ಮುಂಗಾರು ವೇಳೆ ಬಿತ್ತಿದ್ದ ಹೆಸರುಕಾಳು ಮತ್ತು ಉದ್ದು ಸೇರಿದಂತೆ ಹಲವು ರೀತಿಯ ದ್ವಿದಳ ಧಾನ್ಯಗಳು ನಿರಂತರ ಮಳೆಯಿಂದಾಗಿ ಜಲಾವೃತವಾಗಿರುವ ಕಾರಣ ರೈತರು ಕಂಗಾಲಾಗಿದ್ದು, ಭಾರೀ ನಷ್ಟವನ್ನು ಎದುರಿಸುತ್ತಿದ್ದಾರೆ.
ಮೇ ತಿಂಗಳ ಮಧ್ಯದಲ್ಲಿ ಮಳೆಯಾದ ನಂತರ, ಧಾರವಾಡ, ಬೆಳಗಾವಿ, ಹಾವೇರಿ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ರೈತರು ಆರಂಭಿಕ ಬಿತ್ತನೆ ಕಾರ್ಯ ಕೈಗೊಂಡಿದ್ದರು. ಇಂತಹ ಬೆಳೆಗಳು ಈಗ ಕೊಯ್ಲಿಗೆ ಸಿದ್ಧವಾಗಿದ್ದು, ಅಕಾಲಿಕವಾಗಿ ಸುರಿದ ಭಾರೀ ಮಳೆ ಹಿನ್ನೆಲೆಯಲ್ಲಿ ತೀವ್ರ ಹಾನಿಗೆ ಉಂಟಾಗಿವೆ. ಅಲ್ಲದೆ, ಸುಮಾರು ನಾಲ್ಕು ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದ ದ್ವಿದಳ ಧಾನ್ಯ ಬೆಳೆಗಳು ಈಗ ಹಾನಿಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.
ರಾಜ್ಯಾದ್ಯಂತ ಮುಂಗಾರಿನಲ್ಲಿ 23.16 ಲಕ್ಷ ಹೆಕ್ಟೇರ್‌ಗಳಲ್ಲಿ ಹೆಸರುಕಾಳನ್ನು ಬಿತ್ತನೆ ಮಾಡಲಾಗಿದ್ದು, ಅದರಲ್ಲಿ ಸುಮಾರು ಶೇ.70ರಷ್ಟು(18 ಲಕ್ಷ ಹೆಕ್ಟೇರ್) ಮಧ್ಯ ಮತ್ತು ಉತ್ತರ ಕರ್ನಾಟಕದಲ್ಲಿ ಕೇಂದ್ರೀಕೃತವಾಗಿದೆ. ಇದು ಗದಗ, ಹಾವೇರಿ, ಧಾರವಾಡ ಮತ್ತು ಬೆಳಗಾವಿ ಹಾಗೂ ಬಾಗಲಕೋಟೆ ಸೇರಿದಂತೆ ಕೆಲವು ಜಿಲ್ಲೆಗಳಿಗೆ ಪ್ರಮುಖ ಬೆಳೆಯಾಗಿದೆ.

ಮೇ ತಿಂಗಳಿನಲ್ಲಿ ಸುರಿದ ಮಳೆಯಿಂದ ಸಂತಸಗೊಂಡ 14ಕ್ಕೂ ಹೆಚ್ಚು ತಾಲೂಕುಗಳ ರೈತರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೆಸರುಕಾಳಿನ ಬಿತ್ತನೆ ಮಾಡಿದರು. ಆದಾಗ್ಯೂ, ಜೂನ್ ಮತ್ತು ಜುಲೈನಲ್ಲಿ ಬಿದ್ದ ಅತಿಯಾದ ಮಳೆಯು ಸುಮಾರು ಎರಡು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೊಳಕೆಯೊಡೆಯುತ್ತಿದ್ದ ಬೆಳೆಗಳನ್ನು ಹಾನಿಗೊಳಿಸಿತು. ಇದರಿಂದಾಗಿ ಬಹುತೇಕ ರೈತರು ಪುನಃ ಮೆಕ್ಕೆಜೋಳ ಬಿತ್ತನೆ ಮಾಡಿದರು. ಈಗ, ಹೆಚ್ಚುವರಿಯಾಗಿ ನಾಲ್ಕು ಲಕ್ಷ ಹೆಕ್ಟೇರ್ ಹೆಸರುಕಾಳಿನ ಬೆಳೆ ನೀರಿನಿಂದ ಆವೃತವಾಗಿದೆ.
