“ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಇಂದು ಸದನದಲ್ಲಿ ಮಂಡಿಸಿದ 4.48 ಲಕ್ಷ ಕೋಟಿ ರೂಪಾಯಿಯ 2026-27 ನೇ ಸಾಲಿನ ಆಯವ್ಯಯ (ಬಜೆಟ್) ದಲ್ಲಿ ಕೃಷಿ ಪ್ರಧಾನ ಹಾವೇರಿ ಜಿಲ್ಲೆಗೆ ಕೃಷಿಯಾಧಾರಿತ, ಪಶು ಸಂಗೋಪನೆ ಆಧಾರಿತ ಕೈಗಾರಿಕೆಗಳು ಹಾಗೂ ಸ್ಥಳೀಯವಾಗಿ ಕೈಗಾರಿಕೆಗಳನ್ನು ಆರಂಭಿಸಿ ಸ್ಥಳೀಯವಾಗಿ ಯುವಜನರಿಗೆ ಉದ್ಯೋಗ ಸೃಷ್ಠಿಸುವಲ್ಲಿ ಈ ಬಜೆಟ್ ಸಂಪೂರ್ಣ ವಿಫಲವಾಗಿದೆ” ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ತಿಳಿಸಿದ್ದಾರೆ.
ಹಾವೇರಿ ಪಟ್ಟಣದಲ್ಲಿ ಶುಕ್ರವಾರ ರಾಜ್ಯ ಬಜೆಟ್ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಶಿಕ್ಷಣ ಇಲಾಖೆಯ 15 ಸಾವಿರ ಬೋಧಕ ಹುದ್ದೆಗಳನ್ನು ಹಾಗೂ ಆರೋಗ್ಯ ಇಲಾಖೆಯಲ್ಲಿ ಎರಡೂವರೆ ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವುದು ಒಳಗೊಂಡಂತೆ 56,432 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತೇವೆ ಎಂಬುವುದು ಸ್ವಾಗತಾರ್ಹವಾದುದು. ಇದೊಂದು ಅಂಶ ಹೊರತುಪಡಿಸಿದರೆ, ರಾಜ್ಯ ಸರಕಾರದಡಿ ಖಾಲಿಯಿರುವ ಎರಡು ಲಕ್ಷ ಎಂಬತ್ತು ಸಾವಿರ ಹುದ್ದೆಗಳ ಭರ್ತಿಗೆ ಸೂಕ್ತ ಯೋಜನೆ ರೂಪಿಸಲು ಕ್ರಮ ಕೈಗೊಂಡಿಲ್ಲ. ಅಲ್ಲದೇ ರಾಜ್ಯಕ್ಕೆ ಅಗತ್ಯವಿರುವ ಯುವ ನೀತಿಯನ್ನೂ ಕೂಡ ಜಾರಿ ಮಾಡಲು ಮುಂದಾಗಿಲ್ಲ. ಸದರಿ ಶಿಕ್ಷಣ ಇಲಾಖೆಯ 15 ಸಾವಿರ ಬೋದಕ ಹುದ್ದೆಗಳು, ಆರೋಗ್ಯ ಇಲಾಖೆಯ ಎರಡೂವರೆ ಸಾವಿರ ಹುದ್ದೆಗಳ ಭರ್ತಿ ಘೋಷಣೆಗಳು ಒಳಗೊಂಡಂತೆ 56,432 ಹುದ್ದೆಗಳನ್ನು ಈ ಹಿಂದಿನ ವರ್ಷಗಳಲ್ಲೇ ಭರ್ತಿ ಮಾಡಿಕೊಳ್ಳಬೇಕಿತ್ತು. ಆದರೆ ಈ ಬಜೆಟ್ ನಲ್ಲಿ ಘೋಷಿಸಿ, ಅದೇ ದೊಡ್ಡ ಸಾಧನೆಯೆಂಬಂತೆ ಬಿಂಬಿಸಿಕೊಳ್ಳುತ್ತಿರುವುದು ಉದ್ಯೋಗಾಕಾಂಕ್ಷಿ ಯುವಜನರನ್ನು ಅಣಕಿಸುವಂತಿದೆ” ಎಂದು ಹೇಳಿದ್ದಾರೆ.
