“ಪರಿಸರ ಮನುಷ್ಯನ ಉತ್ತಮ ಬದುಕಿಗಾಗಿ ಸಕಲವನ್ನೂ ಕೊಡುತ್ತದೆ. ಆದರೆ ಅವನ ಸ್ವಾರ್ಥ ಮತ್ತು ದುರಾಸೆಯಿಂದಾಗಿ ಪ್ರಕೃತಿ ಮೇಲಿನ ಅಮಾನುಷ ದಾಳಿಯಿಂದಾಗಿ ಎಲ್ಲವೂ ಮಲೀನಗೊಂಡು ಪರಿಸರ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿದೆ. ಪರಿಸರ ನಾಶಕ್ಕೆ ಮನುಷ್ಯ ಸೃಷ್ಟಿಸುವ ವಸ್ತುಗಳೇ ಕಾರಣವಾಗುತ್ತಿರುವುದು ದುರಂತವೇ ಸರಿ. ತುರ್ತಾಗಿ ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು ಪರಿಸರವನ್ನ ರಕ್ಷಿಸಿ ಬೆಳೆಸದಿದ್ದರೆ ಜೀವಸಂಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ” ಎಂದು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ಉಪನಿರ್ದೇಶಕ ಅಶೋಕ ಶಾಸ್ತ್ರಿ ಆತಂಕ ವ್ಯಕ್ತಪಡಿಸಿದರು.
ಹಾವೇರಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ಇಕೋ ಕ್ಲಬ್’ ವತಿಯಿಂದ ನಡೆದ ಪರಿಸರ ಸಂರಕ್ಷಣೆ ವಿಶೇಷ ಉಪನ್ಯಾಸ ಮತ್ತು ಪರಿಸರ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
“ಇಂದು ಕುಡಿಯುವ ನೀರು, ಶುದ್ಧ ಗಾಳಿಯನ್ನು ಹಣ ಕೊಟ್ಟು ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ತಿನ್ನುವ ಆಹಾರದಲ್ಲಿ ರಾಸಾಯನಿಕ ವಿಷ ಬೆರೆತಿದೆ. ಕಾಡುಗಳ ನಾಶ, ವಿಪರೀತ ನಗರೀಕರಣ, ಮಿತಿಮೀರಿದ ಕೈಗಾರಿಕೀಕರಣ, ಪ್ಲಾಸ್ಟಿಕ್ ವಸ್ತುಗಳ ಸೃಷ್ಟಿ, ಮನುಷ್ಯ ಜನ್ಯ ತ್ಯಾಜ್ಯಗಳು ಮತ್ತು ಇ- ತ್ಯಾಜ್ಯ ಅಸಮರ್ಪಕ ನಿರ್ವಹಣೆಯಿಂದ ಪರಿಸರದ ಆರೋಗ್ಯ ಹದಗೆಡುತ್ತಿದೆ. ಕೂಡಲೇ ಎಚ್ಚೆತ್ತು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸುವ ಹೊಣೆ ಎಲ್ಲರ ಮೇಲಿದೆ. ವಿದ್ಯಾರ್ಥಿಗಳು ಕನಿಷ್ಠ ಮನೆಗೊಂದು ಮರವನ್ನ ನೆಟ್ಟು ಬೆಳೆಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು” ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ‘ಇಕೋ ಕ್ಲಬ್’ ನ ಸಂಚಾಲಕ ಶೇಖರ ಭಜಂತ್ರಿ ಮಾತನಾಡಿ, ಪಂಚಭೂತಗಳಿಂದ ಸೃಷ್ಟಿಯಾದ ನಾವು ನಮ್ಮ ಸ್ವಾರ್ಥಕ್ಕಾಗಿ ಈ ಸೃಷ್ಟಿಯ ಪಂಚಭೂತಗಳನ್ನೇ ಮಲೀನಗೊಳಿಸಿದ್ದೇವೆ. ಭೂಮಿ ತಾಯಿ ಎಂದು ಪೂಜಿಸಿ, ಅವಳ ಒಡಲನ್ನೇ ಬಗೆಯುತ್ತೇವೆ. ನೆಲ, ಜಲ ಗಾಳಿಗೂ ವಿಷ ತುಂಬಿದ್ದೇವೆ. ಕಾರ್ಖಾನೆ, ವಾಹನಗಳ ಹೊಗೆಯಿಂದ ದೆಹಲಿ, ಮುಂಬೈ ಕೊಲ್ಕತ್ತಾದಂತಹ ದೊಡ್ಡ ನಗರಗಳು ವಿಷಯುಕ್ತ ಹೊಗೆಯಿಂದ ಮುಚ್ಚಿಕೊಳ್ಳುತ್ತವೆ. ಇದರಿಂದ ಜೀವಿಗಳ ಉಸಿರಾಟಕ್ಕೆ ಮತ್ತು ಸಸ್ಯಗಳ ಬೆಳವಣಿಗೆಗೆ ತೊಂದರೆಯಾಗುತ್ತಿದೆ. ಅಭಿವೃದ್ಧಿ ಎಂಬ ಕಲ್ಪನೆಯಿಂದ ಪರಿಸರದ ಮೇಲೆ ನೇರ ಪರಿಣಾಮ ಉಂಟಾಗುತ್ತಿದೆ. ಭೀಕರವಾಗಿ ನಡೆಯುವ ಯುದ್ಧಗಳೂ ಪರಿಸರದ ಮೇಲಿನ ಯುದ್ಧಗಳಾಗಿವೆ. ಅರಣ್ಯ, ಜಲ ಮೂಲಗಳ ನಾಶದಿಂದ ಜೀವ ವೈವಿಧ್ಯತೆ ಅಪಾಯದಲ್ಲಿದೆ” ಎಂದರು.
“ನಿಸರ್ಗಕ್ಕೆ ನಾವು ಅನಿವಾರ್ಯವಲ್ಲ ಎಂಬ ಸತ್ಯವನ್ನ ಅರಿತು ನಾವು ಪರಿಸರವನ್ನು ಸಂರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರರು. ಆದ್ದರಿಂದ ಪರಿಸರದ ಕುರಿತ ಜಾಗೃತಿಯನ್ನು ಮೂಡಿಸಲು ಇಕೋ ಕ್ಲಬ್ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳ ಮೂಲಕ ಪರಿಸರ, ಜೀವಿಗಳ ಸಂರಕ್ಷಣೆ ಮತ್ತು ಅದರ ಮಹತ್ವದ ಕುರಿತು ತಿಳಿಸಲಾಗುತ್ತದೆ” ಎಂದರು.
ನಂತರ ಕವಿಗೋಷ್ಠಿಯಲ್ಲಿ ಉಪನ್ಯಾಸಕಿ ನಿರ್ಮಲ ಎಸ್., ವಿದ್ಯಾರ್ಥಿನಿಯರಾದ ಗಿರಿಜಾ ಕಡೆಕೊಪ್ಪ, ಅನಿತಾ ಕೋಣಿಯವರ, ಸಾನಿಯಾ ಗುಳೇದ, ಮೇಘ, ಐಶ್ವರ್ಯ, ಇತರರು ಪರಿಸರದ ಕುರಿತು ಸ್ವರಚಿತ ಕವಿತೆಗಳನ್ನ ವಾಚಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಪ್ರಾಮಾಣಿಕ ಮೆರೆದ ರಿತ್ತಿ ಕುಟುಂಬಕ್ಕೆ 30×40 ನಿವೇಶನ; ಲಕ್ಕುಂಡಿ ಗ್ರಾಪಂ ನಿರ್ಧಾರ
ತದನಂತರ ಉಪನ್ಯಾಸಕ ಎಸ್.ಎಸ್.ನಿಸ್ಸಿಮಗೌಡ್ರು ‘ಮನುಷ್ಯನ ಅಸ್ತಿತ್ವಕ್ಕೆ ಪರಿಸರ ಮತ್ತು ಜೀವ ವೈವಿಧ್ಯತೆಯ ಮಹತ್ವ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರಾಚಾರ್ಯರು ಬಸವರಾಜ ಇಟ್ಟಿಗುಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ರಮೇಶ ಲಮಾಣಿ, ಮಂಜುನಾಥ ಹತ್ತಿಯವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಭೂಮಿಕಾ ಬಸಾಪುರ ಪ್ರಾರ್ಥಿಸಿದರೆ, ಸುಚಿತ ನೂಕಾಪುರ ಸ್ವಾಗತಿಸಿದಳು. ತನುಷ ಪೂಜಾರ ನಿರೂಪಿಸಿ, ಅನಿತಾ ವಂದಿಸಿದರು.





