ಹಾವೇರಿ | ʼವಿದ್ಯಾರ್ಥಿಗಳ ನಡೆ ಹಳ್ಳಿ ಕಡೆʼ; ಗ್ರಾಮೀಣ ಬದುಕಿನ ಕಲಿಕೆಗೆ ಹೊಸ ಪ್ರಯೋಗ!

Date:

‘ದೇಶದ ಆತ್ಮ ಇರುವುದು ಹಳ್ಳಿಗಳಲ್ಲಿ’ ಎಂಬುದು ಮಹಾತ್ಮ ಗಾಂಧೀಜಿಯವರ ದೃಢ ನಂಬಿಕೆ ಆಗಿತ್ತು. ಆ ನಂಬಿಕೆಯಂತೆ ವಿದ್ಯಾರ್ಥಿ ಹಂತದಲ್ಲಿ ಗ್ರಾಮೀಣ ಜನರ ಜೀವನ ಶೈಲಿ, ಪರಿಸರ, ಕೃಷಿ, ಅಡುಗೆ, ಕಾಯಕ.. ಇವುಗಳ ಪರಿಚಯ ಮಾಡಿಸುವ ಉದ್ದೇಶದಿಂದ ನಗರದ ವಿದ್ಯಾರ್ಥಿಗಳಿಗೆ ಹತ್ತು ದಿನಗಳ ಹಳ್ಳಿ ಪ್ರವಾಸದಂತ ಹೊಸ ಪ್ರಯೋಗಕ್ಕೆ ಕೈ ಹಾಕಲಾಗಿದೆ.

ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಲೊಯೊಲಾ ವಿಕಾಸ ಕೇಂದ್ರದ ಸಹಯೋಗದಲ್ಲಿ ಬೆಂಗಳೂರಿನ ಸಂತ ಜೋಜರ್ ಮ್ಯಾನೇಜ್‌ಮೆಂಟ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮಂಗಳೂರಿನ ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಸುಮಾರು 70 ಸ್ನಾತಕೋತ್ತರ ವಿದ್ಯಾರ್ಥಿಗಳ ತಂಡ ಹಾನಗಲ್ ತಾಲೂಕಿನ ಸಮ್ಮಸಗಿ, ಇನಾಂ ನೀರಲಗಿ, ಕೊಪ್ಪರೆಸಿಕೊಪ್ಪ, ಹುಲ್ಲತ್ತಿ, ಕತ್ರಿಕೊಪ್ಪ, ಶೃಂಗೇರಿ, ನಾಗರವಳ್ಳಿ, ಗೆಜ್ಜಿಹಳ್ಳಿ ಗ್ರಾಮಗಳಿಗೆ ಹತ್ತು ದಿನಗಳ ಶೈಕ್ಷಣಿಕ ಪ್ರವಾಸ ಕೈಗೊಂಡಿದೆ. ವಿದ್ಯಾರ್ಥಿಗಳು ಸದ್ಯ ಹಳ್ಳಿಗಳಲ್ಲಿ ವಾಸ್ತವ್ಯ ಹೂಡಿ ಗ್ರಾಮೀಣ ಸೊಗಡಿನ ಸವಿ ಸವಿಯುತ್ತಿದ್ದಾರೆ.

ಒಂದು ಹಳ್ಳಿಯಲ್ಲಿ 20 ವಿದ್ಯಾರ್ಥಿಗಳಂತೆ ತಂಡ ಮಾಡಿಕೊಳ್ಳಲಾಗಿದೆ. ಗ್ರಾಮದ ಪ್ರತಿ ಮನೆಯಲ್ಲಿ ಇಬ್ಬರು ಅಥವಾ ಮೂವರು ವಾಸ್ತವ್ಯ ಮಾಡುತ್ತಾರೆ. ನಗರ ಜೀವನಶೈಲಿಗೆ ಒಗ್ಗಿಕೊಂಡ ವಿದ್ಯಾರ್ಥಿಗಳು ಕೇಳಿದ್ದನ್ನೆಲ್ಲ ಕೊಡುವ ತಂದೆ ತಾಯಿ, ಆರಾಮದಾಯಕ  ಜೀವನ ಬಿಟ್ಟು ಒಂದಷ್ಟು ದಿನಗಳ ಕಾಲ ಹಳ್ಳಿ ಜೀವನ ಅನುಭವಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಹಳ್ಳಿಯ ಕುಟುಂಬಗಳಲ್ಲಿ ತಾವೂ ಒಬ್ಬರಾಗಿ, ಅವರೊಂದಿಗೆ ಬೆರೆತು, ಅಡುಗೆ ಕಲಿಯುತ್ತಾ, ಊಟ ಸವಿಯುತ್ತಾ, ಕೆಲಸ ಮಾಡುತ್ತಾ ಹಳ್ಳಿಗರ ಕಷ್ಟ, ನೋವು-ನಲಿವುಗಳ ಭಾಗವಾಗಿದ್ದಾರೆ. ಅಲ್ಲದೆ ಅಲ್ಲಿಯ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ, ಮುಂದಿನ ಕಾರ್ಯಕ್ರಮಗಳು, ಗ್ರಾಮೀಣ ಭಾಗದ ಅನುಕೂಲ, ಅನನುಕೂಲಗಳ ಕುರಿತು ಅವಲೋಕಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 12 09 at 1.30.58 PM

ವಿದ್ಯಾರ್ಥಿಗಳು ಗ್ರಾಮದ ರೈತರೊಂದಿಗೆ ಹೊಲಗಳಿಗೆ ಹೋಗಿ ಕೃಷಿ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಗ್ರಾಮದ ಸರಕಾರಿ ಆಸ್ಪತ್ರೆಗಳು, ಕನ್ನಡ ಶಾಲೆಗಳು, ಅಂಗನವಾಡಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಮಾಡುತ್ತಿದ್ದಾರೆ. ಈ ಮೂಲಕ ಜನರಲ್ಲೂ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಜನರೊಂದಿಗೆ ಮುಖಾಮುಖಿ ಸಮೀಕ್ಷೆ: ಗ್ರಾಮದ ಜನರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಯಾವ ಮಟ್ಟದಲ್ಲಿ ಇದ್ದಾರೆ ಎಂಬದನ್ನು ತಿಳಿಯಲು ಸಮೀಕ್ಷೆ ಮಾಡಲಾಗುತ್ತದೆ. ಈ ಸಮೀಕ್ಷೆಯಿಂದಲೇ ಆ ಗ್ರಾಮಗಳಲ್ಲಿ ಎಷ್ಟು ಮಂದಿ ನಿಗದಿತ ಸಮಯಕ್ಕೆ ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ? ಗ್ರಾಮದ ಎಲ್ಲಾ ಮಕ್ಕಳು ಶಾಲೆಗೆ ಹಾಜರಾಗುತ್ತಿವೆಯೇ? ಮನೆಗಳಿಗೆ ವಿದ್ಯುತ್ ವ್ಯವಸ್ಥೆ‌ ಹೇಗಿದೆ? ಶೌಚಾಲಯ ವ್ಯವಸ್ಥೆ ಹೇಗಿದೆ? ಸರಕಾರಿ ಯೋಜನೆಗಳು ಅರ್ಹರನ್ನು ತಲುಪುತ್ತಿವೆಯೇ? ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಾಗುತ್ತದೆ. ಯಾವುದೇ ನಗರವಾಗಲೀ, ಗ್ರಾಮೀಣವಾಗಲಿ ಸಮಸ್ಯೆಗಳ ಬೇರು ಕುಟುಂಬದಲ್ಲಿರುತ್ತದೆ. ಅದನ್ನು ಕಂಡುಕೊಂಡಾಗ ಮಾತ್ರ ಪರಿಹಾರದತ್ತ ಗಮನಹರಿಸಬಹುದು. ಪ್ರತಿ ಕುಟುಂಬದ ಅಭಿವೃದ್ದಿಯೇ ಒಂದು ಗ್ರಾಮದ ಅಭಿವೃದ್ಧಿ, ಒಂದು ಗ್ರಾಮದ ಅಭಿವೃದ್ಧಿ ಮುಂದೆ ದೇಶದ ಅಭಿವೃದ್ಧಿಗೆ ಮುಖ್ಯ ಕಾರಣವಾಗುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಈ ಶೈಕ್ಷಣಿಕ ಪ್ರವಾಸ ತುಂಬಾ ಉಪಕಾರಿಯಾಗಿದೆ. ಎನ್ನುತ್ತಾರೆ ವಿದ್ಯಾರ್ಥಿಗಳು.