ಮಧ್ಯ ಮತ್ತು ಉತ್ತರ ಕರ್ನಾಟಕದಲ್ಲಿ ಸುಮಾರು ನಾಲ್ಕು ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಮಾಡಲಾದ ಉದ್ದಿನ ಬೇಳೆಯೂ ಕೂಡ ಹಾನಿಗೊಳಗಾಗಿದೆ. ಶೇ.10–15 ರಷ್ಟು ಉದ್ದಿನ ಬೇಳೆ ಹಾನಿಗೊಳಗಾಗಬಹುದೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ರೈತ ಯಮನಪ್ಪ ಮಾಲಗಿಮನಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಳೆದ ವರ್ಷವೂ ಆಗಸ್ಟ್‌ನಲ್ಲಿ ಮಳೆಯಿಂದಾಗಿ ಬೆಳೆ ಹಾಳಾಗಿತ್ತು. ಕೇವಲ ಶೇ.50ರಷ್ಟು ಇಳುವರಿಯನ್ನು ಕಂಡಿದ್ದೆವು. ಈ ವರ್ಷದ ಪರಿಸ್ಥಿತಿಯೂ ಬಹುಪಾಲು ಹಾಗೆಯೇ ಇದೆ. ಈಗಾಗಲೇ ಸುಮಾರು ಶೇ.60ರಷ್ಟು ಬೆಳೆ ಜಲಾವೃತವಾಗಿದೆ” ಎಂದು
ಧಾರವಾಡ, ನವಲಗುಂದ, ಕುಂದಗೋಳ ತಾಲೂಕುಗಳಲ್ಲಿ ಹೆಸರು ಬೆಳೆ, ಮಕ್ಕೆ ಜೋಳ ಮತ್ತು ಹತ್ತಿಬೆಳೆಯನ್ನು ಬೆಳೆಯಲಾಗುತ್ತದೆ. ಈ ಪೈಕಿ ಶೇ.75ರಷ್ಟು ಹೆಸರು ಬಿತ್ತನೆ ಮಾಡಲಾಗಿದ್ದು, ಶೇ.25ರಷ್ಟು ಭಾಗದಲ್ಲಿ ಮೆಕ್ಕೆಜೀಳ ಮತ್ತು ಹತ್ತಿ ಬೆಳೆಯನ್ನು ಬೆಳೆಯಲಾಗಿದೆ. ಹೆಸರು ಬೆಳೆ ಪೂರ್ತಿಯಾಗಿ ಜಲಾವೃತವಾಗಿದೆ. ಈಗಾಗಲೇ ಕಟಾವಿಗೆ ಬಂದಿದೆಯಾದರೂ, ಭಾರೀ ಮಳೆ ಹಿನ್ನೆಲೆಯಲ್ಲಿ ಹೊಲಕ್ಕೆ ಇಳಿಯಲು ಸಾಧ್ಯವಾಗುತ್ತಿಲ್ಲ. ಕಾಳುಗಳೆಲ್ಲ ಗಿಡದಲ್ಲಿಯೇ ಮೊಳಕೆಯೊಡೆಯಲು ಆರಂಭಿಸಿವೆ. ಇಷ್ಟು ದಿನ ಕಾಪಾಡಿಕೊಂಡು ಬಂದ ಬೇಳೆ ಇದೀಗ ಮಣ್ಣು ಪಾಲಾಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಹತ್ತಿಬೆಳೆ ಇಳುವರಿ ಕುಂಠಿತಗೊಂಡಿದ್ದು, ಗಿಡಕ್ಕೆ 150-200 ಕಾಯಿಗಟ್ಟುವ ಮೂಲಕ ಒಳ್ಳೆಯ ಇಳುವರಿ ಬರುತ್ತಿತ್ತು. ಆದರೆ ಈಗ ಕೇವಲ ನಾಲ್ಕರಿಂದ ಐದು ಕಾಯಿಗಳಿಗೆ ಬಂದು ನಿಂತಿದೆ. ಕಾಯಿಗಳೆಲ್ಲ ಉದುರಿ ಹೋಗುತ್ತಿವೆ. ಇನ್ನು