ಜಮೀನು, ಮನೆ, ವಿಮೆಹಣಕ್ಕಾಗಿ ವ್ಯಕ್ತಿಯನ್ನು ಹತ್ಯೆ ಮಾಡಿ ಅಪಘಾತವೆಂದು ಬಿಂಬಿಸಲು ಹೊರಟ ಕಿಡಿಗೇಡಿಗಳನ್ನು ಬಂಧಿಸಲಾಗಿದೆ.
ರಟ್ಟಿಹಳ್ಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಸೆಪ್ಟೆಂಬರ್ 27ರಂದು ಕೊಲೆ ನಡೆದಿತ್ತು. 38 ವರ್ಷದ ಬಸವರಾಜ್ ಪುಟ್ಟಪ್ಪನವರ್ ಕೊಲೆಗೀಡಾದ ವ್ಯಕ್ತಿ.
ಬಸವರಾಜ್ ಅವರ ಮಾವ ರಾಘವೇಂದ್ರ ಮಾಳಗೊಂಡರ, ಸಿದ್ದನಗೌಡ ಹಲಗೇರಿ, ಪ್ರವೀಣ ಮತ್ತು ಲೋಕೇಶ್ ಎಂಬ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಪ್ರಕರಣದ ಆರಂಭದಲ್ಲಿ ಮೃತ ಬಸವರಾಜ್ ಸಾವಿನ ಬಗ್ಗೆ ಅವರ ಸಹೋದರ ಸಂಬಂಧಿ ಶಿವಕುಮಾರ್ಗೆ ಸಂಶಯ ಬಂದಿತ್ತು. ಈ ಕುರಿತಂತೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ತನಿಖೆ ನಡೆದು ಸತ್ಯಾಂಶ ಬೆಳಕಿಗೆ ಬಂದಿದೆ.
“ಹತ್ಯೆಗೊಂಡಿರುವ ಬಸವರಾಜ್ ತಂದೆ-ತಾಯಿ ಹಾಗೂ ಸಹೋದರರು ನಿಧನ ಹೊಂದಿದ್ದರು. ಬಸವರಾಜ್ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದ. ಈತನಿಗೆ 8 ಎಕರೆ ಜಮೀನು, ಮನೆ ಇತ್ತು. ಜತೆಗೆ ಆರೋಪಿಗಳೇ ಮೃತನಿಗೆ ಆಕ್ಸಿಡೆಂಟಲ್ ಇನ್ಷೂರೆನ್ಸ್ ಮಾಡಿಸಿದ್ದರು. ಈಗ ಅದರ ಅವಧಿ ಮುಗಿಯುತ್ತ ಬರುತ್ತಿದ್ದ ಹಿನ್ನೆಲೆ ವಿಮೆ ಕ್ಲೈಮ್ ಮಾಡಲು ಆರೋಪಿಗಳು ಈ ರೀತಿ ಪ್ಲ್ಯಾನ್ ಮಾಡಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್‌ಪಿ ಯಶೋಧಾ ವಂಟಗೋಡಿ ಪ್ರಕರಣವನ್ನು ವಿವರಿಸುತ್ತ, “ಸೆಪ್ಟೆಂಬರ್ 27ರಂದು ನಮ್ಮ ಸ್ಟೇಷನ್ ರೋಡ್ ರಟ್ಟಿಹಳ್ಳಿಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣದ ತರಹ ಮೃತದೇಹ ಬಿದ್ದಿರುತ್ತದೆ. ಆತ ಬಸವರಾಜ್ ಎಂದು ತಿಳಿದು ಬರುತ್ತದೆ. ಮೃತನ ಸಂಬಂಧಿ ಶಿವಕುಮಾರ್ ಎಂಬುವವರು ಬಂದು ಹಿಟ್ ಆ್ಯಂಡ್ ರನ್ ಆಗಿದೆ ಎಂದು ದೂರು ನೀಡಿದ್ದರು. ನಾವು ಪ್ರಕರಣ ದಾಖಲು ಮಾಡಿಕೊಂಡಿದ್ದೆವು. ಈ ಮಧ್ಯೆ ದೂರುದಾರ ಆತನ ಸಾವಿನಲ್ಲಿ ಅನುಮಾನವಿದೆ. ಆತನಿಗೆ 8 ಎಕರೆ ಜಾಗ ಹಾಗೂ ಇನ್ಶೂರೆನ್ಸ್ ಇತ್ತು. ಆ ಕಾರಣಕ್ಕೆ ಯಾರೋ ಕೊಲೆ ಮಾಡಿದ್ದಾರೆಂದು ಹೇಳಿದ್ದರು. ತಕ್ಷಣ ನಾವು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಾಗ ಅದು ಅಪಘಾತವಲ್ಲ ಕೊಲೆ ಎಂಬುದು ಬೆಳಕಿಗೆ ಬರುತ್ತದೆ” ಎಂದು ಹೇಳಿದರು.
