“ಜೀವನ ತುಂಬಾ ಸುಂದರವಾದದ್ದು ಅದನ್ನು ಕೌಶಲ್ಯ ಮತ್ತು ಮೌಲ್ಯಗಳಿಂದ ಇನ್ನಷ್ಟೂ ಸುಂದರಗೊಳಿಸುವುದು ನಮ್ಮ ಕೈಯಲ್ಲಿದೆ. ನಾವು ಯಾವದೇ ಕಷ್ಟಕರ ಕೆಲಸಗಳನ್ನು ಕೌಶಲ್ಯಗಳನ್ನು ಬಳಸಿಕೊಂಡು ಸುಲಭಗೊಳಿಸಲು ಸಾಧ್ಯವಿದೆ” ಎಂದು ವಕೀಲರು ಶಿವಾನಂದ ಅಲ್ಲಾಪುರ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ಲೊಯೋಲ ವಿಕಾಸ ಕೇಂದ್ರದಲ್ಲಿ ಮಕ್ಕಳಿಗೆ ಆಯೋಜಿಸಿದ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
“ಶಿಕ್ಷಣ ಎಂದರೆ ಕೇವಲ ನೌಕರಿ ತೆಗೆದುಕೊಳ್ಳುವುದು ಮಾತ್ರವಲ್ಲ, ಜೀವನದಲ್ಲಿ ಮೌಲ್ಯಗಳನ್ನು ಬೆಳಸಿಕೊಂಡು ಪ್ರತಿಯೊಬ್ಬರನ್ನು ಗೌರವದಿಂದ ಕಾಣುವುದು. ಸಮಾಜದಲ್ಲಿ ಘನತೆಯಿಂದ ಬಾಳುವುದು ಕೂಡಾ ಶಿಕ್ಷಣ” ಎಂದು ಹೇಳಿದರು.
“ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜೊತೆಗೆ ಜೀವನ ಕೌಶಲ್ಯಗಳು ಬಹಳ ಮುಖ್ಯವಾಗಿವೆ. ಉತ್ತಮ ಸಂವಹನ, ಸರಿಯಾದ ನಿರ್ದಾರ ತೆಗೆದುಕೊಳ್ಳುವ ಸಾಮರ್ಥ್ಯ, ಸಮಸ್ಯೆ ಪರಿಹಾರ ಕೌಶಲ್ಯ, ಹಾಗೂ ತಂಡದಲ್ಲಿ ಕೆಲಸ ಮಾಡುವ ಗುಣಗಳು ವಿಧಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ನೆರವಾಗುತ್ತವೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಹ ನಿರ್ದೇಶಕರಾದ ಫಾದರ್ ಜೇಸನ್ ಪಾಯ್ಸ್ ಅವರು ಮಾತನಾಡಿ, “ಮಕ್ಕಳಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆ ಬರುತ್ತಿದೆ. ಮಕ್ಕಳು ಯಾವುದೆ ಆತಂಕ ಭಯ ಪಡದೆ ಆತ್ಮವಿಶ್ವಾಸದಿಂದ, ಆಟದ ರೀತಿಯಲ್ಲಿ ಸಂತೋಷದಿಂದ ಪರೀಕ್ಷೆಗೆ ಸಿದ್ದರಾಗಬೇಕು. ಅದರ ಜೊತೆಗೆ ಪರೀಕ್ಷಾ ಪೂರ್ವತಯಾರಿ ವಿಷಯಗಳಾದ ಓದಿದ್ದನ್ನು ಪುನಾರಾವರ್ತನೆ ಮಾಡಿಕೊಳ್ಳುವುದು, ಓದುವಾಗ ಏಕಾಗ್ರತೆ ಕಾಪಾಡಿಕೊಳ್ಳುವುದು, ಸಮಯದ ನಿರ್ವಹಣೆ, ಕಠಿಣ ವಿಷಯಗಳಿಗೆ ಹೆಚ್ಚಿನ ಆದ್ಯತೆ ಮತ್ತು ಬಹಳ ಮುಖ್ಯವಾಗಿ ಆರೋಗ್ಯ ಮತ್ತು ವಿಶ್ರಾಂತಿಯನ್ನು ಕಾಪಾಡಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳು ಉಪಸ್ಥಿತರಿದ್ದರು. ಫಕ್ಕೀರೇಶ ಗೌಡಳ್ಳಿ ನಿರೂಪಿಸಿದರು, ರೇವಣ್ಣ ದಾನಗೊಂಡರ ಸ್ವಾಗತಿಸಿದರು, ರಮೇಶ ಬಾರ್ಕಿ ಅವರು ವಂದಿಸಿದರು.