ಜೋಳದ ಬೆಳೆ ಹೇಳಿಕೊಳ್ಳುವಂತಿಲ್ಲ. ಬೆಳವಣಿಗೆಯೇ ಕುಂಠಿತಗೊಂಡಿದ್ದು, ಬಿಳಿಸುಳಿ ರೋಗಕ್ಕೆ ಸಿಲುಕಿದೆ. ಇಡೀ ಬೆಳೆ ಹಳದಿ ಬಣ್ಣಕ್ಕೆ ತಿರುಗಿದ್ದು, ಅವು ತೆನೆಗಟ್ಟುವುದಿಲ್ಲ, ಮೆಕ್ಕೆಜೋಳದ ಕಥೆಯೂ ಮುಗೀತು. ಹೆಸರು ಬೆಳಯಲ್ಲಾದರೂ ಆದಾಯ ನೋಡುವ ನಿರೀಕ್ಷೆಯಲ್ಲಿದ್ದೆವು. ಈಗ ಅಕಾಲಿಕ ಮಳೆ ಸುರಿಯುತ್ತಿರುವುದರಿಂದ ಅದೂ ಕೂಡ ಜಲಾವೃತವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ನಾನೂ ಕೂಡ 5 ಎಕರೆ ಭೂಮಿಯಲ್ಲಿ ಹೆಸರು ಬಿತ್ತನೆ ಮಾಡಿದ್ದೆ. ಬಿತ್ತನೆ ಬೀಜ, ಗೊಬ್ಬರ, ಔಷಧಿ, ಆಳು ಕಾಳು ಅಂತ ₹50,000ದಿಂದ ₹60,000 ಖರ್ಚಾಗಿದೆ. ಪೂರ್ತಿ ಬೆಳೆ ನಾಶವಾಗಿದೆ. ಜಿಲ್ಲಾಧಿಕಾರಿ, ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಸಮೀಕ್ಷೆ ನಡೆಸುತ್ತೇವೆಂದು ಹೇಳಿದ್ದಾರೆ. ಏನು ಮಾಡುತ್ತಾರೆಂಬುದನ್ನು ಕಾದು ನೋಡಬೇಕು” ಎಂದು ಹೇಳಿದರು.

“ಎಪಿಎಂಸಿಗಳಲ್ಲಿ ಹೆಸರುಕಾಳಿನ ಬೆಲೆಗಳು ಏರಿಕೆಯಾಗಿ ಕ್ವಿಂಟಲ್‌ಗೆ ₹9,000 ತಲುಪಿದೆ. ಇದೇ ರೀತಿ ಬೆಳೆಹಾನಿ ಮುಂದುವರಿದರೆ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ” ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಎರಡನೇ ಬೆಳೆಯ ನಿರೀಕ್ಷೆಯಲ್ಲಿ ರೈತರು ಈ ವರ್ಷ ಉದ್ದೇಶಪೂರ್ವಕವಾಗಿ ಬೇಗ ಬಿತ್ತನೆ ಮಾಡಲು ಆರಂಭಿಸಿದ್ದಾರೆಂಬುದು ಗಮನಾರ್ಹ. ಇದರಿಂದಾಗಿ ಮೊದಲೇ ಬಿತ್ತನೆ ಮಾಡಿರುವ ಬೆಳೆಗಳು ಇನ್ನಷ್ಟು ಹಾನಿಯಾಗುವ ಸಾಧ್ಯತೆ ಇದೆ. ಧಾರವಾಡ ಜಿಲ್ಲೆಯಲ್ಲಿಯೇ ಒಂದು ಲಕ್ಷ ಹೆಕ್ಟೇರ್‌ನಲ್ಲಿ ಹೆಸರುಕಾಳಿನ ಕೃಷಿ ಮಾಡಲಾಗುತ್ತಿದ್ದು, ಸುಮಾರು ಶೇ.60ರಷ್ಟು ರೈತರು ಬೇಗ ಬಿತ್ತನೆ ಮಾಡಿದ್ದಾರೆ” ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ? ಚಿಂತಾಮಣಿ | ಆಫ್ರಿಕನ್ ಜ್ವರ; ನೂರಾರು ಹಂದಿಗಳ ಕೆರೆಗೆ ಬಿಸಾಡಿದ ಮಾಲೀಕ
