ಸರ್ಕಾರಿ ಕನ್ನಡ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುವ ರಾಜ್ಯ ಸರ್ಕಾರದ ಹುನ್ನಾರ ಖಂಡಿಸಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಭಾರತ ವಿದ್ಯಾರ್ಥಿ ಫೆಡರೇಶನ್ ವತಿಯಿಂದ ಹಾವೇರಿ ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ದುಂಡು ಮೇಜಿನ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಭೆಯ ಅಧ್ಯಕ್ಷತೆ ವಹಿಸಿದ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥರು, ರಾಜ್ಯ ಅಲ್ಪಾ ಸಂಖ್ಯಾತರ ಆಯೋಗದ ಸದಸ್ಯೆ ಪರಿಮಳ ಜೈನ್ ಮಾತನಾಡಿ, “ನಾವು ನಮ್ಮ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಪಡೆದ ಶಿಕ್ಷಣದಿಂದ ಇವತ್ತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿವೆ. ಖಾಸಗಿ ಶಾಲೆಗಳ ಆಕರ್ಷಣೆಗೆ ಪೋಷಕರು ಮಾರುಹೋಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಗಟ್ಟಿತನದ ಶಿಕ್ಷಣ ಸಿಗುವುದು ಸರ್ಕಾರಿ ಶಾಲೆಗಳಲ್ಲಿ. ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಸರ್ಕಾರ ಮುಚ್ಚುವ ನಿರ್ಧಾರ ಕೈಬಿಟ್ಟು ಖಾಸಗಿ ಶಾಲೆಗಳನ್ನು ನಿಯಂತ್ರಣ ಮಾಡಬೇಕು” ಎಂದರು.
ಸಭೆಯಲ್ಲಿ ಭಾಗವಹಿಸಿದ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಮಾತನಾಡಿ, “ಕರ್ನಾಟಕ ಪಬ್ಲಿಕ್ ಶಾಲೆಗಳ ಮಂಜೂರು ಸ್ವಾಗತ, ಅದೇ ರೀತಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಮೇಲ್ದರ್ಜೆಗೆ ಏರಿಸಲಿ, ಆದರೆ ಕೆಪಿಎಸ್ ವಿಲೀನದ ಹೆಸರಿನಲ್ಲಿ ಯಾವುದೇ ಒಂದು ಸರ್ಕಾರಿ ಶಾಲೆಗಳು ಮುಚ್ಚಬಾರದು. ಖಾಸಗಿ ಶಾಲೆಗಳು ಹೆಚ್ಚಾಗಿವೆ. ಇವುಗಳಿಗೆ ಸರ್ಕಾರ ನಿಯಂತ್ರಣ ಮಾಡುವ ಬದಲಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ಬೇಸರದ ಸಂಗತಿ” ಎಂದು ವಿಷಾದ ವ್ಯಕ್ತಪಡಿಸಿದರು.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ದೇಶದಲ್ಲಿ ಸಮಾನ ಶಿಕ್ಷಣ ಜಾರಿಗೆ ತರಬೇಕು ಅದನ್ನು ಬಿಟ್ಟು ಸರ್ಕಾರ ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಖಂಡನೀಯ ಕೂಡಲೇ ರಾಜ್ಯ ಸರ್ಕಾರ ಶಾಲೆಗಳನ್ನು ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಬೇಕು ಇಲ್ಲದಿದ್ದರೆ ಹೋರಾಟದ ಮೂಲಕ ತಕ್ಕ ಪಾಠ ಕಲಿಸಬೇಕಾಗುತ್ತದೆ” ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷರು ಬಸವರಾಜ ಎಸ್ ಪ್ರಾಸ್ತಾವಿಕ ಮಾತನಾಡಿ, “ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗ್ರಾಮ ಪಂಚಾಯತಿಗೊಂದು ಕರ್ನಾಟಕ ಪಬ್ಲಿಕ್ ಶಾಲೆಗಳು ಅಂದರೆ 700 ಶಾಲೆಗಳನ್ನು ತೆರೆಯಲು ಮುಂದಾಗಿದೆ ಆದರೆ ದೊಡ್ಡ ದುರಂತ ಏನೆಂದರೆ ಈ ಹೊಸ ಶಾಲೆಗಳ ಸುತ್ತಮುತ್ತಲಿನ ಸರ್ಕಾರಿ ಕನ್ನಡ ಶಾಲೆಗಳನ್ನು ಕೆಪಿಎಸ್ ಶಾಲೆಗಳಿಗೆ ವಿಲೀನ ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಡೆಸಿದೆ ಈ ವಿದ್ಯಾರ್ಥಿ ವಿರೋಧಿ ನೀತಿಯನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಖಂಡಿಸುತ್ತಿದೆ” ಎಂದರು.
