“ವಿಶ್ವದಲ್ಲೇ ಅತ್ಯಂತ ದೊಡ್ಡ, ಲಿಖಿತ ಮತ್ತು ಶ್ರೇಷ್ಠವಾದ ಸಂವಿಧಾನ ನಮ್ಮದು. ಸ್ವಾತಂತ್ರ್ಯದ ನಂತರ ದೇಶ ಹೇಗೆ ಮುನ್ನಡೆಯಬೇಕೆಂದು ಕಾನೂನು ತಜ್ಞರೆಲ್ಲಾ ಸೇರಿ ಕಾನೂನಾತ್ಮಕ ಚೌಕಟ್ಟುಗಳನ್ನು ನಿರ್ಮಿಸಿದರು. ಸಂವಿಧಾನವೇ ನಮ್ಮೆಲ್ಲರಿಗೂ ಶ್ರೇಷ್ಠ ಗ್ರಂಥ. ನಮ್ಮಲ್ಲಿ ಐಕ್ಯತೆಯನ್ನು ತುಂಬಿ ಸಮಗ್ರತೆಯನ್ನು ಎತ್ತಿ ಹಿಡಿಯುತ್ತದೆ. ಇದನ್ನೆಲ್ಲ ಅರಿತು ನಾವು ಸಂವಿಧಾನವನ್ನು ರಕ್ಷಿಸಬೇಕಾಗಿದೆ” ಎಂದು ಉಪನ್ಯಾಸಕ ರವಿ ಸಾದರ ನುಡಿದರು.
ಹಾವೇರಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ಡಾ.ಬಿ.ಆರ್. ಅಂಬೇಡ್ಕರ್ ರವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ನಮಗೆ ಹಕ್ಕು ಮತ್ತು ಕರ್ತವ್ಯಗಳನ್ನ ನೀಡಿದ್ದಲ್ಲದೇ, ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಬದುಕಲು ಸಮಾನ ಅವಕಾಶಗಳನ್ನು ನೀಡುತ್ತದೆ. ದೇಶದ ಸಾಮಾಜಿಕ, ಆರ್ಥಿಕ ಮತ್ತು ಆಡಳಿತಾತ್ಮಕ ದೃಷ್ಟಿಕೋನ ಹೇಗಿರಬೇಕೆಂದು ಸಂವಿಧಾನದ ಪೀಠಿಕೆ ಸ್ಪಷ್ಟವಾಗಿ ತಿಳಿಸುತ್ತದೆ. ವಿದ್ಯಾರ್ಥಿಗಳು ಇದನ್ನು ಅರಿತುಕೊಂಡು ಆ ತತ್ವಗಳನ್ನು ಅನುಸರಿಸಬೇಕು” ಕಿವಿಮಾತು ಹೇಳಿದರು.
” ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ ಭಜಂತ್ರಿ ಮಾತನಾಡಿ, “ಜಗತ್ತಿನ ಶ್ರೇಷ್ಠ ಚಿಂತನೆಗಳನ್ನು ಅಳವಡಿಸಿಕೊಂಡ ಸಂವಿಧಾನ ಈ ನೆಲದ ಮೌಲ್ಯಗಳನ್ನು ರಕ್ಷಿಸುತ್ತಾ, ದೇಶದ ಪ್ರತಿಯೊಬ್ಬ ಪ್ರಜೆಯ ಘನತೆ ಮತ್ತು ಗೌರವಗಳನ್ನು ಎತ್ತಿ ಹಿಡಿಯುತ್ತದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ಧ್ಯೇಯವನ್ನು ಒಳಗೊಂಡಿದೆ” ಎಂದರು.
“ದೇಶದ ಜನರೆಲ್ಲಾ ಹಲವು ಧರ್ಮಗಳು, ಸಾವಿರಾರು ಜಾತಿಗಳಲ್ಲಿ ಹಂಚಿಹೋಗಿದ್ದಾರೆ. ಎಲ್ಲರನ್ನೂ ಒಂದೇ ಸೂರಿನಡಿಗೆ ತಂದು ನಿಲ್ಲಿಸಿ, ನಾವೆಲ್ಲರೂ ಒಂದೇ ಎಂಬ ಭಾವವನ್ನು ತುಂಬುತ್ತದೆ ಸಂವಿಧಾನ. ವೈವಿಧ್ಯತೆಯಲ್ಲೂ ಏಕತೆಯನ್ನು ಸಾಧಿಸಲು ಯಶಸ್ವಿಯಾಗಿದೆ.ಇಂತಹ ಶ್ರೇಷ್ಠ ಸಂವಿಧಾನದ ಅರಿವು ಮತ್ತು ಕಾನೂನುಗಳ ತಿಳುವಳಿಕೆಯನ್ನು ಎಲ್ಲರೂ ಪಡೆದುಕೊಂಡಾಗ ಮಾತ್ರ ಸಮೃದ್ಧ ಮತ್ತು ಸದೃಢವಾದ ಸಮಾಜ, ದೇಶವನ್ನು ಕಟ್ಟಲು ಸಾಧ್ಯ.ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆಯ ಭಾವರ್ಥವನ್ನು ನೆನಪಿಸಿಕೊಳ್ಳುತ್ತಾ ಸಂವಿಧಾನದ ಅಧ್ಯಯನಕ್ಕಿಳಿಯಬೇಕು” ಎಂದು ತಿಳಿಸಿದರು.
ಪ್ರಾಚಾರ್ಯ ಬಸವರಾಜ ಇಟ್ಟಿಗುಡಿ ಮಾತನಾಡಿ, “ಸಂವಿಧಾನದ ಮಹತ್ವ, ಅದರ ಪಾತ್ರ ಮತ್ತು ಅದು ಜಾರಿಗೆ ಬಂದ ವಿಧಾನಗಳ ಕುರಿತು ಮಾಹಿತಿ ಹಂಚಿಕೊಂಡರು. ಪ್ರತಿಯೊಬ್ಬರೂ ಸಂವಿಧಾನದ ಸಾಕ್ಷರರಾದಾಗ ಮಾತ್ರ ಪ್ರಜ್ಞಾವಂತ ಸಮಾಜ ನಿರ್ಮಾಣವಾಗುತ್ತದೆ. ಜೊತೆಗೆ ಸಂವಿಧಾನದ ಆಶಯಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಹಾಗೂ ಇಚ್ಚಾಶಕ್ತಿ ನಮ್ಮಲ್ಲಿ ಬರಬೇಕಿದೆ” ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕ ರವಿ ಸಾದರ ಎಲ್ಲರಿಗೂ ‘ಸಂವಿಧಾನ ಪೀಠಿಕೆ’ಯನ್ನು ಓದಿಸಿ, ಪ್ರತಿಜ್ಞೆ ಮಾಡಿಸಿದರು. ಉಪನ್ಯಾಸಕ ಈಶ್ವರಗೌಡ ಪಾಟೀಲ ಸ್ವಾಗತಿಸಿದರೆ, ಮಂಜುನಾಥ ಹತ್ತಿಯವರ ವಂದಿಸಿದರು.





