ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ವಿಶ್ವವಿದ್ಯಾಲಯವೊಂದು ತನ್ನ ವಿಶಿಷ್ಟ ಶೈಕ್ಷಣಿಕ ಪರಂಪರೆಯಿಂದಲೇ ಪ್ರಸಿದ್ಧಿಯಾಗಿದೆ. ಗೊಟಗೋಡಿಯಲ್ಲಿರುವ ವಿಶ್ವದ ಏಕೈಕ ಜಾನಪದ ವಿಶ್ವವಿದ್ಯಾಲವೆಂದೇ ಕರೆಯಲ್ಪಡುವ ಈ ಜ್ಞಾನ ದೇಗುಲಕ್ಕೆ ಸಾರಿಗೆ ಸೌಲಭ್ಯವೇ ಇಲ್ಲ. ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಪ್ರತಿದಿನವೂ ಉರಿ ಬಿಸಿಲಿನಲ್ಲಿ ಕಾಯುತ್ತಾ ಪ್ರಯಾಣಿಸಲು ಹೆಣಗಾಡುತ್ತಿರುವ ದುಸ್ಥಿತಿ ಎದುರಾಗಿದೆ.
ಜಾನಪದ ಸಂಸ್ಕೃತಿಯ ಅಧ್ಯಯನಕ್ಕೆ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ವಿವಿ, ಕೆಲ ಸೌಕರ್ಯಗಳಿಂದ ವಂಚಿತವಾಗಿ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹುಬ್ಬಳ್ಳಿ, ಸವಣೂರ ಹಾಗೂ ಹಾನಗಲ್ ಡಿಪೋಗಳಿಂದ ಗೊಟಗೋಡಿಗೆ ಹೋಗುವ ಬಸ್ಸುಗಳ ಸಂಖ್ಯೆ ಕಡಿಮೆಯಾಗಿದ್ದು, ಬರುವ ಬಸ್ಸುಗಳು ಕೂಡ ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ಇದರಿಂದ ತರಗತಿಗಳಿಗೆ ತಲುಪುವುದು ಕಷ್ಟವಾಗುತ್ತಿದೆ ಎನ್ನುವುದು ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಅಳಲು.
ಹಿಂದಿನ ದಿನಗಳಲ್ಲಿ ಹುಬ್ಬಳ್ಳಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆ 9:25, 9:35, 9:45 ಹಾಗೂ 10:00 ಗಂಟೆಗೆ ಹಾನಗಲ್ ಮತ್ತು ಸವಣೂರ ಮಾರ್ಗದ ನಾಲ್ಕು ಸಾಮಾನ್ಯ ದರ್ಜೆಯ ಬಸ್ಸುಗಳು ಜಾನಪದ ವಿಶ್ವವಿದ್ಯಾಲಯದ ಬಳಿ ನಿಲುಗಡೆ ಮಾಡುತ್ತಿದ್ದವು. ಆದರೆ ಇದೀಗ ಅವುಗಳಲ್ಲಿ ಮೂರು ಬಸ್ಸುಗಳನ್ನು ಎಕ್ಸ್‌ಪ್ರೆಸ್ ಬಸ್ಸುಗಳಾಗಿ ಬದಲಾಯಿಸಿರುವುದರಿಂದ, ಗೊಟಗೋಡಿಯಲ್ಲಿ ನಿಲುಗಡೆ ನಿಲ್ಲಿಸಲಾಗಿದೆ. ಪರಿಣಾಮವಾಗಿ ವಿಶ್ವವಿದ್ಯಾಲಯದ ಕಡೆಗೆ ಹೋಗುವ ಬಸ್‌ಗಳ ಸಂಖ್ಯೆ ಕಡಿಮೆಯಾಗಿದೆ. ಒಮ್ಮೊಮ್ಮೆ ನಿಂತೇ ಹೋಗುತ್ತದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಸಂಘಟನೆಗಳು ಮತ್ತು ಉಪನ್ಯಾಸಕರು ನಿತ್ಯ ಕನಿಷ್ಠ ಒಂದು ಬಸ್ ನಿಲುಗಡೆ ಸೌಲಭ್ಯ ಕಲ್ಪಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. “ಜಾನಪದ ವಿಶ್ವವಿದ್ಯಾಲಯವು ಸಂಸ್ಕೃತಿಯ ಹೆಮ್ಮೆ. ಆದರೆ ಸಾರಿಗೆ ಸೌಲಭ್ಯವಿಲ್ಲದೆ ಅದಕ್ಕೆ ಹೋಗುವುದೇ ಒಂದು ಹೋರಾಟವಾಗುತ್ತಿದೆ,” ಎಂದು ಉಪನ್ಯಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ.

