ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಕಳೆದ ಜನವರಿ 7ರಂದು ಸೂಳೆಮುರ್ಕಿ ಕ್ರಾಸ್ ಬಳಿ ನಡೆದಿದ್ದ ಕಾರು ದಹನ ಪ್ರಕರಣವು ಈಗ ಬೆಚ್ಚಿಬೀಳಿಸುವ ಸತ್ಯವನ್ನು ಹೊರಹಾಕಿದೆ.
ಆರಂಭದಲ್ಲಿ ಇದೊಂದು ಆಕಸ್ಮಿಕ ಅಪಘಾತ ಎಂದು ಭಾವಿಸಲಾಗಿತ್ತಾದರೂ, ಪೊಲೀಸರ ಚುರುಕಿನ ತನಿಖೆಯಿಂದ ಇದು ಪೂರ್ವನಿಯೋಜಿತವಾಗಿ ನಡೆದ ‘ಡಬಲ್ ಮರ್ಡರ್’ ಎಂಬುದು ಸಾಬೀತಾಗಿದೆ. ಸಿದ್ದಾಪುರ ಮೂಲದ ಸಹೋದರರಾದ ಮಂಜುನಾಥ ಹಸ್ಲರ್ ಮತ್ತು ಚಂದ್ರಶೇಖರ್ ಹಸ್ಲರ್ ಅವರನ್ನು ಹಣದ ಆಸೆಗಾಗಿ ಬಲಿಪಡೆಯಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು ನೀಡಿರುವ ಮಾಹಿತಿಯಂತೆ, ಈ ಕೊಲೆ ಕೃತ್ಯದ ಹಿಂದೆ ಪ್ರಮೋದ್ ನಾಯ್ಕ ಎಂಬಾತನ ಕೈವಾಡವಿದೆ. ಆರೋಪಿ ಪ್ರಮೋದ್ ಹಾಗೂ ಮೃತ ಸಹೋದರರ ನಡುವೆ ಸುಮಾರು 5 ಲಕ್ಷ ರೂಪಾಯಿಗಳ ಹಣಕಾಸಿನ ವ್ಯವಹಾರವಿತ್ತು.
ಈ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ ಮತ್ತು ಇನ್ಶುರೆನ್ಸ್ ಹಣವನ್ನು ಪಡೆಯುವ ದುರಾಲೋಚನೆಯಿಂದ ಪ್ರಮೋದ್ ಈ ಭೀಕರ ಸಂಚು ರೂಪಿಸಿದ್ದನು. ಪ್ರಮೋದ್ ನಾಯ್ಕ ಮೃತರಾದ ಮಂಜುನಾಥ ಮತ್ತು ಚಂದ್ರಶೇಖರ್ ಅವರಿಗೆ ಕೀಟನಾಶಕ ಮಿಶ್ರಿತ ಮದ್ಯವನ್ನು ಕುಡಿಸಿದ್ದಾನೆ.
ವಿಷದ ಪ್ರಭಾವದಿಂದ ಅವರಿಬ್ಬರೂ ಪ್ರಜ್ಞೆ ತಪ್ಪಿ ಮೃತಪಟ್ಟ ನಂತರ, ಮೃತದೇಹಗಳನ್ನು ಕಾರಿನೊಳಗೆ ಇರಿಸಿ ಸೂಳೆಮುರ್ಕಿ ಕ್ರಾಸ್‌ಗೆ ಸಾಗಿಸಿದ್ದಾನೆ. ಅಲ್ಲಿ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚುವ ಮೂಲಕ, ಇಡೀ ಘಟನೆಯನ್ನು ಆಕಸ್ಮಿಕ ಅಪಘಾತದಂತೆ ಬಿಂಬಿಸಲು ಪ್ರಯತ್ನಿಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ಅಂಕೋಲಾ | ಸೋಶಿಯಲ್ ಮೀಡಿಯಾ ಟ್ರೋಲ್ ಎಫೆಕ್ಟ್: ಪಿಕಳೆ ನರ್ಸಿಂಗ್ ಹೋಂನ ರಾಜು ಪಿಕಳೆ ಆತ್ಮಹತ್ಯೆ
ಕಾರು ಹಚ್ಚುವ ಸಂದರ್ಭದಲ್ಲಿ ಆರೋಪಿ ಪ್ರಮೋದ್ ಕೈಕಾಲುಗಳಿಗೂ ಸುಟ್ಟ ಗಾಯಗಳಾಗಿದ್ದವು. ಘಟನೆಯ ನಂತರ ಆತ ಊರಿನಲ್ಲಿ ಕಾಣಿಸಿಕೊಳ್ಳದೆ ತಲೆಮರೆಸಿಕೊಂಡಿದ್ದು ಪೊಲೀಸರ ಸಂಶಯಕ್ಕೆ ಕಾರಣವಾಗಿತ್ತು. ಮೃತರ ಇನ್ನೊಬ್ಬ ಸಹೋದರ ಉಮೇಶ್ ಹಸ್ಲರ್ ಅವರು ನೀಡಿದ ದೂರು ಮತ್ತು ಆರೋಪಿಯ ಮೈಮೇಲಿದ್ದ ಗಾಯದ ಗುರುತುಗಳು ಪ್ರಕರಣದ ಸತ್ಯಾಂಶವನ್ನು ಬಯಲಿಗೆಳೆಯಲು ಪ್ರಮುಖ ಸುಳಿವುಗಳಾದವು.
ಪ್ರಮುಖ ಆರೋಪಿ ಪ್ರಮೋದ್ ನಾಯ್ಕನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಈ ಕೃತ್ಯದಲ್ಲಿ ಆತನ ಸ್ನೇಹಿತರಾದ ರತ್ನಾಕರ ನಾಯ್ಕ ಮತ್ತು ಹೇಮಂತ್ ಎಂಬುವವರು ಸಾಥ್ ನೀಡಿರುವುದು ಬೆಳಕಿಗೆ ಬಂದಿದೆ.
ಸದ್ಯ ಪೊಲೀಸರು ಈ ಮೂವರನ್ನೂ ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸುಟ್ಟು ಕರಕಲಾಗಿದ್ದ ಮೃತದೇಹಗಳು ಮಂಜುನಾಥ ಮತ್ತು ಚಂದ್ರಶೇಖರ್ ಅವರದ್ದೇ ಎಂದು ಈಗ ಅಧಿಕೃತವಾಗಿ ದೃಢಪಟ್ಟಿದೆ.





