“ಹಾಸ್ಟೆಲ್ ಹಾಗೂ ವಸತಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಆಹಾರ ಭತ್ಯೆ ಹೆಚ್ಚಳಕ್ಕಾಗಿ, ಖಾಲಿ ಇರುವ ವಾರ್ಡನ್, ಪ್ರಾಂಶುಪಾಲರು, ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ, ವಸತಿ ನಿಲಯಗಳಿಗೆ ಸ್ವಂತ ಕಟ್ಟಡ, ಕನಿಷ್ಠ ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ಹಾವೇರಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ” ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಶಿವಪ್ಪ ಅಂಬ್ಲಿಕಲ್ ಹೇಳಿದರು.
ಎಸ್ಎಫ್ಐ ರಾಜ್ಯ ಮಟ್ಟದ ಹಾಸ್ಟೆಲ್ ವಿದ್ಯಾರ್ಥಿಗಳ ಸಮಾವೇಶದ ಲೋಗೋವನ್ನು ಮಂಗಳವಾರ ಹಾವೇರಿಯ ಪತ್ರಿಕಾ ಭವನದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
“ಅಕ್ಟೋಬರ್ 4/5 ಎರಡು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ರಾಜ್ಯದಲ್ಲಿರುವ ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆಗಳನ್ನು, ಮೂಲಸೌಕರ್ಯಗಳ ಕುರಿತು ಚರ್ಚಿಸಲಾಗುವುದು. ಈಗಾಗಲೇ ರಾಜ್ಯದಲ್ಲಿರುವ ಎಸ್ಸಿ 3.5ಲಕ್ಷ ವಿದ್ಯಾರ್ಥಿಗಳು ಪೈಕಿ 2400 ವಸತಿ ನಿಲಯಗಳು, ಎಸ್.ಟಿ 1.5ಲಕ್ಷ ವಿದ್ಯಾರ್ಥಿಗಳು ಪೈಕಿ 1200 ವಸತಿ ನಿಲಯಗಳು, ಒಬಿಸಿ 2.5 ವಿದ್ಯಾರ್ಥಿಗಳು ಪೈಕಿ 2500 ನಿಲಯಗಳು ಒಟ್ಟು 7.5 ವಿದ್ಯಾರ್ಥಿಗಳು ಮತ್ತು 6000ಕ್ಕೂ ಅಧಿಕ ನಿಲಯಗಳಿವೆ” ಎಂದರು.
“ನಿಲಯಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ನೇಮಕಾತಿಗಳು ವಿಳಂಬದ ಕಾರಣದಿಂದಾಗಿ ನಿಲಯ ಪಾಲಕರ, ಸ್ವಚ್ಚತಾ ಸಿಬ್ಬಂದಿ ಕೊರತೆ ಹೆಚ್ಚಿದೆ. ಟೆಂಡರ್ ಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಜೈಲಿನಲ್ಲಿರುವ ಕೈದಿಗಳಿಗಿಂತ ಕಡೆಯಾಗಿ ಕಾಣಲಾಗುತ್ತದೆ. ರಾಜ್ಯ ಸರ್ಕಾರಕ್ಕೆ ಸಮಾಜ ಕಲ್ಯಾಣ ಇಲಾಖೆ 14 ಕೋಟಿ ಹಣ ಕೇಳಿದೆ ಆದರೆ ಸರ್ಕಾರ ನೀಡುತ್ತಿಲ್ಲ. ಅದಕ್ಕಾಗಿ ಎಸ್ಎಫ್ಐ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ. ಮೆಟ್ರಿಕ್ ವಿದ್ಯಾರ್ಥಿಗಳಿಗೆ 1750 ರೂ ಮತ್ತು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗೆ 1850 ರೂ ಆಹಾರ ಭತ್ಯೆಯನ್ನು ನೀಡಲಾಗುತ್ತಿದೆ. ಇದರಿಂದ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಕೊಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರ ಪ್ರತಿ ವಿದ್ಯಾರ್ಥಿಗೆ 3500ರೂ ಆಹಾರ ಭತ್ಯಯನ್ನು ಹೆಚ್ಚಿಸಬೇಕು” ಎಂದು ಒತ್ತಾಯಿಸಿದರು.
