ನೆಲದ ನುಡಿಯಾದ ಕನ್ನಡವು ಕೇಂದ್ರ ಸ್ಥಾನವನ್ನು ಹೊಂದಿದೆ. ಬದಲಾದ ಕಾಲಘಟ್ಟದಲ್ಲಿ ಇಂಗ್ಲಿಷ್ ಭಾಷೆಯು ಜಾಗತಿಕ ವ್ಯವಹಾರಗಳಿಗೆ, ಉನ್ನತ ಶಿಕ್ಷಣ ಮತ್ತು ವೃತ್ತಿ ನಿರ್ವಹಣೆಗೆ ಅಗತ್ಯವಾಗಿದ್ದು, ಇದನ್ನು ಕಲಿಯುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದೆ. ಆದರೆ, ಹಿಂದಿಯನ್ನು ಕಡ್ಡಾಯವಾಗಿ ಓದಿಸುವುದರಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಯಾವುದೇ ಗಮನಾರ್ಹ ಲಾಭವಿಲ್ಲ. ತ್ರಿಭಾಷಾ ನೀತಿಯಿಂದ ಕರ್ನಾಟಕಕ್ಕೆ ಯಾವ ಲಾಭವೂ ಇಲ್ಲ. ಇದರಿಂದ ಒಬ್ಬನೇ ಒಬ್ಬ ಕನ್ನಡಿನಿಗೂ ಉದ್ಯೋಗ ದೊರೆತಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ತಮಿಳುನಾಡು 1968ರಿಂದಲೇ ತ್ರಿಭಾಷಾ ನೀತಿಯನ್ನು ತಿರಸ್ಕರಿಸಿ, ತಮಿಳು ಮತ್ತು ಇಂಗ್ಲಿಷ್ ಭಾಷೆಗಳನ್ನು ಒಳಗೊಂಡ ದ್ವಿಭಾಷಾ ನೀತಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಇತ್ತೀಚೆಗೆ, ಮಹಾರಾಷ್ಟ್ರ ಸರ್ಕಾರವು ಸಹ ತ್ರಿಭಾಷಾ ನೀತಿಯನ್ನು ರದ್ದುಗೊಳಿಸಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ. ಅದೇ ರೀತಿ ಕರ್ನಾಟಕದಲ್ಲಿ ಕನ್ನಡ ಹಾಗೂ ಇಂಗ್ಲೀಷ್ ದ್ವಿಭಾಷಾ ಸೂತ್ರವನ್ನು ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.
“ಕರ್ನಾಟಕದ ರಾಜ್ಯ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳು ಐದು ವಿಷಯಗಳನ್ನು (ಮೂರು ವಿಷಯಗಳು ಮತ್ತು ಎರಡು ಭಾಷೆಗಳು) ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬರೆಯುತ್ತಾರೆ. ಆದರೆ, ತೃತೀಯ ಭಾಷೆಯಾದ ಹಿಂದಿಯನ್ನು ಕಡ್ಡಾಯವಾಗಿ ಓದಬೇಕಾದ ಒತ್ತಡವು ವಿದ್ಯಾರ್ಥಿಗಳಿಗೆ ಅನಗತ್ಯ ಹೊರೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕೇಂದ್ರೀಯ ಶಿಕ್ಷಣ ವ್ಯವಸ್ಥೆಯಾದ CBSE ಮತ್ತು ICSE ಶಾಲೆಗಳಲ್ಲಿ ಕೇವಲ ಎರಡು ಭಾಷೆಗಳನ್ನು ಕಡ್ಡಾಯವಾಗಿ ಓದಿಸಲಾಗುತ್ತದೆ, ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಎರಡು ಭಾಷೆಗಳಿಗೆ ಮಾತ್ರ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ತಾರತಮ್ಯವು ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಅನ್ಯಾಯವನ್ನುಂಟುಮಾಡುತ್ತಿದೆ. ಇದರಿಂದಾಗಿ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಗಣಿತ, ವಿಜ್ಞಾನ ಮುಂತಾದ ವಿಷಯಗಳಿಗೆ ಹೆಚ್ಚಿನ ಸಮಯವನ್ನು ನೀಡಲು ವಿಫಲರಾಗುತ್ತಿದ್ದಾರೆ. ಈ ಅಸಮಾನತೆಯನ್ನೂ ಸಹ ರಾಜ್ಯ ಸರ್ಕಾರ ಗಂಭೀರವಾಗಿ ಗಮನಿಸಬೇಕಿದೆ” ಎಂದರು.