ಕನ್ನಡ ಶಾಲೆಗಳಿಗೆ ಬಣ್ಣ: ಪ್ರವಾಸದ ಭಾಗವಾಗಿ, ಸ್ಥಳೀಯರ ಸಹಕಾರದೊಂದಿಗೆ ಸರ್ಕಾರಿ ಕನ್ನಡ ಶಾಲೆಗಳ ಆವರಣಗಳನ್ನು ಸ್ವಚ್ಛಗೊಳಿಸಿ, ಕೆಲವು ಕೊಠಡಿ, ಕಾಂಪೌಂಡ್‌, ಅಂಗನವಾಡಿ ಕೇಂದ್ರ, ಅಗತ್ಯವಿರುವ ಆಸ್ಪತ್ರೆಗೆ ಸುಣ್ಣ ಬಣ್ಣ ಬಳಿಯಲಾಗಿದೆ. ಗೋಡೆಗಳ ಮೇಲೆ ಶಿಕ್ಷಣ, ಪರಿಸರ ಜಾಗೃತಿ ಚಿತ್ರಗಳನ್ನು ಬಿಡಿಸಲಾಗಿದೆ. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಇಂಗ್ಲಿಷ್ ಪಾಠಗಳ ಜತೆಗೆ ಮಗ್ಗಿಗಳನ್ನೂ ಹೇಳಿಕೊಡುತ್ತಿದ್ದಾರೆ. ತಾವೂ ಕಲಿಯುವುದರೊಂದಿಗೆ ಮಕ್ಕಳೊಂದಿಗೆ ಬೆರೆತು ಅವರ ಕಲಿಕೆಗೂ ಅನೂಕೂಲ ಮಾಡಿಕೊಡುತ್ತಿದ್ದಾರೆ.

ಈದಿನ.ಕಾಮ್ಗೆ ಪ್ರತಿಕ್ರಿಯಿಸಿದ ಮಂಗಳೂರಿನ ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ರಕ್ಷಾಸಿನಿ, “ಹಳ್ಳಿಗೆ ಬಂದು ಸಾಕಷ್ಟು ಕಲಿತಿದ್ದೇವೆ. ನಮ್ಮದು ಸಿಟಿ ಜೀವನ. ಹಳ್ಳಿ ಜೀವನಕ್ಕೂ ನಮ್ಮ ಜೀವನಶೈಲಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಸಾಮಾನ್ಯವಾಗಿ ನಗರ ಬದುಕಿಗೆ ಒಗ್ಗಿಕೊಂಡವರು ಹಳ್ಳಿ ಕಡೆ ಮುಖ ಮಾಡುವುದು ಅಪರೂಪ. ಆದರೆ, ಇಲ್ಲಿಗೆ ಬಂದ ನಂತರವೇ ನಿಜ ಜೀವನದ ಸಾರ ಏನೆಂಬುದು ತಿಳಿಸಿದೆ. ಸರಳವಾಗಿ ಬದುಕುವುದನ್ನು ಈ ಗ್ರಾಮಗಳು ಕಲಿಸಿಕೊಟ್ಟಿವೆ. ಹಲವು ವಿಚಾರಗಳ ಕುರಿತು ಹಳ್ಳಿ ಜನರಿಗೆ ಜಾಗೃತಿ ಮೂಡಿಸಿದ್ದು, ಕನ್ನಡ ಶಾಲೆ, ಅಂಗನವಾಡಿ, ಆಸ್ಪತ್ರೆಗಳನ್ನು ಸ್ವಚ್ಛ ಮಾಡಿದ್ದು, ಬಣ್ಣ ಬಳಿದಿದ್ದು, ಗೋಡೆಗಳ ಮೇಲೆ ಜಾಗೃತಿ ಚಿತ್ರಗಳನ್ನು ಬಿಡಿಸಿದ್ದು ಅತ್ಯಂತ ಖುಷಿ ಕೊಟ್ಟಿದೆ. ಮಂಗಳೂರಲ್ಲಿ ನಾವು ಕಲಿಯುತ್ತಿರುವ ಶಿಕ್ಷಣ, ಇಲ್ಲಿನ ಕನ್ನಡ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಕನ್ನಡ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿದರೆ, ಮಕ್ಕಳು ಇಲ್ಲೇ ಕಲಿಯುತ್ತಾರೆ. ಆಗ ಕನ್ನಡ ಶಾಲೆಗಳನ್ನು ಉಳಿಸಿದಂತೆಯೂ ಆಗುತ್ತದೆ. ಖಾಸಗಿ ಶಾಲೆಗಳ ಹಾವಳಿಯನ್ನು ತಕ್ಕಮಟ್ಟಿಗಾದರೂ ತಪ್ಪಿಸಿದಂತಾಗುತ್ತದೆ” ಎಂದರು.

