ಮಹಿಳೆಗೆ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ ಆರೋಪದ ಪ್ರಕರಣದಲ್ಲಿ ಕೋರ್ಟ್‌ನಿಂದ ವಾರೆಂಟ್ ಜಾರಿಯಾದರೂ ಸಹ ನ್ಯಾಯಾಲಯಕ್ಕೆ ಹಾಜರಾಗದ ಜೈ ಭಾರತ್ ಮಾತಾ ಸೇವಾ ಸಮಿತಿಯಸಂಸ್ಥಾಪಕ ಅಧ್ಯಕ್ಷ, ನಿರಗುಡಿಯ ಹವಾ ಮಲ್ಲಿನಾಥ್ ಮಹಾರಾಜ ಮುತ್ಯಾ ಅವರನ್ನು ಕಲಬುರಗಿಯ ಎಂ.ಬಿ ನಗರ ಪೊಲೀಸರು ಬಂಧಿಸಿದ್ದಾರೆ.
2017ರ ಅಟ್ರಾಸಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಕಲಬುರಗಿಯ ಎರಡನೇ ಹೆಚ್ಚುವರಿ ನ್ಯಾಯಲಯದಿಂದ ವಾರೆಂಟ್ ಜಾರಿಗೊಳಿಸಿತ್ತು. ನೋಟಿಸ್ ಜಾರಿಯಾದರೂ ಸಹ ನ್ಯಾಯಾಲಯಕ್ಕೆ ಹಾಜರಾಗದ ಹವಾ ಮಲ್ಲಿನಾಥ್ ಮುತ್ಯಾನನ್ನು ಸೋಮವಾರ ಕೋರ್ಟ್‌ಗೆ ಹಾಜರಾದ ಸಂದರ್ಭದಲ್ಲಿ ಬಂಧಿಸಲಾಗಿದೆ.
ಕಲಬುರಗಿಯ ಜೈ ಭಾರತ ಮಾತಾ ಸೇವಾ ಸಮಿತಿ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ ಮುತ್ಯಾಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕಲಬುರಗಿ 2ನೇ ಜಿಲ್ಲಾ ಸತ್ರ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.
ದಲಿತ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಸಹಕರಿಸಿದ ಆರೋಪ ಮಲ್ಲಿನಾಥ ಮುತ್ಯಾ ಮೇಲೆ ಇದೆ. ಹವಾ ಮಲ್ಲಿನಾಥ ಮುತ್ಯಾ ಅವರ ಸಂಬಂಧಿ ಪ್ರಕಾಶ್ ಮೇಲೆ ಜಾತಿ ನಿಂದನೆ ಮತ್ತು ಅತ್ಯಾಚಾರ ಪ್ರಕರಣವಿದ್ದು, ಹವಾ ಮಲ್ಲಿನಾಥ ಮುತ್ಯಾ ಎರಡನೇ ಆರೋಪಿಯಾಗಿದ್ದಾರೆ.