“ಇದು ನಿರ್ಣಾಯಕ ಸುಗ್ಗಿಯ ಅವಧಿ. ಆದರೆ ನಿರಂತರ ಮಳೆಯಿಂದ ರೈತರಲ್ಲಿ ಕಳವಳ ಉಂಟಾಗಿದ್ದು, ಹೆಸರುಕಾಳು, ಉದ್ದು ಜತೆಗೆ, ಸೋಯಾ ಮತ್ತು ಮೆಕ್ಕೆಜೋಳ ಕೂಡ ಮಳೆ ಹಾನಿಯಾಗಬಹುದಾದ ಸಾಧ್ಯತೆಗಳಿವೆ” ಎಂದಿದ್ದಾರೆ.

ಕಲಬುರಗಿ ಜಿಲ್ಲೆಯ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, “ಅತಿವೃಷ್ಟಿಯಿಂದ ಹತ್ತಿ, ತೊಗರಿ, ಹೆಸರು, ಸೋಯಾಬಿನ್ ಹಾನಿಯಾಗಿದೆ. ಸಾಲ ಸೂಲ ಮಾಡಿ ಬೆಳೆದ ಬೆಳೆ ಕೈಗೆ ಬಾರದೆ ಹಾನಿಯಾಗಿದೆ. ಬೀಜ, ರಸಗೊಬ್ಬರ, ಯೂರಿಯಾ ಔಷಧಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ ಅನ್ನದಾತನಿಗೆ ಆರ್ಥಿಕ ನಷ್ಟ ಎದುರಾಗಿದೆ. ಅತಿವೃಷ್ಟಿ-ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರು ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ಕೊಡಬೇಕು. ಹಿಂದಿನ ವರ್ಷದ 315 ಕೋಟಿ ರೂಪಾಯಿ ಬೆಳೆವಿಮೆ ಹಣ ಬಿಡುಗಡೆ ಮಾಡಿ ರೈತರ ಖಾತೆಗೆ ಜಮೆ ಮಾಡಬೇಕು” ಎಂದು ಆಗ್ರಹಿಸಿದರು.
ನಿರಂತರ ಮಳೆಯಿಂದ ಬೆಳೆಯನ್ನು ಕಳೆದುಕೊಂಡಿರುವ ರೈತರು ಕಂಗಾಲಾಗಿರುವ ಇಂತಹ ಹೊತ್ತಿನಲ್ಲಿ ಸರ್ಕಾರ ರೈತರ ಕೈ ಹಿಡಿಯುವುದು ಅನಿವಾರ್ಯವಾಗಿದೆ. ʼರೈತ ದೇಶದ ಬೆನ್ನೆಲುಬುʼ ಎಂಬ ಮಾತನ್ನು ಕೇವಲ ಘೋಷವಾಕ್ಯವಾಗಿ ಬಳಸದೆ, ವಾಸ್ತವವಾಗಿ ರೈತರನ್ನು ಬೆಂಬಲಿಸುವ ಮೂಲಕ ದೇಶದ ಬೆನ್ನೆಲುಬನ್ನು ಬಲಪಡಿಸಬೇಕು. ದೇಶ ಕೃಷಿ ಪ್ರಧಾನವಾಗಿರುವುದರಿಂದ ಸರ್ಕಾರಗಳು ರೈತರಿಗೆ, ಅವರ ಅನುಕೂಲ ಹಾಗೂ ಬೆಳವಣಿಗೆಗೆ ಮೊದಲ ಆದ್ಯತೆ ನೀಡಬೇಕು.