ಕಳೆದ ವರ್ಷ ಪ್ರಧಾನಿ ಮಂತ್ರಿಯವರ ಯೋಜನೆಯ 10 ಲಕ್ಷದ ಮೌಲ್ಯದ ಇನ್ಷೂರೆನ್ಸ್ ಅನ್ನು ಮೃತ ವ್ಯಕ್ತಿಗೆ ಆರೋಪಿಗಳೇ ಮಾಡಿಸಿದ್ದರು. ಅದು ಈ ತಿಂಗಳ 18ಕ್ಕೆ ಮುಗಿಯಲಿತ್ತು. ಮೃತನಿಗೆ ಮನೆ, ಜಮೀನು ಇದ್ದು, ಈತನಿಗೆ ತಂದೆ-ತಾಯಿ, ಇಬ್ಬರು ಅಣ್ಣಂದಿರೂ ಇದ್ದರು. ಆ 4 ಜನಗಳು 2 ವರ್ಷದ ಒಳಗೆ ಸತ್ತುಹೋಗಿದ್ದಾರೆ. ಮೃತನಿಗೆ ಯಾರೂ ಇರಲಿಲ್ಲ, ಮದುವೆಯೂ ಆಗಿರಲಿಲ್ಲ, ಜತೆಗೆ ಕುಡಿಯುತ್ತಿದ್ದ. ಇದನ್ನೇ ಉಪಯೋಗಿಸಿಕೊಂಡಿದ್ದ ಆರೋಪಿಗಳು ಮೃತನ ಹತ್ತಿರ ಮನೆ, ಜಮೀನಿನ ವಿಲ್ ಮಾಡಿಸಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅಪ್ರಾಪ್ತ ಬಾಲಕಿ ಮೇಲಾದ ಕೃತ್ಯ ಖಂಡಿಸಿ ಪ್ರತಿಭಟನೆ
“ಹಾಗೇ ಮಾಡಿಸಿದ್ದ ಇನ್ಷೂರೆನ್ಸ್ ನಮಗೆ ಕ್ಲೈಮ್ ಆಗಬೇಕೆಂದು ಆರೋಪಿಗಳು ಉಪಾಯ ಮಾಡಿದ್ದರು. ಮೃತನು ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿದ್ದ. ಅಲ್ಲಿಂದ ಅವನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಬಂದ ಆರೋಪಿಗಳು ಆತ ಶೌಚಕ್ಕೆ ಹೋಗಬೇಕಾಗಿ ಕೇಳಿದಾಗ ನಡು ರಸ್ತೆಯಲ್ಲಿ ಕೂರಿಸಿ ಹಿಂದಿನಿಂದ ವಾಹನ ತೆಗೆದುಕೊಂಡು ಜೋರಾಗಿ ಬಂದು ಆತನ ಮೇಲೆ ಹತ್ತಿಸಿಕೊಂಡು ಹೋಗಿದ್ದಾರೆ. ಇದನ್ನು ಆರೋಪಿಗಳೇ ಒಪ್ಪಿಕೊಂಡಿದ್ದಾರೆ” ಎಂದು ಎಸ್‌ಪಿ ಯಶೋಧಾ ವಂಟಗೋಡಿ ವಿವರಿಸಿದ್ದಾರೆ.