ತೃತೀಯ ಭಾಷೆಯನ್ನು ತೆಗೆದುಹಾಕುವುದರಿಂದ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಜೊತೆಗೆ ಇತರ ವಿಷಯಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಬಹುದು. ಕನ್ನಡ ಭಾಷೆಗೆ ಆದ್ಯತೆ ನೀಡುವುದರಿಂದ ಕರ್ನಾಟಕದ ಭಾಷಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ನಾವು ಮುಂದಿನ ಪೀಳಿಗೆಗೆ ಉಳಿಸಿದಂತಾಗುತ್ತದೆ. ದ್ವಿಭಾಷಾ ನೀತಿಯು ಶಿಕ್ಷಣ ಸಂಪನ್ಮೂಲಗಳನ್ನು ಕನ್ನಡ ಮತ್ತು ಇಂಗ್ಲಿಷ್ ಗೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ, ಇದರಿಂದ ಶಿಕ್ಷಣದ ಗುಣಮಟ್ಟ ಸುಧಾರಿಸುತ್ತದೆ. ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳು ದ್ವಿಭಾಷಾ ನೀತಿಯನ್ನು ಅನುಸರಿಸುತ್ತವೆ. ಕರ್ನಾಟಕಕ್ಕೂ ಇದೇ ರೀತಿಯ ಸಮಾನತೆಯನ್ನು ಒದಗಿಸಬೇಕು. ಕನ್ನಡಿಗರು ನಮ್ಮದಲ್ಲದ ನುಡಿಯನ್ನು ಯಾಕೆ ಕಡ್ಡಾಯವಾಗಿ ಕಲಿಯಬೇಕು? ಯಾರದ್ದೋ ಹುನ್ನಾರಕ್ಕೆ ಕನ್ನಡಿಗರೇಕೆ ಬಲಿಯಾಗಬೇಕು” ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮತಗಟ್ಟೆ ಮಟ್ಟದ ಚುನಾವಣಾ ಭಾಗದ ಕೆಲಸ ನೀಡದಂತೆ ಅಂಗನವಾಡಿ ನೌಕರರು ಜಿಲ್ಲಾಧಿಕಾರಿಗೆ ಮನವಿ
ಹಕ್ಕೊತ್ತಾಯಗಳು: 1) ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಡ್ಡಾಯಗೊಳಿಸುವ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು. 2) ತೃತೀಯ ಭಾಷೆಯಾದ ಹಿಂದಿಯನ್ನು ಪಠ್ಯಕ್ರಮದಿಂದ ಹೊರಗಿಡಬೇಕು. 3) ರಾಜ್ಯ ಮತ್ತು ಕೇಂದ್ರೀಯ ಶಿಕ್ಷಣ ವ್ಯವಸ್ಥೆಗಳಾದ CBSE, ICSE ಶಾಲೆಗಳಿಗೆ ಏಕರೂಪದ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಬೇಕು. 4) ಸಿಬಿಎಎಸ್ ಇ, ಐಸಿಎಸ್ ಇ ಶಾಲೆಗಳಲ್ಲೂ ಪ್ರಥಮ ಭಾಷೆಯಾಗಿ ಕನ್ನಡವನ್ನೇ ಕಡ್ಡಾಯಗೊಳಿಸಬೇಕು. 5) ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಿ, ಉತ್ತಮ ಗುಣಮಟ್ಟದ ಇಂಗ್ಲಿಷ್ ಶಿಕ್ಷಣವನ್ನು ನೀಡಬೇಕು.
ಮನವಿ ಸಂದರ್ಭದಲ್ಲಿ ಕರವೇ ರಾಜ್ಯ ಕಾರ್ಯದರ್ಶಿ ಕರಬಸಯ್ಯ ಬಸರಿಹಳ್ಳಿಮಠ, ರಾಜ್ಯ ಸಂ, ಕಾರ್ಯದರ್ಶಿ ಸತೀಶ್ ಗೌಡ ಮುದಿಗೌಡ್ರ, ಹಾವೇರಿ ತಾಲೂಕ ಅಧ್ಯಕ್ಷ ಹಾಲೇಶ್ ಹಾಲಣ್ಣನವರ್, ಹೀರೆಕೆರೂರ ತಾಲೂಕು ಅಧ್ಯಕ್ಷ ಮಾರುತಿ ಪೂಜಾರ, ಹಾನಗಲ್ ತಾಲೂಕು ಅಧ್ಯಕ್ಷರು ಸಿಕಂದರ ವಾಲಿಕಾರ ಯಶವಂತ್ ಗೌಡ ದೊಡಗೌಡ್ರ, ಹಸನಸಾಬ ಹತ್ತಿಮತ್ತೂರ, ಕೊಟ್ರೇಶ್ ಗುತ್ತುರ,ಅಬ್ಬು ಕೊಡಮಗ್ಗಿ, ನಾಗರಾಜ ಪೂಜಾರ, ಚನ್ನಪ್ಪ ಹೊನ್ನಮ್ಮನವರ,ಬಸವರಾಜ ಅರಳಿ, ನಾಗರಾಜ ದೇಸಾಯಿ, ಕಾಳಪ್ಪ ಬಡಿಗೇರ್, ನಾಗಾರ್ಜುನ ಕಾಯಕದ,ದ್ಯಾಮಣ್ಣ ದಿಡಗೂರ,ಈರಮ್ಮ ಕಾಡಸಾಲಿ, ಮಂಗಳಾ ಬಾಣಾಪುರ, ಲಕ್ಷ್ಮೀ ನಾಳಕರ, ರೂಪಾ ಬ್ಯಾಡಗಿ ಜೊತೆಗೆ ಇನ್ನೂ ಅನೇಕ ಕಾರ್ಯಕರ್ತರು ಹಾಜರಿದ್ದರು.