“ವಿದ್ಯಾರ್ಥಿಗಳಿಗೆ ಸರಿಯಾದ ಭದ್ರತೆ ಇಲ್ಲ, ಆರೋಗ್ಯ ಪರೀಕ್ಷೆ ನಡೆಯುತ್ತಿಲ್ಲ, ಅಷ್ಟಲ್ಲದೆ ವಿದ್ಯಾರ್ಥಿಗಳ ಮೇಲೆ ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ. ಸಮಸ್ಯೆಗಳನ್ನು ಪ್ರಶ್ನಿಸಿದರೆ ಟಾರ್ಗೆಟ್ ಮಾಡುತ್ತಿದ್ದಾರೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ವಸತಿ ನಿಲಯವನ್ನು ಬಿಡುವಂತಾಗಿದೆ. ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ನಿಲಯವನ್ನು ಕಲ್ಪಿಸಬೇಕು, ಆದರೆ ಹಾವೇರಿ, ಧಾರವಾಡ ಹುಬ್ಬಳ್ಳಿ, ಬೆಂಗಳೂರಿನಂತಹ ನಗರಗಳಲ್ಲಿ ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನೀಡಲಾಗುತ್ತದೆ. ಇದನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಪ್ರಾರಂಭದ ಹಂತದಲ್ಲಿರುವ 120 ಹಾಸ್ಟೆಲ್ ಗಳನ್ನು ಕೂಡಲೇ ತೆರೆಯಬೇಕು. ಈ ಶೈಕ್ಷಣಿಕ ಸಾಲಿನಲ್ಲಿ 10 ಹಾಸ್ಟೆಲ್ ಗಳನ್ನು ಕೂಡಲೆ ತೆರೆದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು” ಎಂದು ಎಸ್ಎಫ್ಐ ಒತ್ತಾಯಿಸುತ್ತದೆ.
“ಇದರ ಭಾಗವಾಗಿ ಹಾವೇರಿಯಲ್ಲಿ ಎರಡು ದಿನಗಳ ಕಾಲ ರಾಜ್ಯಮಟ್ಟದ ಸಮಾವೇಶವನ್ನು ಮಾಡಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗಿದೆ” ಎಂದು ಶಿವಪ್ಪ ಹೇಳಿದರು.
ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾದ ವಿಜಯಕುಮಾರ್ ಮುದಕಣ್ಣನವರ ಮಾತನಾಡಿ, “ವಿದ್ಯಾರ್ಥಿಗಳು ಹಾಸ್ಟೆಲ್ ಗಳಲ್ಲಿ ಅನುಭವಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಹಾವೇರಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಸಮಾವೇಶ ಹಮ್ಮಿಕೊಂಡಿದ್ದು ಸಂತೋಷಕರ ಸ್ವಾಗತ ಸಮಿತಿ ಪರವಾಗಿ ಸಮಾವೇಶವನ್ನು ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ನೀಡುತ್ತೇವೆ” ಎಂದರು.
ಸ್ವಾಗತ ಸಮಿತಿ ಅಧ್ಯಕ್ಷೆ ಪರಿಮಳ ಜೈನ್ ಮಾತನಾಡಿ, “ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಭವಿಷ್ಯದ ಕನಸು ಹೊತ್ತು ನಗರಕ್ಕೆ ಬರುತ್ತಾರೆ, ಆದರೆ ಹಾಸ್ಟೆಲ್ ಗಳ ಅವ್ಯವಸ್ಥೆಯಿಂದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹಾಸ್ಟೆಲ್ ವ್ಯವಸ್ಥೆ ಸುಧಾರಣೆ ಆಗದೆ ಹೊರತು ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗದು. ಆದರಿಂದ ಎಸ್ಎಫ್ಐ ರಾಜ್ಯ ಮಟ್ಟದ ಸಮಾವೇಶದ ಯಶಸ್ವಿಗೆ ಜಿಲ್ಲೆಯ ಎಲ್ಲಾ ಜನಪರ ಸಂಘಟನೆಗಳು ಜೊತೆಯಾಗಿ ಇದ್ದು ಯಶಸ್ವಿಗೊಳಿಸುತ್ತೇವೆ” ಎಂದರು.
ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, “ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಭವಿಷ್ಯಕ್ಕಾಗಿ ಹಾಸ್ಟೆಲ್ ಗಳ ಸುಧಾರಣೆ ತುಂಬಾ ಅವಶ್ಯಕವಾಗಿವೆ ಎಸ್ಎಫ್ಐ ನಡೆಸುವ ರಾಜ್ಯ ಮಟ್ಟದ ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಹಾವೇರಿಯಲ್ಲಿ ನಡೆಯುವ ಸಮಾವೇಶ ಸ್ಪೂರ್ತಿದಾಯಕವಾಗಲಿ ಆ ನಿಟ್ಟಿನಲ್ಲಿ ವಿದ್ಯಾರ್ಥಿ ಚಳುವಳಿಗೆ ಸಂಪೂರ್ಣ ಸಹಕಾರ ನೀಡಿ ಸಿದ್ಧತೆ ಮಾಡುತ್ತಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಮೂವರು ಶಿಕ್ಷಕರಿಗೆ ಕಲಾಶಿಸಂ ಪ್ರತಿಷ್ಠಾನದ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಸವರಾಜ ಪೂಜಾರ ಮಾತನಾಡಿ, “ಉತ್ತಮ ಶಿಕ್ಷಣಕ್ಕಾಗಿ ಹಾಸ್ಟೆಲ್ ಪ್ರಮುಖ ಪತ್ರವನ್ನು ವಹಿಸಿವೆ ಆದರಿಂದ ಎಸ್ಎಫ್ಐ ರಾಜ್ಯ ಮಟ್ಟದ ಹಾಸ್ಟೆಲ್ ವಿದ್ಯಾರ್ಥಿಗಳ ಸಮಾವೇಶದಲ್ಲಿ ಇಡೀ ರಾಜ್ಯದ 200 ಕ್ಕೂ ಅಧಿಕ ವಿದ್ಯಾರ್ಥಿ ಪ್ರತಿನಿಧಿಗಳು ಪಾಲ್ಗೊಂಡು ಹಾಸ್ಟೆಲ್ ವ್ಯವಸ್ಥೆಯ ಕುರಿತು ಸಮಗ್ರ ಚರ್ಚೆಗಳು, ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಸರ್ಕಾರದ ಸಚಿವರು, ನಾಲ್ಕು ಇಲಾಖೆಯ ಮುಖ್ಯ ಕಾರ್ಯದರ್ಶಿಗಳು, ಸಂಪನ್ಮೂಲ ವ್ಯಕ್ತಿಗಳು, ಉಪನ್ಯಾಸಕರು, ತಜ್ಞರು, ಅಖಿಲ ಭಾರತ ಅಧ್ಯಕ್ಷರು ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಾಸ್ಟೆಲ್ ಗಳ ಮಧ್ಯೆ ವಿದ್ಯಾರ್ಥಿ ಚಳುವಳಿ ದೊಡ್ಡ ಆಂದೋಲನ ಪ್ರಾರಂಭಿಸುತ್ತಿದೆ” ಎಂದರು.
ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಸತೀಶ್ ಕುಲಕರ್ಣಿ, ಉಪಾಧ್ಯಕ್ಷ ನಾರಾಯಣ ಕಾಳೆ, ಸತೀಶ್ ಬಾಗಣ್ಣನವರ, ನಂದಿನಿ ಅಂಗಡಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಎಸ್, ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ದೊಡ್ಡ ಬಸವರಾಜ ಗುಳೇದಾಳ, ಮುಖಂಡರಾದ ಅರುಣ್ ನಾಗವತ್, ಸುನೀಲ್ ಕುಮಾರ್ ಎಲ್, ಚೈತ್ರ ಕೊರವರ್, ಗಂಗಾ ಯಲ್ಲಾಪುರ, ಶಿವಯೋಗಿ ಹೊಸಗೌಡ್ರ, ಪ್ರಿಯಾಂಕಾ ದೊಡ್ಡಗೌಡ್ರ, ಉಮ್ಮಿ ಹಬೀಬಾ ಮಕಂದರ, ಸಲ್ಮಾ ನಯಕಲ್, ಆಸ್ಮಾ ಕುಡಪಲಿ, ಮಾಲತಿ ಮಠದ ಉಪಸ್ಥಿತರಿದ್ದರು.





