ಹಿರಿಯಡಕ: “ಆರಂಭದ ಕುತೂಹಲ, ಅನಂತರದ ಹಂಬಲ, ಕೊನೆಗೆ ಬಿಟ್ಟಿರಲಾರದ ಚಪಲಕ್ಕೆ ತಳ್ಳಿ ನಿಮ್ಮನ್ನೇ ಆಪೋಶನ ತೆಗೆದುಕೊಳ್ಳುವ ಮಾದಕ ವಸ್ತುಗಳ ಮೋಹದ ಬಲೆಗೆ ಬೀಳದೆ ನಿಮ್ಮ ಬದುಕು ಮತ್ತು ಸಮಾಜವನ್ನು ಕಾಪಾಡುವ ಎಚ್ಚರವನ್ನು ಕಳೆದುಕೊಳ್ಳಬೇಡಿ” ಎಂದು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ಹೇಳಿದರು.
ಅವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಾದಕ ವ್ಯಸನ ತಡೆ ಸಮಿತಿ ಆಯೋಜಿಸಿದ್ದ ಮಾದಕ ವ್ಯಸನ ಜಾಗೃತಿ ಉಪನ್ಯಾಸ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾದಕ ವ್ಯಸನ ತಡೆ ಸಮಿತಿ ಸಂಚಾಲಕಿ ಅಪರ್ಣ ಕೆ.ಯು ಕಾರ್ಯಕ್ರಮವನ್ನು ಸಂಯೋಜಿಸಿ, ಪ್ರದರ್ಶಿತ ಸಾಕ್ಷ್ಯಚಿತ್ರದ ಆಶಯವನ್ನು ವಿವರಿಸಿದರು. ವಿದ್ಯಾರ್ಥಿಗಳಾದ ಈರಬಸು ಕುಂಬಾರ ಮತ್ತು ದಿವ್ಯಶ್ರೀ ಅವರು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯಲತಾ ಪಿ., ಐಕ್ಯುಎಸಿ ಸಂಚಾಲಕ ಡಾ. ಲಿತಿನ್ ಬಿ.ಎಂ ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಂದೀಶ್ ಕುಮಾರ್ ಕೆ.ಸಿ ಉಪಸ್ಥಿತರಿದ್ದರು.