“ಹಾನಗಲ್, ಸವಣೂರಿಗೆ ಹೋಗುವ ಬಸ್ಸುಗಳು ಎಲ್ಲವೂ ಅಲ್ಲಿ ನಿಲುಗಡೆ ಆಗುತ್ತವೆ. ಆ ಬಸ್ಸುಗಳಿಗೆ ಹತ್ತಿ” ಎಂದು ಹುಬ್ಬಳ್ಳಿ ಡಿಪೋ ಕಾರ್ಯನಿರ್ವಾಹಕ ಅಧಿಕಾರಿಗಳು ಸಬೂಬು ಹೇಳುತ್ತಾರೆ. ಆದರೆ, ಅಸಲಿಗೆ ಆ ಬಸ್ಸುಗಳು ನಿಲ್ಲಿಸುವುದೇ ಇಲ್ಲ. ಮೊದಲಿಗೆ ಈ ಮಾರ್ಗದಲ್ಲಿ ಅಗತ್ಯಕ್ಕೆ ಬೇಕಾದಷ್ಟು ಬಸ್ ಸೌಲಭ್ಯಗಳಿಲ್ಲ. ಸಾಲದು ಎಂಬಂತೆ ಬರುವ ಒಂದೋ ಎರಡೋ ಬಸ್ ಕೂಡ ಸಮಯಕ್ಕೆ ಸರಿಯಾಗಿ ಬರಲ್ಲ. ಬಂದರೂ ಕೆಲವು ನಿಲ್ದಾಣಗಳಲ್ಲಿ ನಿಲ್ಲಿಸಲ್ಲ. ಇದರಿಂದ ಪ್ರತೀ ಬಾರಿ ವಿವಿಗೆ ಹೋಗುವಾಗಲೂ ಅಂದರೆ ಪ್ರತಿದಿನವೂ ಹುಬ್ಬಳ್ಳಿ ಕೇಂದ್ರ ಬಸ್ ನಿಲ್ದಾಣ, ಗೋಕುಲ ಕ್ರಾಸ್, ಶಿಗ್ಗಾವಿ ಬಸ್ ನಿಲ್ದಾಣ, ವಿಶ್ವವಿದ್ಯಾಲಯದ ಮುಂದೆ ಇರುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಹೋಗಿ ಬಸ್ ಹತ್ತಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ” ಎನ್ನುತ್ತಾರೆ ವಿವಿಯ ಪ್ರಾಧ್ಯಾಪಕರೊಬ್ಬರು.
“ಹುಬ್ಬಳ್ಳಿ, ಹಾನಗಲ್, ಸವಣೂರು, ಹಾವೇರಿ ಡಿಪೋಗಳ ಅಧಿಕಾರಿಗಳು ಈ ಕುರಿತು ಗಮನ ಹರಿಸಿ, ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗೆ ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ಬಸ್ಸಿನ ಸೌಲಭ್ಯ ಮಾಡದಿದ್ದರೆ, ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ಮಾಡಲಾಗುವುದು” ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
ಬಸ್ಸಿನ ಸೌಲಭ್ಯ ಇಲ್ಲದೆ ಪ್ರವೇಶಕ್ಕೆ ಹಿನ್ನಡೆ ಆಗುವ ಸಾಧ್ಯತೆ: ವಿಶ್ವವಿದ್ಯಾಲಯಕ್ಕೆ ಬಸ್ಸಿನ ಸೌಲಭ್ಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳಿದ್ದರೆ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಜತೆಗೆ ವಿವಿಗೆ ದಾಖಲಾಗಬೇಕೆಂಬ ಹುರುಪು ಹೆಚ್ಚುತ್ತದೆ. ಆದರೆ ವಿಶ್ವವಿದ್ಯಾಲಯದ ಈಗಿನ ಪರಿಸ್ಥಿತಿ ಹೇಗಿದೆ ಎಂದರೆ, ʼಕಡೆಪಕ್ಷ ಬಸ್ ಸೌಲಭ್ಯವೇ ಇಲ್ಲ; ಇನ್ನು ಈ ವಿದ್ಯಾಲಯದಲ್ಲಿ ಸೌಲಭ್ಯಗಳು ಹೇಗಿರಬಹುದೋ ಏನೋʼ ಎನ್ನುವ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡುವಂತಾಗಿದೆ. ಇದು ಜಾನಪದ ವಿಶ್ವಾವಿದ್ಯಾಲಕ್ಕೆ ವಿದ್ಯಾರ್ಥಿಗಳ ದಾಖಲಾತಿ ಕುಸಿತಕ್ಕೂ ವಿವಿ ಬೆಳವಣಿಗೆಗೂ ನೇರ ಕಾರಣವಾಗುತ್ತದೆ.