“ರೈತರಿಗೆ ಒಂದೇ ಸೂರಿನಡಿ ಹವಾಮಾನ, ಮಾರುಕಟ್ಟೆ, ಕೃಷಿ ತಾಂತ್ರಿಕತೆ ಮತ್ತು ಇಲಾಖಾ ಮಾಹಿತಿಯನ್ನು ತ್ವರಿತವಾಗಿ ಒದಗಿಸಲು ಕೃಷಿ ಇಲಾಖೆಯ ‘ರೈತ ಕರೆ ಕೇಂದ್ರ’ವನ್ನು ಕೃತಕ ಬುದ್ದಿಮತ್ತೆ (ಐಐ) ತಂತ್ರಜ್ಞಾನದಿಂದ ಉನ್ನತೀಕರಿಸಲಾಗುವುದು ಎಂಬುವ ಬಜೆಟ್ ಘೋಷಣೆಯು ನಿರುದ್ಯೋಗವನ್ನು ಮುಂದುವರೆಸಿಕೊಂಡು ಹೋಗುವುದಾಗಿದೆ. ಎ.ಐ ಬದಲು ಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ಯುವಜನರನ್ನು ಈ ಕೆಲಸಕ್ಕೆ ನೇಮಿಸಿಕೊಳ್ಳಬಹುದಿತ್ತು” ಎಂದಿದ್ದಾರೆ.
“ಭಾವೈಕ್ಯತೆಯ ಹರಿಕಾರ ಸಂತ ಶಿಶುನಾಳ ಶರೀಫರು ಹಾಗೂ ವೀರರಾಣಿ ಬೆಳವಡಿ ಮಲ್ಲಮ್ಮ ಇವರುಗಳ ಹೆಸರಿನಲ್ಲಿ ಪ್ರತ್ಯೇಕವಾಗಿ ಪ್ರತಿಷ್ಠಾನ ಸ್ಥಾಪಿಸಲು ಮತ್ತು ಹಾವೇರಿ ಜಿಲ್ಲೆಯಲ್ಲಿ ಸಿಲ್ಕ್ ಪಾರ್ಕ್ ಆರಂಭಿಸುವ ಬಜೆಟ್ ನ ಘೋಷಣೆ”ಯನ್ನು ಡಿವೈಎಫ್ಐ ಸ್ವಾಗತಿಸುತ್ತದೆ.
“ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳ ಮೇಲೆ ನಡೆಯುವ ‘ಶೈಕ್ಷಣಿಕ ಮತ್ತು ಸಾಮಾಜಿಕ ದೌರ್ಜನ್ಯ’ವನ್ನು ನಿಲ್ಲಿಸಲು ‘ರೋಹಿತ್ ವೇಮುಲ ಕಾಯ್ದೆ’ಯನ್ನು ಜಾರಿಗೆ ತರಲಾಗುವುದು. ಮತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಲು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರವು ಉದ್ದೇಶಿಸಿರುವುದು ಹಲವು ವರ್ಷಗಳ ವಿದ್ಯಾರ್ಥಿ-ಯುವಜನ ಸಂಘಟನೆಗಳ ಹೋರಾಟಕ್ಕೆ ದೊರೆತ ಮನ್ನಣೆಯಾಗಿದ್ದು” ಇದನ್ನು ಡಿವೈಎಫ್ಐ ಸ್ವಾಗತಿಸುತ್ತದೆ.