WhatsApp Image 2025 12 09 at 1.39.00 PM

ಲೊಯೋಲ ವಿಕಾಸ ಕೇಂದ್ರದ ಜೇಸಲ್ ಫೈಜ್ ಮಾತನಾಡಿ, “ನಮ್ಮ ಸಂಸ್ಥೆ ಮೂವತ್ತೆರಡು ವರ್ಷಗಳಿಂದ ಹಳ್ಳಿ ಜನರೊಂದಿಗೆ ಕೆಲಸ ಮಾಡುತ್ತಿದೆ. ನಗರದ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಳ್ಳಿ ಜೀವನ ತಿಳಿದಿರುವುದಿಲ್ಲ. ಈ ರೀತಿಯ ಶೈಕ್ಷಣಿಕ ಪ್ರವಾಸದ ನೆಪದಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಅಲ್ಲಿಯ ಬಗ್ಗೆ ತಿಳಿವಳಿಕೆ ಪಡೆದುಕೊಳ್ಳುವುದು ಅವರ ಶೈಕ್ಷಣಿಕ ಪ್ರಗತಿಗಷ್ಟೇ ಅಲ್ಲ; ಅವರ ಮುಂದಿನ ಜೀವನಕ್ಕೂ ದಾರಿದೀಪ” ಎಂದು ಹೇಳಿದರು.

ಇದನ್ನೂ ಓದಿ: ಹಾವೇರಿ | ಹಿಜಾಬ್ ಕೇಸರಿ ವಿವಾದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು: ಬಸವರಾಜ ಎಸ್

ಯಾವುದೇ ಶಾಲೆ-ಕಾಲೇಜಿನ ಶೈಕ್ಷಣಿಕ ಪ್ರವಾಸ ಕೇವಲ ಪ್ರವಾಸಕ್ಕೆ ಸೀಮಿತವಾಗಿರದೆ, ವಿದ್ಯಾರ್ಥಿ ಬದುಕಿನ ಬಹುದೊಡ್ಡ ತಿರುವಿಗೆ ಕಾರಣವೂ ಆಗಬಹುದು. ಆ ನಿಟ್ಟಿನಲ್ಲಿ ಹಾನಗಲ್‌ನ ಲೊಯೊಲಾ ವಿಕಾಸ ಕೇಂದ್ರವು ಇಂಥದ್ದೊಂದು ಪ್ರವಾಸ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ. ಅದರಲ್ಲೂ ಹಳ್ಳಿಗಳಲ್ಲಿ ವಾಸ್ತವ್ಯ ಹೂಡಿ ಗ್ರಾಮೀಣ ಬದುಕಿನ ನಿಜಾನುಭವ ಪಡೆಯಲು ನೆರವಾಗಿರುವುದು ಮೆಚ್ಚುವಂತದ್ದು. ಸಮಾಜದ ಭವಿಷ್ಯವನ್ನು ನಿರ್ಧರಿಸುವವರು ಇಂದಿನ ಯುವಕರೇ ಆಗಿದ್ದಾರೆ. ಅವರು ಗ್ರಾಮೀಣ ಬದುಕಿನ ಕುರಿತು ನೇರ ಅನುಭವ ಪಡೆದಾಗ ಮಾತ್ರ ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎಂಬ ಅರಿವು ಗಾಢವಾಗುತ್ತದೆ. ಹಳ್ಳಿಗಳಲ್ಲಿನ ಮೂಲಸೌಕರ್ಯ ಕೊರತೆ, ಶಿಕ್ಷಣ, ಆರೋಗ್ಯದ ಸವಾಲುಗಳು, ರೈತರ ಬದುಕಿನ ಸಂಕೀರ್ಣತೆ, ಮಹಿಳೆಯರು- ಇವೆಲ್ಲವನ್ನೂ ನೇರವಾಗಿ ಕಂಡಾಗ ವಿದ್ಯಾರ್ಥಿಗಳಲ್ಲಿನ ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತದೆ.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...