ಕಳೆದ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆದ ರೈತರ ಸಮಸ್ಯೆ ದಿನದಿಂದ ದಿನಕ್ಕೆ ಬೇರೆ ಬೇರೆ ರೂಪ ಪಡೆದುಕೊಳ್ಳುತ್ತಿದೆ. ಎಂಎಸ್‌ಪಿ(ಬೆಂಬಲ ಬೆಲೆ) ಖರೀದಿಗೆ ನೋಂದಣಿ ಮಾಡಿಸುವ ವೇಳೆ ಪಾಸಾಗಿದ್ದ ಮೆಕ್ಕೆಜೋಳ ಮಾದರಿ, ಮಾರಾಟದ ವೇಳೆ ರಜರಕ್ಟ್ ಆಗಿದೆ. ಇದರಿಂದಾಗಿ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ರೈತರು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ ಖರೀದಿ ಮಾಡುವಂತೆ ಪ್ರತಿಭಟನೆ ನಡೆಸಿದ್ದರು. ಸರ್ಕಾರ ಆರಂಭದಲ್ಲಿ ರೈತರಿಂದ ತಲಾ 12 ಕ್ವಿಂಟಲ್ ಮೆಕ್ಕೆಜೋಳ ಖರೀದಿ ಮಾಡುವುದಾಗಿ ಘೋಷಣೆ ಮಾಡಿತ್ತು. ಬಳಿಕ ರೈತರು ಹೋರಾಟ ಮುಂದುವರೆಸಿದಾಗ ತಲಾ 20 ಕ್ವಿಂಟಲ್ ಎಂದು ಘೋಷಣೆ ಮಾಡಿ, ನಂತರ 50 ಕ್ವಿಂಟಲ್‌ಗೆ ಖರೀದಿ ಪ್ರಮಾಣ ಏರಿಕೆ ಮಾಡಿತ್ತು. ಆದರೆ, ಬ್ಯಾಡಗಿ ಪಟ್ಟಣದ ಎಪಿಎಂಸಿಯಲ್ಲಿರುವ ಕೆಎಂಎಫ್ ಖರೀದಿ ಕೇಂದ್ರಕ್ಕೆ ತಂದಿರುವ ಮೆಕ್ಕೆಜೋಳದಲ್ಲಿ ಖರೀದಿಗಿಂತ ಹೆಚ್ಚು ಪ್ರಮಾಣದಲ್ಲಿ ಮೆಕ್ಕೆಜೋಳವನ್ನು ರಿಜೆಕ್ಟ್ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಬ್ಯಾಡಗಿ ಎಪಿಎಂಸಿಗೆ ಬ್ಯಾಡಗಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು ಮೆಕ್ಕೆಜೋಳ ಮಾರಾಟಕ್ಕೆ ತಂದಿದ್ದಾರೆ. ಮೆಕ್ಕೆಜೋಳ ಖರೀದಿ ನೋಂದಣಿ ವೇಳೆ ಆಯ್ಕೆಯಾಗಿದ್ದ ಮಾದರಿ(ಸ್ಯಾಂಪಲ್) ಮೆಕ್ಕೆಜೋಳವನ್ನು ಖರೀದಿ ಕೇಂದ್ರಕ್ಕೆ ತಂದರೆ ಇದೀಗ ತಿರಸ್ಕರಿಸಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? 2025ರಲ್ಲಿ ಸರ್ಕಾರದ ನಿದ್ದೆಗೆಡಿಸಿದ ರೈತ ಚಳವಳಿಗಳು: ಎಲ್ಲೆಲ್ಲಿ ಏನೇನಾಯ್ತು?
ಬ್ಯಾಡಗಿ ಮಾರುಕಟ್ಟೆಗೆ ಮೆಕ್ಕೆಜೋಳ ಮಾರಾಟಕ್ಕೆ ಬಂದಿರುವ ರೈತರು ಏಳೆಂಟು ದಿನಗಳಿಂದ ಮನೆಗೆ ಹೋಗದೆ ಟ್ರ್ಯಾಕ್ಟರ್ ಮೇಲೆಯೇ ಮಲಗಿ ಜೀವನ ಕಳೆಯುತ್ತಿದ್ದಾರೆ. ಆದರೆ ಮೆಕ್ಕೆಜೋಳ ಮಾತ್ರ ಖರೀದಿಯಾಗುತ್ತಿಲ್ಲ. ಇದರಿಂದ ಟ್ರ್ಯಾಕ್ಟರ್ ಬಾಡಿಗೆ ಹೆಚ್ಚಳವಾಗುತ್ತಿದೆ. ಅಲ್ಲದೆ ಊಟ, ವಸತಿ ವ್ಯವಸ್ಥೆಗಳಿಲ್ಲ. ಇಷ್ಟು ದಿನ ನಿಲ್ಲಿಸಿ ಇನ್ನೇನು ಖರೀದಿ ಹತ್ತಿರ ಹೋಗುತ್ತಿದ್ದಂತೆ ಅಧಿಕಾರಿಗಳು, ಖರೀದಿದಾರರು ʼಮೆಕ್ಕೆಜೋಳಕ್ಕೆ ಫಂಗಸ್ ಇದೆ, ಮೆಕ್ಕೆಜೋಳದಲ್ಲಿ ತೇವಾಂಶ ಅಧಿಕವಿದೆʼ ಎಂಬ ಕಾರಣ ನೀಡಿ ಮೆಕ್ಕೆಜೋಳ ಖರೀದಿ ಮಾಡುತ್ತಿಲ್ಲವೆಂಬ ಆರೋಪಗಳು ವ್ಯಕ್ತವಾಗುತ್ತಿವೆ.