ವಿದ್ಯಾರ್ಥಿಗಳು ಹಾಗೂ ಪ್ರಧ್ಯಾಪಕರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದ ಕುರಿತು ಈದಿನ.ಕಾಮ್ ನೊಂದಿಗೆ ಮಾತನಾಡಿದ ಹುಬ್ಬಳ್ಳಿ ಡಿಪೋ ಮ್ಯಾನೇಜರ್, “ಸದ್ಯ ಇರುವ ಎಲ್ಲಾ ಬಸ್ಸುಗಳು ಸಾಮಾನ್ಯ ದರ್ಜೆಯ ಬಸ್ಸುಗಳೇ ಆಗಿವೆ. ಯಾವ ಬಸ್ಸನ್ನೂ ಎಕ್ಸ್‌ಪ್ರೆಸ್ ಮಾಡಿರುವುದಿಲ್ಲ. ಹಾನಗಲ್ಗೆ ಹೋಗುವ ಕೆಲ ಬಸ್ಸುಗಳು ನಿಲುಗಡೆ ಮಾಡುತ್ತವೆ. ಬೇಕಿದ್ದರೆ ನೀವು ಒಮ್ಮೆ ಹಾನಗಲ್, ಸವಣೂರು ಡಿಪೋ ಮ್ಯಾನೇಜರ್ ಸಂಪರ್ಕಿಸಿ” ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಇದನ್ನೂ ಓದಿ: ಹಾವೇರಿ | ಬಿ. ಆರ್ ಭಾಸ್ಕರ್ ಪ್ರಸಾದ್ ಅವರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ: ಮಾದಿಗ ಮುಖಂಡರು
ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಸಿ ಟಿ ಗುರುಪ್ರಸಾದ ಅವರನ್ನು ಸಂಪರ್ಕಿಸಲಾಗಿ, “ಡಿಪೋ ಮ್ಯಾನೇಜರ್ ಅವರಿಗೆ ಜಾನಪದ ವಿವಿ ನಿಲ್ದಾಣದಲ್ಲಿ ಬಸ್ಸುಗಳನ್ನು ನಿಲುಗಡೆ ಮಾಡುವಂತೆ ಮನವಿ ಮಾಡಿದ್ದು, ಇನ್ನುಮುಂದೆ ನಿಲುಗಡೆ ಮಾಡುವುದಾಗಿ ಹೇಳಿದ್ದಾರೆ” ಎಂದು ತಿಳಿಸಿದರು.
ಜ್ಞಾನ ಮತ್ತು ಜನಪದ ಪರಂಪರೆಯ ಬೆಳಕನ್ನು ಹರಡುವ ವಿಶ್ವದ ಏಕೈಕ ಜಾನಪದ ವಿಶ್ವವಿದ್ಯಾಲಯ ಇಂದು ಸಾರಿಗೆ ಸೌಲಭ್ಯಗಳ ಕೊರತೆಯಿಂದ ತನ್ನ ಹೊಳಪು ಕಳೆದುಕೊಳ್ಳುತ್ತಿದೆ. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಪ್ರತಿದಿನವೂ ಬಸ್‌ಗಾಗಿ ಕಾಯುತ್ತಾ ತರಗತಿಗಳಿಗೆ ತಡವಾಗಿ ತಲುಪುವ ಪರಿಸ್ಥಿತಿ ಎದುರಿಸುತ್ತಿರುವುದು ವಿಷಾದನೀಯ. ಸಾರಿಗೆ ಇಲಾಖೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ನಡುವಿನ ವಾದಗಳು ವಿವಿಯ ಹಿತದೃಷ್ಟಿಯಿಂದ ಬೇಡದ ವಿವಾದವಾಗಿವೆ. ವಿದ್ಯಾರ್ಥಿಗಳು ನೀಡಿರುವ ಎಚ್ಚರಿಕೆ ಹಾಗೂ ವಿಶ್ವವಿದ್ಯಾಲಯ ಆಡಳಿತದ ಮನವಿಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಶೀಘ್ರದಲ್ಲೇ ಗೊಟಗೋಡಿಯ ಈ ಜ್ಞಾನಪೀಠಕ್ಕೆ ನಿಯಮಿತ ಬಸ್ ನಿಲುಗಡೆ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದರೆ ಜನಪದ ಸಂಸ್ಕೃತಿಯ ಈ ವಿಶ್ವವಿದ್ಯಾಲಯ ಪ್ರವೇಶಕ್ಕೂ ಸಾಧ್ಯವಾಗದ ತಾಣ ಎಂಬಂತಾಗುವ ಅಪಾಯವಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.




