ರಾಜ್ಯದ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ನಮ್ಮ ಸರ್ಕಾರ 1000 ದಿನಗಳ ಯಶಸ್ವಿ ಆಡಳಿತ ನಡೆಸಿದ್ದೇವೆ. ನುಡಿದಂತೆ ನಡೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರು.
ಹಾವೇರಿ ಪಟ್ಟಣದ ಹೊರವಲಯದಲ್ಲಿ ಶನಿವಾರ ಕಂದಾಯ ಇಲಾಖೆ ಹಾಗೂ ಹಾವೇರಿ ಜಿಲ್ಲಾಡಳಿತ ಸಹಯೋಗದಲ್ಲಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ, ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ, ಒಂದು ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು
“ಕಂದಾಯ ಸಚಿವ ಕೃಷ್ಣಬೈರೇಗೌಡರು ಕಂದಾಯ ಇಲಾಖೆಯಲ್ಲಿ ಪ್ರಗತಿ ಮಾಡಿದ್ದಾರೆ. ಯಾವುದೇ ದಾಖಲೆ ಇಲ್ಲದೆ ಬದುಕುತ್ತಿರುವರಿಗೆ ದಾಖಲೆ ನೀಡುವ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ. ಬಾಕಿ ಉಳಿದ ಫಲಾನುಭವಿಗಳಿಗೆ ಬರುವ ದಿನಗಳಲ್ಲಿ ಹಕ್ಕುಪತ್ರ ನೀಡಲಾಗುವುದು” ಎಂದು ಹೇಳಿದರು.
243 ಭರವಸೆ ಈಡೇರಿಕೆ: ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ 590 ಭರವಸೆಗಳ ಪೈಕಿ 243 ಭರವಸೆಗಳನ್ನು ಈಡೇರಿಸಲಾಗಿದೆ. ಬಾಕಿ ಭರವಸೆಗಳನ್ನು ಇಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. 2013ರಿಂದ 2018ರ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ನೀಡಿದ 169 ಭರವಸೆಗಳ ಪೈಕಿ158 ಭರವಸೆಗಳನ್ನು ಈಡೇರಿಸಲಾಗಿದೆ ಹಾಗೂ ಪ್ರಣಾಳಿಕೆಯಲ್ಲಿ ಹೇಳದ 30 ಭರವಸೆಗಳನ್ನು ಇಡೇರಿಸಲಾಗಿದೆ” ಎಂದು ಹೇಳಿದರು.
ಜಿಡಿಪಿಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ: ಬಿಜೆಪಿ ಸರ್ಕಾರ ನಾಲ್ಕು ವರ್ಷದ ಅವಧಿಯಲ್ಲಿ ಶೇ.10ರಷ್ಟು ಭರವಸೆ ಇಡೇರಿಸಿಲ್ಲ. ‘ನಮ್ಮ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿಲ್ಲ. ಖಜಾನೆ ಖಾಲಿಯಾಗಿದೆ’ ಎಂದು ಸುಳ್ಳು ಆರೋಪ ಮಾಡುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗೆ ರೂ. ಒಂದು ಲಕ್ಷ 18 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ತೆರಿಗೆ ಸಂಗ್ರಹ ಹೆಚ್ಚಿಗೆ ಮಾಡಿದ್ದೇವೆ. ಜಿಡಿಪಿಯಲ್ಲಿ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೇಂದ್ರಕ್ಕೆ ನಾಲ್ಕುವರೆ ಲಕ್ಷ ಕೋಟಿ ಹಣ ನೀಡಲಾಗುತ್ತಿದೆ. ಆದರೆ ಕೇಂದ್ರ ಮಾತ್ರ ನಮಗೆ ಅನ್ಯಾಯ ಮಾಡುತ್ತಿದೆ ನೀರಾವರಿ ಯೋಜನೆಗಳಿಗೆ ಅನುದಾನ ನೀಡುತ್ತಿಲ್ಲ. ಜೆ.ಜೆಎಂ. ಯೋಜನೆಗೆ 15ಸಾವಿರ ಕೋಟಿ ನೀಡಬೇಕು ಅದನ್ನು ನೀಡಿಲ್ಲ” ಎಂದರು.
“ಎಲ್ಲ ಜಾತಿ, ಧರ್ಮ ಭಾಷೆಯ ಜನರಿಗೆ ಸೇರಿದಂತಹ ಎಲ್ಲರನ್ನೊಳಗೊಂಡ ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರ ನಂಬಿಕೆಯಿರಿಸಿದೆ. ನಾವು ಅಸಮಾನತೆ ನಿವಾರಣೆ ಕಾರ್ಯಮಾಡುತ್ತಿದ್ದೇವೆ. ನಮ್ಮ ಸರ್ಕಾರ ಒಂದು ಸಾವಿರ ದಿನ ಯಶಸ್ವಿಯಾಗಿ ಪೂರೈಸಿ ದೆ. ನುಡಿದಂತೆ ನಡೆದುಕೊಳ್ಳುವುದು ಕಾಂಗ್ರೆಸ್ ಸರ್ಕಾರ ಮಾತ್ರ” ಎಂದು ಹೇಳಿದರು.
“ಆಯವ್ಯಯದಲ್ಲಿ ಜಿಲ್ಲೆಗೆ ಮಲ್ಟಿಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾತಿ ಬೇಡಿಕೆ ಇದೆ. ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಮಂಜೂರು ಮಾಡಲಾಗುವುದು” ಎಂದು ಭರವಸೆ ನೀಡಿದರು.