“4.48 ಲಕ್ಷ ಕೋಟಿ ರೂಪಾಯಿಯ ಬೃಹತ್ ಗಾತ್ರದ ಬಜೆಟ್ ನಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅತ್ಯಂತ ಕಡಿಮೆ ಅನುದಾನ ತೆಗೆದಿರಿಸಿರಿಸಲಾಗಿದೆ. 47,224 ಕೋಟಿ ರೂಪಾಯಿ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ನ ಶೇಕಡ 10% ಮಾತ್ರ ಹಾಗೂ ಆರೋಗ್ಯ ಕ್ಷೇತ್ರಕ್ಕೆ 17,817 ಕೋಟಿ ರೂಪಾಯಿ ಅಂದರೆ ಒಟ್ಟು ಬಜೆಟ್ ನ ಕೇವಲ 4% ಮಾತ್ರ ನಿಗದಿಗೊಳಿಸಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಕನಿಷ್ಠ 30% ಹಣ ನಿಗದಿಗೊಳಿಸಬೇಕೆಂಬ ಹಲವು ದಶಕಗಳ ಕೂಗಿಗೆ ಸಿದ್ದರಾಮಯ್ಯನವರ ಬಜೆಟ್ ಸ್ಪಂದಿಸಿಲ್ಲ. ಅಲ್ಲದೇ ಸಾರ್ವಜನಿಕರಿಗೆ ಅತ್ಯಗತ್ಯವಾಗಿರುವ ಈ ಎರಡೂ ಕ್ಷೇತ್ರಗಳಿಗೆ ಅನುದಾನ ಕಡಿಮೆ ನಿಗದಿಗೊಳಿಸುವ ಮೂಲಕ ಖಾಸಗೀಕರಣಕ್ಕೆ ಒತ್ತು ನೀಡಲಾಗುತ್ತಿದೆ” ಎಂದು ಡಿವೈಎಫ್ಐ ಆರೋಪಿಸುತ್ತದೆ.
“ಸರಕಾರಿ ಆಷ್ಪತ್ರೆಗಳನ್ನು ಬಲಪಡಿಸಲು, ಹಾವೇರಿ ಜಿಲ್ಲೆ ಸೇರಿದಂತೆ ಪ್ರತಿ ಜಿಲ್ಲೆಯಲ್ಲಿಯೂ ಜಯದೇವ ಹೃದ್ರೋಗ ಆಷ್ಪತ್ರೆ ಹಾಗೂ ಕಿದ್ವಾಯಿ ಕ್ಯಾನ್ಸರ್ ಆಷ್ಪತ್ರೆ ಆರಂಭಿಸುವಂತೆ ಡಿವೈಎಫ್ಐ ಈ ಹಿಂದೆಯೆ ಧ್ವನಿ ಎತ್ತಿತ್ತು. ಆದರೆ ಈ ಬಜೆಟ್ ನಲ್ಲಿ ಈ ಅಂಶಗಳ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಇದು ರಾಜ್ಯ ಸರಕಾರವು ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿ ಖಾಸಗಿ ರಂಗಕ್ಕೆ ಒತ್ತು ನೀಡುತ್ತಿರುವುದನ್ನು ಋಜುವಾತುಪಡಿಸುತ್ತದೆ” ಎಂದು ಅಸಮಧಾನ ವ್ಯಕ್ತಪಡಿಸಿದರು.
“ರಾಜ್ಯದ ದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರಿಗೆ ಅತ್ಯಗತ್ಯವಿರುವ ಉದ್ಯೋಗ ಸೃಷ್ಠಿಸಿ, ಉದ್ಯೋಗ ಖಾತ್ರಿಗೊಳಿಸದೇ ಯುವಜನರಿಗೆ ಈ ಬಜೆಟ್ ನಿರಾಸೆಯನ್ನು ಮೂಡಿಸಿದೆ. ಅಲ್ಲದೇ ಯುವಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅಗತ್ಯ ಯೋಜನೆ ರೂಪಿಸಿ-ಅನುದಾನ ತೆಗೆದಿರಿಸುವಲ್ಲಿಯೂ ಕೂಡ ಈ ಬಜೆಟ್ ವಿಫಲವಾಗಿದೆ. ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಖಾತ್ರಿಪಡಿಸಲು ಸಮಗ್ರ ಯೋಜನೆ ರೂಪಿಸಿ ಜಾರಿಗೆ ತರಬೇಕು” ಎಂದು ಆಗ್ರಹಿಸಿದ್ದಾರೆ.





