“ಸಮ್ಮಸಗಿ ಗ್ರಾಮದ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಬಸ್ಸುಗಳು ನಿಲುಗಡೆ ಮಾಡಬೇಕು ಹಾಗೂ ಹೆಚ್ಚುವರಿ ಬಸ್ಸುಗಳನ್ನು ಬಿಡಬೇಕು” ಎಂದು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಸಮ್ಮಸಗಿ ಗ್ರಾಮದ ವಿದ್ಯಾರ್ಥಿಗಳು ಸೋಮವಾರ ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಮಾತನಾಡಿ, “ಹಾನಗಲ್ ತಾಲೂಕಿನ ಸಮ್ಮಸಗಿ ಗ್ರಾಮದ ಮೂಲಕವೇ ನಿತ್ಯ ಸಾಕಷ್ಟು ಬಸ್ಸುಗಳು ಹಾವೇರಿ ಮತ್ತು ಹಾನಗಲ್ಲಿನಿಂದ ಸಂಚರಿಸುತ್ತಿವೆ. ಸುತ್ತಲಿನ ಹಳ್ಳಿಗಳ ಮಕ್ಕಳು ಇದೆ ಬಸ್ಸ ನಿಲ್ದಾಣದಲ್ಲಿ ನಿಂತಿದ್ದರೂ ಬಸ್ಸನ್ನು ನಿಲ್ಲಿಸುವುದಿಲ್ಲ. ದಿನನಿತ್ಯ ಶಾಲಾ-ಕಾಲೆಜಿಗೆಂದು ೨೫೦ಕ್ಕೂ ಹೆಚ್ಚು ಮಕ್ಕಳು, ಮತ್ತು ಇತರ ಕೆಲಸ-ಕಾರ್ಯಗಳಿಗೆ ನೂರಾರು ಜನರು ಓಡಾಡುತ್ತಾರೆ. ಶಾಲೆಗೆ ಮೂರನೇ ಕ್ಲಾಸ್ ಮುಗಿದ ಮೇಲೆ ಹೋಗುತ್ತಿದ್ದೇವು. ಪ್ರತಿದಿನ ಶಾಲೆಯಲ್ಲಿ ಬಸ್ಸಿನ ಕಾರಣವನ್ನೇ ಹೇಳುತ್ತಾ ಬಂದಿದ್ದೆವೆ. ಶಾಲೆಯಿಂದ ಹಿಂತಿರುಗುವ ಸಂದರ್ಭದಲ್ಲಿ ರಾತ್ರಿ ೮ ಘಂಟೆಗೆ ಮನೆಗೆ ತಲುಪುತ್ತೇವೆ. ಇದರಿಂದಾಗಿ ಪಾಲಕರು ಶಾಲೆ ಬಿಡಿಸುವ ಸಂಭವ ಕೂಡ ಒದಗುತ್ತದೆ” ಎಂದು ದೂರಿದರು.
“ವಿದ್ಯಾರ್ಥಿಗಳಿಗೆ ಅನೂಕೂಲವಾಗುವ ವೇಳೆಗೆ ಬಸ್ ಬಿಡಬೇಕು. ಬಸ್ಸಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದಾಗಲೂ ಬಸ್ ನಿಲ್ಲಿಸದೇ ಹಾಗೇ ಓಡಾಡುತ್ತಿದ್ದು ೨ ಬಾರಿ ಶಿರಸಿ ಡಿಪೋಗೆ ಮೂಖಿಕವಾಗಿ ದೂರು ಕೊಟ್ಟಿದ್ದಲ್ಲದೇ ಮನವಿಯನ್ನು ಕೂಡಾ ಮಾಡಿಕೊಂಡಿದ್ದೆವೆ. ಆದರೂ ನಮ್ಮ ಮನವಿಗೆ ಪ್ರತಿಕ್ರಿಯೆ ಸಿಕ್ಕಿಲ್ಲ. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಒದಗಿಸದಿದ್ದಲ್ಲಿ ಉಗ್ರ ಹೋರಾಟವನ್ನು ಮಾಡುತ್ತೇವೆ” ಎಂದು ಈ ಮೂಲಕ ಪಾಲಕರು ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಇಸ್ರೋ ವಿಜ್ಞಾನಿ ಡಾ. ರಾಮನಗೌಡ ವಿ ನಾಡಗೌಡ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ಈ ವೇಳೆ ಪಾಲಕರು, ವಿದ್ಯಾರ್ಥಿಗಳು, ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.





