ಧರ್ಮಸ್ಥಳದ ಸೌಜನ್ಯ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ವಿಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಎಂ ಡಿಗೆ ನೋಟಿಸ್ ನೀಡಿದ ಪೊಲೀಸರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸಮೀರ್ ಅವರನ್ನು ಬಂಧಿಸದಂತೆ ತಡೆ ನೀಡಿದೆ.
“ದೂತ ಸಮೀರ್” ಅವರಿಗೆ ಪೊಲೀಸರು ಮನೆಗೆ ಬಂದು ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಲೈವ್‌ನಲ್ಲಿ ಮಾಹಿತಿ ನೀಡಿರುವ ಸಮೀರ್, “ಪೊಲೀಸರು ನನ್ನ ನಿವಾಸಕ್ಕೆ ಆಗಮಿಸಿ ಬಂಧನಕ್ಕೆ ಮುಂದಾಗಿದ್ದರು. ಆದರೆ ನಾನು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ ಬಳಿಕ ನೋಟಿಸ್ ನೀಡಿ ಹಿಂದಿರುಗಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಸಮೀರ್ 35 ಲಕ್ಷ ತಗೊಂಡು ವಿಡಿಯೋ ಮಾಡಿದ್ರ?
ಇದೀಗ ಬಂಧನದಿಂದ, ವಿಚಾರಣೆಯಿಂದ ಸಮೀರ್‌ಗೆ ಹೈಕೋರ್ಟ್ ರಿಲೀಫ್ ನೀಡಿದೆ ಎಂದು ವರದಿಯಾಗಿದೆ. “ಪೊಲೀಸ್ ಠಾಣೆಗೆ ಕರೆಯುವ ಹಾಗಿಲ್ಲ. ಬಂಧಿಸುವಂತಿಲ್ಲ” ಎಂದು ಆದೇಶಿಸಿರುವ ಹೈಕೋರ್ಟ್ ಕಾನೂನು ಉಲ್ಲಂಘಿಸಿ ನೋಟಿಸ್ ನೀಡಿದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಈ ನಡುವೆ ಯೂಟ್ಯೂಬರ್ ಸಮೀರ್ ಎಂ ಡಿ ವಿರುದ್ಧ ಬಳ್ಳಾರಿಯ ಕೌಲ್‌ಬಝಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ವಿಡಿಯೋವನ್ನು ಮೂಲಕ ಧರ್ಮಸ್ಥಳ ಮತ್ತು ಅಲ್ಲಿನ ಧರ್ಮಾಧಿಕಾರಿಗಳ ಮೇಲೆ ನಂಬಿಕೆ ಹೊಂದಿರುವ ಜನರ ಭಾವನೆಗೆ ಧಕ್ಕೆಯಾಗುವಂತೆ ಮಾಡಲಾಗಿದೆ ಎಂದು ಪೊಲೀಸರು ತಾವಾಗಿಯೇ ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಕನ್ನಡ ಯೂಟ್ಯೂಬರ್ ಸಮೀರ್‌ನಿಂದಾಗಿ ಮತ್ತೆ ಸುದ್ದಿಯಾದ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣ: ಎಡಿಜಿಪಿಯಿಂದ ನೋಟಿಸ್!
ಆರೋಪಿಗಳು ಯಾರೆಂದು ಕುಟುಂಬಸ್ಥರು, ಸ್ಥಳೀಯರು ಹೇಳುತ್ತಿದ್ದರೂ ಕೂಡಾ ಇಂದಿಗೂ ನ್ಯಾಯಸಿಗದೆ, ಬಗೆಹರಿಯದೆಯೇ ಉಳಿದಿರುವ ಧರ್ಮಸ್ಥಳದ ಸೌಜನ್ಯ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಯೂಟ್ಯೂಬರ್ ಸಮೀರ್ ದೀರ್ಘವಾದ, ವಿವರವಾದ ವಿಡಿಯೋವನ್ನು ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಮತ್ತೆ ಸೌಜನ್ಯ ಪ್ರಕರಣ ಮುನ್ನಲೆಗೆ ಬಂದಿದೆ.
ಈ ಬೆನ್ನಲ್ಲೇ ಸಮೀರ್‌ಗೆ ಬೆದರಿಕೆ ಕರೆಗಳೂ, ಕಾಮೆಂಟ್‌ಗಳು ಕೂಡಾ ಬಂದಿದೆ. ಸಮೀರ್ ಪರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳೂ ಹರಿದಾಡುತ್ತಿದೆ. ಇವೆಲ್ಲವುದರ ನಡುವೆ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಿದ್ದಾರೆ. ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ, ಜಿಲ್ಲಾ ಪೊಲೀಸ್ ವಿಭಾಗದಲ್ಲಿ ರಚನೆಯಾಗಿರುವ ಸಾಮಾಜಿಕ ಜಾಲತಾಣಗಳ ನಿಗಾ ಘಟಕಗಳನ್ನು ಚುರುಕುಗೊಳಿಸುವಂತೆ ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೀಗ ಸಮೀರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.





