ನಮ್ಮ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಇಂದಿನ ಮಕ್ಕಳಿಗೆ, ಯುವ ಪೀಳಿಗೆಗೆ ತಿಳಿಸುವ ಅವಶಕತೆ ಇದೆ. ನಾವು ನಮ್ಮ ಸಂಸ್ಕೃತಿಯನ್ನು ಮರೆತು ನಮ್ಮದಲ್ಲದ ಬೇರೆ ಸಂಸ್ಕೃತಿಗೆ ಮಾರು ಹೋಗಿದ್ದೇವೆ. ಅದನ್ನೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಇದರಿಂದ ಮುಂದಿನ ದಿನಗಳಲ್ಲಿ ಅಪಾಯ ಎದುರಾಗುವ ಸ್ಥಿತಿ ಇದೆ” ಎಂದು ಕರ್ನಾಟಕ ಜಾನಪದ ಅಕಾಡಮಿ ಅಧ್ಯಕ್ಷರು ಗೊಲ್ಲಹಳ್ಳಿ ಶಿವಪ್ರಸಾದ ಹೇಳಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ ಅಲೆಮಾರಿ ಸಮುದಾಯಗಳ ಜಾನಪದ ಕಲೆ ಪ್ರದರ್ಶನ ಮತ್ತು ವಿಚಾರಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಜನಪದರಿಗೆ ಇದ್ದ ವಿವೇಕ ಇಂದಿನ ಯುವಕರಿಗೆ, ಅಕ್ಷರಸ್ತ ಸಮುದಾಯಕ್ಕೆ ಬರಬೇಕಿದೆ. ಅಕ್ಷರ ಬಲ್ಲದೆ ಇರುವವರು ಇಂದು ನಮಗೆ ಮಾದರಿಯಾಗಿ ನಿಲ್ಲಬಲ್ಲರು. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಕಲ್ಪನೆ ಜನಪದರಾದ್ದಾಗಿತ್ತು. ಅವರ ನಡೆ ನುಡಿ ಯಾವತ್ತೂ ಸತ್ತ್ಯದ ಪರವಾಗಿ ನ್ಯಾಯದ ಪರವಾಗಿ ಇರುತ್ತಿತ್ತು. ಹಾಗಾಗಿ ನಮ್ಮ ಜಾನಪದರು ಹಾಕಿ ಕೊಟ್ಟ ಮಾರ್ಗದಲ್ಲಿ ಇಂದಿನ ಯುವ ಪೀಳಿಗೆ ನಡೆಯಬೇಕಿದೆ” ಎಂದರು.
“ಇಂದು ನಾನು ಜಾನಪದ ಅಕಾಡಮಿ ಅಧ್ಯಕ್ಷನಾದ ಮೇಲೆ ಜನಪದ ಕಲೆ, ಸಂಸ್ಕೃತಿ, ಪರಂಪರೆ, ಇಂದಿನ ಯುವ ಪೀಳಿಗೆಗೆ ಮುಟ್ಟಿಸುವ ನಿಟ್ಟಿನಲ್ಲಿ ನಮ್ಮ ನಡೆ ವಿದ್ಯಾರ್ಥಿಗಳ ಕಡೆಗೆ ಎನ್ನುವ ಯೋಜನೆ ಹಾಕಿಕೊಂಡು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾನಪದದ ಬಗ್ಗೆ ಅರಿವು ಮೂಡಿಸುವ ಯೋಜನೆ ಹಾಕಿಕೊಂಡು ಕಾರ್ಯಕ್ರಮ ಮಾಡಿದ್ದೇವೆ” ಎಂದು ಹೇಳಿದರು.
“ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅಲೆಮಾರಿಗಳ ಕುರಿತು ಅವರ ಕಲೆಗಳ ಕುರಿತು ವಿಚಾರ ಸಂಕಿರಣ ಹಾಗೂ ಕಲಾ ಪ್ರದರ್ಶನ ಕಾರ್ಯಕ್ರಮ ಮಾಡುತ್ತಿರುವದು ಸಂತೋಷ್ ತಂದಿದೆ” ಎಂದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಟಿ. ಎಮ್. ಭಾಸ್ಕರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, “ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಕರ್ನಾಟಕ ಜಾನಪದ ಅಕಾಡಮಿ, ಜಾನಪದ ಲೋಕ ಹಾಗೂ ಜಾನಪದ ಪರಿಷತ್ತು ಇವೆಲ್ಲವೂ ಒಟ್ಟಿಗೆ ಸೇರಿ ಕೆಲಸ ಮಾಡಬೇಕಿದೆ. ಆ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ಜಾನಪದ ಅಕಾಡಮಿ ನಮ್ಮ ವಿಶ್ವವಿದ್ಯಾಲಯದಲ್ಲಿ ಅಲೆಮಾರಿ ಸಮುದಾಯದ ಕಲೆ ಹಾಗೂ ಸಂಸ್ಕೃತಿಯ ಕುರಿತು ವಿಚಾರ ಸಂಕಿರಣ ಹಾಗೂ ಕಲಾ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತೋಷವಾಗಿದೆ” ಎಂದರು.
ನಂತರ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಭಾರ್ ಕುಲಸಚಿವರು ಹಾಗೂ ಮೌಲ್ಯ ಮಾಪನ ಕುಲಸಚಿವರು ಡಾ. ಶಿವಶಂಕರ್ ಕೆ ಅವರು ಮಾತನಾಡಿದರು. ಪ್ರೊ ಕೆ. ಎಂ. ಮೇತ್ರಿ, ವಿಶ್ರಾಂತ ಕುಲಪತಿಗಳು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇವರು “ಅಲೆಮಾರಿ ಸಮುದಾಯಗಳ ಜನಪದ ಮಹಾಕಾವ್ಯಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪ್ರೊ. ಚಲುವರಾಜು, ವಿಶ್ರಾಂತ ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರು “ಅಲೆಮಾರಿ ಸಮುದಾಯಗಳ ಜನಪದ ಕಲಾ ಪ್ರದರ್ಶನ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಡಾ ಮಲ್ಲಿಕಾರ್ಜುನ ಬಿ ಮಾನ್ಪಡೆ, ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರು ‘ಅಲೆಮಾರಿ ಸಮುದಾಯಗಳ ಕಲಾವಿದರ ಸಮಾಜೋ ಆರ್ಥಿಕ ಸ್ಥಿತಿಗತಿಗಳು”ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ನಂತರ ವಿವಿಧ ಜನಪದ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡಮಿ ರೆಜಿಸ್ಟರ್ ನಮ್ರತಾ ಸದಸ್ಯರಾದ ರಾಮಣ್ಣ ವೇಷಗಾರ ಹಾಗೂ ವಿಶ್ವವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು. ಸಹಾಯಕ ಕುಲಸಚಿವರಾದ ಷಹಜಾಹನ್ ಮುದಕವಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಸಹಾಯಕ ಪ್ರಾಧ್ಯಾಪಕರಾದ ಡಾ ಚಂದ್ರಪ್ಪ ಸೊಬಟಿ ಅವರು ಕಾರ್ಯಕ್ರಮ ನಿರೂಪಿಸಿದರು.