ದುಂಡು ಮೇಜಿನ ಸಭೆಯಲ್ಲಿ ತೆಗೆದುಕೊಂಡು ನಿರ್ಣಯಗಳು: 1) ಸರ್ಕಾರಿ ಶಾಲೆಗಳ ಉಳಿವಿಗಾಗಿ ನಾಟಕ ಪ್ರದರ್ಶನ ಮಾಡುವ ಮೂಲಕ ಜಾಗೃತಿ ಮೂಡಿಸುವುದು. 2) 28 ಡಿಸೆಂಬರ್ 2025 ಶುಕ್ರವಾರ ಸಂಜೆ ಗಾಂಧಿ ವೃತ್ತದಲ್ಲಿ ಸರ್ಕಾರಿ ಶಾಲೆಗಳ ಉಳಿವಿಗಾಗಿ ನಾಟಕ ಪ್ರದರ್ಶನ ಮಾಡುವುದು. 3) 29 ಡಿಸೆಂಬರ್ 2025 ಶನಿವಾರ ರಂದು ಬೃಹತ್ ಹೋರಾಟ ರೂಪಿಸುವುದು. 4) ಸರ್ಕಾರಿ ಶಾಲೆಗಳ ಉಳಿವಿಗಾಗಿ ಸಮಾವೇಶ ಏರ್ಪಡಿಸುವುದು.
ಈ ಸಂದರ್ಭದಲ್ಲಿ ಬಿಜಿವಿಎಸ್ ಸಂಘಟನೆಯ ರೇಣುಕಾ ಗುಡಿಮನಿ, ಶ್ರೇಯಸ ಶಿಕ್ಷಣ ಸಂಸ್ಥೆ ಡಾ.ತಿಪ್ಪೇಸ್ವಾಮಿ ಹೊಸಮನಿ, ಬಹುಜನ ಚಳುವಳಿ ಮುಖಂಡ ಎಮ್.ಕೆ.ಮಖಬುಲ್, ಹಿರಿಯ ರೈತ, ಕಾರ್ಮಿಕ ಮುಖಂಡರಾದ ರುದ್ರಪ್ಪ ಜಾಬೀನ್, ಎಸ್ಎಫ್ಐ ಮಾಜಿ ಜಿಲ್ಲಾಧ್ಯಕ್ಷೆ ರೇಣುಕಾ ಕಹಾರ, ವಕೀಲರಾದ ನಾರಾಯಣ ಕಾಳೆ, ಸಾಹಿತಿ ಜುಬೇದ ನಾಯ್ಕ, ಯೋಗ ಶಿಕ್ಷಕರು, ಬಿಜಿವಿಎಸ್ ಮುಖಂಡ ನಾಗರಾಜ ದಶಮನಿ ಮಾತನಾಡಿದರು. ಕಾಲೇಜ್ ಘಟಕ ಅಧ್ಯಕ್ಷೆ ಚೈತ್ರಾ ಕೊರವರ ನಿರೂಪಿಸಿದರು. ಜಿಲ್ಲಾ ಮುಖಂಡ ಅರುಣ್ ನಾಗವತ್ ವಂದಿಸಿದರು. ಧನುಷ್ ದೊಡ್ಡಮನಿ, ವಿಶಾಲ ಜೈನ್, ಮೈನುದ್ದೀನ್ ಇಲಿಬುಡ್ಡಿ, ತೇಜಸ್ ದೊಡ್ಡಮನಿ, ಹರೀಶ್ ಸೇರಿದಂತೆ ಇತರರು ಹಾಜರಿದ್ದರು.





